ಬುಧವಾರ, ಆಗಸ್ಟ್ 17, 2022
27 °C

ಟೆನಿಸ್‌, ಸ್ಕ್ವಾಷ್ ಕೂಡಿದರೆ ಪ್ಯಾಡಲ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಸ್ಕ್ವಾಷ್‌ಗಾಗಿ ನಿರ್ಮಿಸಿದ ಅಂಗಣದಲ್ಲಿ ಟೆನಿಸ್ ಆಡಲು ಸಾಧ್ಯವೇ…? ಟೆನಿಸ್ ಅಂಗಣದಲ್ಲಿ ಸ್ಕ್ವಾಷ್ ಆಡುವುದುಂಟೇ…?

ಸಾಧ್ಯವುಂಟು. ಇಂಥ ವಿಶಿಷ್ಟ ಪ್ರಯೋಗದ ಮೂಲಕ ಮೂಡಿರುವ ‘ಪ್ಯಾಡಲ್’ ಕ್ರೀಡೆ ಈಗ ಜಗತ್ತಿನ ವಿವಿಧ ದೇಶಗಳಲ್ಲಿ ಹೆಸರು ಗಳಿಸಿದೆ. ನಮ್ಮ ದೇಶದಲ್ಲೂ ಪ್ಯಾಡಲ್ ಕ್ರೀಡೆ ಪ್ರಸಿದ್ಧಿ ಗಳಿಸುತ್ತಿದೆ. ಅಂದಹಾಗೆ ಭಾರತದಲ್ಲಿ ಈ ಕ್ರೀಡೆಯ ಕೇಂದ್ರ ಇರುವುದು ಬೆಂಗಳೂರಿನಲ್ಲಿ. ಸ್ಪೇನ್‌ನಲ್ಲಿ ಚಿಗುರೊಡೆದ ಪ್ಯಾಡಲ್ ಕ್ರೀಡೆ ಬೆಂಗಳೂರಿಗೆ ಕಾಲಿಟ್ಟಿದ್ದು 2016ರಲ್ಲಿ. ಈಗ ಸರ್ಜಾಪುರದ ‘ಪ್ಲೇ ಅರೆನಾ’ ಮತ್ತು ಸದಾಶಿವ ನಗರದ ‘ಪ್ಯಾಡಲ್ ಕೋರ್ಟ್‌’ನಲ್ಲಿ ಇದರ ಅಭ್ಯಾಸ ನಡೆಯುತ್ತಿದೆ.

ಬೆಂಗಳೂರಿಗೆ, ಆ ಮೂಲಕ ಭಾರತಕ್ಕೆ ಪ್ಯಾಡಲ್ ಕ್ರೀಡೆ ಕಾಲಿಟ್ಟ ಕಥೆಯನ್ನು ಕೋಚ್ ಹಾಗೂ ಸಂಘಟಕ ಡಿ.ಬಿ.ಸಂತೋಷ್ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಬಯಲಲ್ಲಿ ಆಡುವ ಸ್ಕ್ವಾಷ್ ಮತ್ತು ಗೋಡೆಗಳ ನಡುವೆ ನಡೆಯುವ ಟೆನಿಸ್ ಎಂದೇ ಹೇಳಲಾಗುವ ಪ್ಯಾಡಲ್ ಕ್ರೀಡೆ ಸ್ಪೇನ್‌ನ ಭಾವಿಷ್ ಮೂಲಕ ಇಲ್ಲಿಗೆ ಬಂತು. ಭಾವಿಷ್ ಅವರ ಗೆಳೆಯರಾಗಿರುವ ರಾನಿ ಸೆಹಗಲ್ ‘ಬುಲ್‌ ಡಾಗ್ ಪ್ಯಾಡಲ್’ ಎಂಬ ಸಂಸ್ಥೆಯನ್ನು ತೆರೆದು ಸರ್ಜಾಪುರದಲ್ಲಿ ಈ ಕ್ರೀಡೆಯನ್ನು ಮೊದಲು ಆರಂಭಿಸಿದರು. ನಂತರ ಸದಾಶಿವ ನಗರಕ್ಕೂ ವಿಸ್ತರಿಸಲಾಯಿತು. ಬೆಂಗಳೂರಿನಲ್ಲಿ ಆಗಾಗ ಸೌಹಾರ್ದ ಪಂದ್ಯಗಳು ನಡೆಯುತ್ತಿರುತ್ತವೆ. ಈಗಾಗಲೇ ಮೂರು ಟೂರ್ನಿಗಳನ್ನು ಆಯೋಜಿಸಲಾಗಿದೆ. ಭಾರತ ಪ್ಯಾಡಲ್ ಫೆಡರೇಷನ್‌ ಕೂಡ ಅಸ್ತಿತ್ವಕ್ಕೆ ಬಂದಿದೆ’ ಎನ್ನುತ್ತಾರೆ.

‘ಬೆಂಗಳೂರಿನಲ್ಲಿ ನೊಂದಾಯಿತ 1800 ಆಟಗಾರರು ಇದ್ದಾರೆ. 3200 ಮಂದಿ ಆಗಾಗ ‘ಹಾಗೇ ಸುಮ್ಮನೆ’ ಆಡುತ್ತಿರುತ್ತಾರೆ. ಟೆನಿಸ್‌ನಂತೆ ಇಲ್ಲಿ ರ‍್ಯಾಲಿಗಳು ಬೇಗ ಮುಕ್ತಾಯಗೊಳ್ಳುವುದಿಲ್ಲ. ಆದ್ದರಿಂದ ಇದು ಹೆಚ್ಚು ಕುತೂಹಲಕಾರಿಯಾಗಿದೆ. ಟೆನಿಸ್‌ಗೆ ಹೋಲಿಸಿದರೆ ಇದರಲ್ಲಿ ಕ್ಯಾಲೊರಿ ಹೆಚ್ಚು ಕರಗುತ್ತದೆ’ ಎಂದು ಐಟಿಎಫ್‌ ಮತ್ತು ಯುಎಸ್‌ಪಿಟಿಆರ್ ಪ್ರಮಾಣಪತ್ರ ಹೊಂದಿರುವ ಕೋಚ್‌ ಸಂತೋಷ್ ಅಭಿಪ್ರಾಯ.

ಆಟ ಹೇಗೆ? ಅಂಗಣ ಹೇಗಿರುತ್ತದೆ?
ಇದು ಡಬಲ್ಸ್‌ ವಿಭಾಗಕ್ಕೆ ಮಾತ್ರ ಸೀಮಿತವಾಗಿರುವ ಕ್ರೀಡೆ. ಇಲ್ಲಿ ಟೆನಿಸ್ ಮತ್ತು ಸ್ಕ್ವಾಷ್‌ನ ಒಗ್ಗೂಡುವಿಕೆ ಇದೆ. ಮೇಲ್ನೋಟಕ್ಕೆ ಟೆನಿಸ್‌ ಅಂಗಣದಂತಿರುವ ಸಣ್ಣ ಆವರಣದ ನಾಲ್ಕೂ ಬದಿಗಳಲ್ಲಿ ಗಾಜಿನ ಗೋಡೆಗಳು ಇರುತ್ತವೆ. ಸ್ಕ್ವಾಷ್‌ನಂತೆ, ಎದುರಾಳಿ ಹೊಡೆದ ಚೆಂಡು ಗಾಜಿನ ಗೋಡೆಗೆ ಬಡಿದು ವಾಪಸ್ ಆಗುವಾಗ ಆಚೆ ಅಂಗಣಕ್ಕೆ ಅದನ್ನು ಅಟ್ಟಬೇಕು. ಸ್ಕ್ವಾಷ್‌ನಲ್ಲಿ ಗೋಡೆಗೆ ಬಡಿದ ಚೆಂಡು ನೆಲಕ್ಕೆ ತಾಗಿದ ನಂತರ ಹೊಡೆಯಬೇಕು. ಆದರೆ ಪ್ಯಾಡಲ್‌ನಲ್ಲಿ ನೆಲ ಸೋಕುವ ಮೊದಲೇ ಹೊಡೆಯಬೇಕು. ಸ್ಕೋರಿಂಗ್ ಟೆನಿಸ್‌ನಂತೆಯೇ ಇರುತ್ತದೆ.


ಡಿ.ಬಿ.ಸಂತೋಷ್‌

‘ಅಮೆರಿಕ, ಇಂಗ್ಲೆಂಡ್‌, ದಕ್ಷಿಣ ಅಮೆರಿಕದಲ್ಲಿ ಈ ಕ್ರೀಡೆ ಈಗಾಗಲೇ ಪ್ರಸಿದ್ಧಿ ಗಳಿಸಿದೆ. ಏಷ್ಯಾದಲ್ಲಿ ಜಪಾನ್ ಮತ್ತು ಚೀನಾದಲ್ಲಿ ಪ್ರಚಲಿತದಲ್ಲಿದೆ. ಭಾರತ ಪ್ಯಾಡಲ್ ಫೆಡರೇಷನ್ ಸ್ವಿಟ್ಜರ್ಲೆಂಡ್‌ನಲ್ಲಿರುವ ಅಂತರರಾಷ್ಟ್ರೀಯ ಫೆಡರೇಷನ್‌ನಲ್ಲಿ ಸಂಯೋಜನೆಗೊಂಡಿದ್ದು ಭಾರತದಲ್ಲಿ ಕ್ರೀಡಾ ಇಲಾಖೆಯ ಮಾನ್ಯತೆಗಾಗಿ ಕಾಯುತ್ತಿದ್ದೇವೆ’ ಎಂದು ಫೆಡರೇಷನ್ ಅಧ್ಯಕ್ಷ ಸ್ನೇಹಾ ಅಬ್ರಹಾಂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು