ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ತಂಡದ ಆಟಗಾರರಿಗೆ ಕೋವಿಡ್ ಲಕ್ಷಣಗಳು ಸೌಮ್ಯ

Last Updated 9 ಆಗಸ್ಟ್ 2020, 11:48 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ನಾಲ್ವರು ಆಟಗಾರರಿಗೆ ಕೋವಿಡ್ –19 ಸೋಂಕಿನ ಸೌಮ್ಯ ಲಕ್ಷಣಗಳಿವೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನ ಸಾಯ್‌ನಲ್ಲಿರುವಹಾಕಿ ತಂಡದ ನಾಯಕ ಮನ್‌ಪ್ರೀತ್, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರ್ಯಾಗ್‌ ಫ್ಲಿಕರ್ ವರುಣ ಕುಮಾರ್ ಮತ್ತು ಗೋಲ್‌ಕೀಪರ್ ಕೃಷ್ಣಬಹಾದ್ದೂರ್ ಪಾಠಕ್ ಅವರಿಗೆ ಕೊರನಾ ಸೋಂಕು ಇರುವುದು ಈಚೆಗೆ ದೃಢಪಟ್ಟಿತ್ತು. ಅವರಿಗೆ ಸಾಯ್‌ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರನ್ನೂ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ.

’ಆಟಗಾರರಿಗೆ ಉತ್ತಮ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಅವರ ದೇಹದ ಉಷ್ಣತೆ, ಆಮ್ಲಜನಕದ ಪ್ರಮಾಣವು ಉತ್ತಮವಾಗಿರುವಂತೆ ನಿರ್ವಹಿಸಲಾಗುತ್ತಿದೆ. ಅವರಿಗೆ ಸೌಮ್ಯವಾದ ಲಕ್ಷಣಗಳಿವೆ‘ ಎಂದು ರಾಜ್ಯ ಸರ್ಕಾರನೇಮಿಸಿರುವ ವೈದ್ಯ ಡಾ. ಎಚ್‌.ಆರ್. ಅವಿನಾಶ್ ತಿಳಿಸಿದ್ದಾರೆ. ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

’ಒಬ್ಬರಿಗೆ ಮಾತ್ರ ಸ್ವಲ್ಪ ಜ್ವರ ಇದೆ. ಉಳಿದ ನಾಲ್ವರಿಗೆ ಇಲ್ಲ. ರೋಗನಿರೋಧಕ ಸಾಮರ್ಥ್ಯ ವೃದ್ಧಿಯ ಚಿಕಿತ್ಸೆ ಮತ್ತು ಕೆಲವು ಔಷಧಿಗಳನ್ನು ನೀಡುತ್ತಿದ್ದೇವೆ‘ ಎಂದು ಅವಿನಾಶ್ ಹೇಳಿದ್ದಾರೆ.

’ನಾನು ಐವರು ಆಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ. ಸಾಯ್‌ನಲ್ಲಿ ಉತ್ತಮ ವ್ಯವಸ್ಥೆಗಳನ್ನು ಮಾಡಿದೆ. ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ. ಆಟಗಾರರಿಗೆ ಸಾಯ್‌ ಕೇಂದ್ರದ ಅಡುಗೆಮನೆಯಿಂದಲೇ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿ ಕೊಡಲಾಗುತ್ತಿದೆ‘ ಎಂದು ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT