ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ಫಿಟ್‌ನೆಸ್‌ಗೂ ಸೈ

Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಮತ್ತೆ ಮತ್ತೆ ಆಟದಲ್ಲಿ ಪುಟಿದೇಳುವಂತೆ ಮಾಡಿದ್ದರ ಹಿಂದೆ ದೃಢ ಮನಸ್ಸಷ್ಟೆ ಅಲ್ಲ ಸದೃಢ ಕಾಯವೂ ದೊಡ್ಡ ಮಟ್ಟದ ಪಾತ್ರ ವಹಿಸಿದೆ.

ದೇಹದಾರ್ಢ್ಯವೆಂಬುದು ಕ್ರೀಡಾಪಟುವಿಗೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡಿರುವ ಅವರು ವ್ಯಾಯಾಮ ಮತ್ತು ಪಥ್ಯದ ವಿಷಯಗಳಲ್ಲಿ ಕಟ್ಟುನಿಟ್ಟು. ಈ ಎರಡನ್ನೂ ಅವರು ಚಾಚೂ ತಪ್ಪದೇ ಪಾಲಿಸುತ್ತಾರೆ.ವಾರದಲ್ಲಿ ಆರು ದಿನಗಳ ಕಾಲ ಕಡ್ಡಾಯವಾಗಿ ವ್ಯಾಯಾಮ ಮಾಡುತ್ತಾರೆ. ಒಂದು ದಿನ ಮಾತ್ರ ವಿಶ್ರಾಂತಿ ಪಡೆಯುತ್ತಾರೆ.

ಬ್ಯಾಡ್ಮಿಂಟನ್‌ ಆಡಲು ಕಾಲು ಮತ್ತು ಕೈಗಳಿಗೆ ಹೆಚ್ಚಿನ ಶಕ್ತಿ ಅಗತ್ಯವಿರುವುದರಿಂದ ಈ ಅಂಗಗಳನ್ನು ಕೇಂದ್ರೀಕರಿಸಿ ಕೆಲವು ವ್ಯಾಯಾಮಗಳನ್ನು ಮಾಡುತ್ತಾರೆ. ಕೈಮತ್ತು ತೋಳಿನ ಭಾಗದಲ್ಲಿ ಕೊಬ್ಬಿನಾಂಶ ಶೇಖರಣೆಯಾಗದಂತೆ ಗಮನ ಹರಿಸುವ ವ್ಯಾಯಾಮವೂ ಇರುತ್ತದೆ. ಸತತವಾಗಿ ಬ್ಯಾಟು ಹಿಡಿದು ನಿಲ್ಲಲು ಬೇಕಾಗುವ ಕ್ಷಮತೆಯನ್ನು ಈ ವ್ಯಾಯಾಮಗಳು ಒದಗಿಸುತ್ತವೆ.

ಬಸ್ಕಿ ಹೊಡೆಯುವುದು, ವೇಟ್‌ಲಿಫ್ಟಿಂಗ್‌, ಕಾರ್ಡಿಯೊ, ಸೇನೆಯಲ್ಲಿ ಮಾಡುವ ಕೆಲವು ವ್ಯಾಯಾಮಗಳನ್ನು ತಪ್ಪದೇ ಮಾಡುವುದರಿಂದ ದೇಹದ ದೃಢತೆ ಹೆಚ್ಚುತ್ತದೆ. ಮಾಂಸಖಂಡಗಳು ಮತ್ತು ಸ್ನಾಯುಗಳ ಬಲವರ್ಧನೆಗೂ ಇದು ಪೂರಕವಾಗಿರುತ್ತದೆ.

ಡಯೆಟ್‌: ದಿನ ಹೇಗಾದರೂ ಇರಲಿ; ಎಷ್ಟಾದರೂ ಕೆಲಸವಿರಲಿ. ಆದರೆ, ಬೆಳಗಿನ ಉಪಾಹಾರ ಮಾತ್ರ ಪರಿಪೂರ್ಣವಾಗಿರಬೇಕು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು ಸೈನಾ.ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸುವುದಿಲ್ಲ ಈ ಬ್ಯಾಡ್ಮಿಂಟನ್‌ ತಾರೆ. ಬೆಳಗಿನ ಉಪಾಹಾರದಲ್ಲಿ ಬ್ರೌನ್‌ ಬ್ರೆಡ್‌ ಮತ್ತು ಮೊಟ್ಟೆಯ ಬಿಳಿಯ ಭಾಗ ಕಡ್ಡಾಯವಿರುತ್ತದೆ.

ನಿತ್ಯಮಧ್ಯಾಹ್ನದ ಊಟಕ್ಕೆ ಎರಡು ರೋಟಿ, ದಾಲ್‌, ತರಕಾರಿ ಪಲ್ಯ, ಹುರಿದ ಕೋಳಿ ಮಾಂಸ, ಲಸ್ಸಿ ಇರುತ್ತದೆ.ಊಟವಾಗಿ ಎರಡು ತಾಸುಗಳ ನಂತರ ಪ್ರೋಟಿನ್‌ ಶೇಕ್‌ ಕುಡಿಯುತ್ತಾರೆ. ರಾತ್ರಿ ಊಟದ ಮೆನುವೂ ಮಧ್ಯಾಹ್ನದಂತೆ ಇರುತ್ತದೆ. ಆದರೆ, ಎರಡು ರೋಟಿಗೆ ಬದಲು ಒಂದು ರೋಟಿಯನ್ನು ತಿನ್ನುತ್ತಾರೆ.

ಆಲೂಗಡ್ಡೆ ಇಷ್ಟ:ಸೈನಾಗೆ ಚಿಕ್ಕಂದಿನಿಂದಲೂ ಆಲೂಗಡ್ಡೆಯೆಂದರೆ ಬಲು ಇಷ್ಟ. ಕ್ರೀಡಾ ಜಗತ್ತಿಗೆ ಕಾಲಿಟ್ಟ ಮೇಲೆ ಡಯೆಟ್‌ ದೃಷ್ಟಿಯಿಂದ ಆಲೂಗಡ್ಡೆಯ ಬಳಕೆ ಕಡಿಮೆ ಮಾಡಿದ್ದಾರೆ. ಅಪರೂಪಕ್ಕೊಮ್ಮೆ ಕಡಲೆಹಿಟ್ಟು ಬೆರೆಸಿ ತಯಾರಿಸಿದ ಆಲೂ ಖಾದ್ಯ, ಆಲೂಗೋಬಿ, ಆಲೂ ಮಟರ್‌ ಮತ್ತು ಆಲೂ ಕ್ಯಾಪ್ಸಿಕಂ ಅನ್ನು ಖುಷಿಯಿಂದ ತಿನ್ನುತ್ತಾರೆ. ಬ್ಯಾಡ್ಮಿಂಟನ್‌ಗಾಗಿ ಮೈದಾನದಲ್ಲಿ ಬೆವರಿಳಿಸುವ ಮುನ್ನ ಹಣ್ಣಿನ ಜ್ಯೂಸ್‌ ಮತ್ತು ನಾನಾ ಬಗೆಯ ಹಣ್ಣುಗಳ ಸೇವನೆಯನ್ನು ತಪ್ಪಿಸುವುದಿಲ್ಲ.

‌ನಿತ್ಯ ರಾತ್ರಿ 7.30ರ ಒಳಗೆ ಊಟ ಮುಗಿದಿರುತ್ತದೆ. ಮಲಗುವ ಇಷ್ಟು ಗಂಟೆಗಳಿಗೂ ಮೊದಲು ಊಟ ಮಾಡಬೇಕೆಂಬ ನಿಯಮವಾಗಿ ತಪ್ಪದೇ ಪಾಲಿಸುತ್ತಾರೆ. ಭಾನುವಾರ ಪಥ್ಯದ ನಿಯಮಗಳಿಗೆ ಸಡಿಲಿಕೆ ಇರುತ್ತದೆ. ಹಾಗಾಗಿ ಆ ದಿನ ಪರೋಟಾ ಮತ್ತು ಪನೀರ್‌ ಬಟರ್‌ ಮಸಾಲ ಇರುವ ಖಾದ್ಯವನ್ನು ತಿನ್ನುತ್ತಾರೆ.

ಊಟ, ವ್ಯಾಯಾಮದಷ್ಟೆ ನಿದ್ರೆಯು ದೇಹ ಫಿಟ್‌ ಆಗಿರಲು ಅಗತ್ಯ. ರಾತ್ರಿ 11 ರಿಂದ ಬೆಳಿಗ್ಗೆ 6ರವರೆಗೆ ನಿದ್ರೆ. ಯಾವುದಾದರೂ ವ್ಯಾಯಾಮವನ್ನು ಇಷ್ಟಪಟ್ಟು ಮಾಡಿದರೆ, ಫಲಿತಾಂಶ ಬೇಗ ದಕ್ಕಲು ಸಾಧ್ಯ ಎಂಬ ಮಾತುಗಳಲ್ಲಿ ಸೈನಾ ನಂಬಿಕೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT