ಶನಿವಾರ, ಸೆಪ್ಟೆಂಬರ್ 25, 2021
29 °C

Olympics: ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ದ್ವಿತೀಯಾರ್ಧದಲ್ಲಿ ಗಳಿಸಿದ ಮೂರು ಗೋಲುಗಳ ಬಲದಿಂದ ಭಾರತ ಹಾಲಿ ಚಾಂಪಿಯನ್ನರಿಗೆ ಆಘಾತ ನೀಡಿತು. ಈ ಮೂಲಕ ಒಲಿಂಪಿಕ್ಸ್ ಹಾಕಿಯ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. 2–2ರ ಡ್ರಾ ಸಾಧಿಸಿದ ಬ್ರಿಟನ್ ಮತ್ತು ನೆದರ್ಲೆಂಡ್ಸ್‌ ತಂಡಗಳು ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.

ಗುರುವಾರ ನಡೆದ ಪಂದ್ಯದಲ್ಲಿ ಭಾರತ 3–1ರಲ್ಲಿ ಅರ್ಜೆಂಟೀನಾವನ್ನು ಮಣಿಸಿತು. 43ನೇ ನಿಮಿಷದಲ್ಲಿ ವರುಣ್ ಕುಮಾರ್‌ ಗಳಿಸಿದ ಗೋಲಿನೊಂದಿಗೆ ಮುನ್ನಡೆ ಗಳಿಸಿದ ಭಾರತಕ್ಕೆ 58ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ಮತ್ತು 59ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ತಂದುಕೊಟ್ಟರು. ಅರ್ಜೆಂಟೀನಾ ತಂಡಕ್ಕಾಗಿ ಏಕೈಕ ಗೋಲು ಗಳಿಸಿದವರು ಕ್ಯಾಸೆಲಾ ಶುತ್ (48ನೇ ನಿಮಿಷ).

ಮೊದಲೆರಡು ಕ್ವಾರ್ಟರ್‌ಗಳಲ್ಲಿ ಎರಡೂ ತಂಡಗಳು ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. ಆದರೆ ಭಾರತದ ಆಕ್ರಮಣಕಾರಿ ಆಟ ಆರಂಭದಿಂದಲೇ ಎದುರಾಳಿ ತಂಡವನ್ನು ಕಂಗೆಡಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದ ಭಾರತ ಅನೇಕ ಬಾರಿ ಎದುರಾಳಿಗಳ ಆವರಣದಲ್ಲಿ ಆತಂಕ ಸೃಷ್ಟಿಸಿದರೂ ಗೋಲು ಗಳಿಸಲು ಆಗಲಿಲ್ಲ. 

ಮೂರನೇ ನಿಮಿಷದಲ್ಲೇ ತಂಡಕ್ಕೆ ಮೊದಲ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಸಿಮ್ರನ್‌ಜೀತ್ ಸಿಂಗ್ ಅವರ ಪಾಸ್‌ನಲ್ಲಿ ದಿಲ್‌ಪ್ರೀತ್ ಸಿಂಗ್ ಹೊಡೆದ ಚೆಂಡು ಅರ್ಜೆಂಟೀನಾ ಗೋಲ್‌ಕೀಪರ್ ಜುವಾನ್ ವಿವಾಲ್ಡಿ ತಡೆದರು.

ದ್ವಿತೀಯಾರ್ಧದಲ್ಲೂ ಭಾರತದ ಆಕ್ರಮಣ ಮುಂದುವರಿಯಿತು. ಮನ್‌ಪ್ರೀತ್ ನೇತೃತ್ವದ ಮಿಡ್‌ಫೀಲ್ಡ್ ವಿಭಾಗದವರು ಅಮೋಘ ಆಟವಾಡಿ ಎದುರಾಳಿಗಳಿಗೆ ಚೆಂಡು ಸಿಗದಂತೆ ತಡೆದರು. ಅರ್ಜೆಂಟೀನಾಗೆ ಆಗೊಮ್ಮೆ ಈಗೊಮ್ಮೆ ಪ್ರತಿ ದಾಳಿ ನಡೆಸುವ ಅವಕಾಶ ಸಿಕ್ಕಿದರೂ ಪಿ.ಆರ್‌.ಶ್ರೀಜೇಶ್ ಭಾರತ ತಂಡವನ್ನು ರಕ್ಷಿಸಿದರು. 

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಕೆಲವು ಅವಕಾಶಗಳನ್ನು ಕೈಚೆಲ್ಲಿತು. 35ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಸುವರ್ಣಾವಕಾಶಗಳನ್ನು ಕಳೆದುಕೊಂಡರು. ಕೆಲವೇ ನಿಮಿಷಗಳಲ್ಲಿ ಮಥಾಯಸ್ ರೇ ಚೆಂಡಿನೊಂದಿಗೆ ಮುನ್ನುಗ್ಗಿದರು. ಆದರೆ ಶ್ರೀಜೇಶ್ ಅವರನ್ನು ವಂಚಿಸಿ ಗುರಿ ಮುಟ್ಟಲು ಆಗಲಿಲ್ಲ. ತಂಡಕ್ಕೆ ಲಭಿಸಿದ ಮೂರನೇ ಪೆನಾಲ್ಟಿ ಕಾರ್ನರ್‌ನಲ್ಲಿ ವರುಣ್ ಗೋಲು ಗಳಿಸಿ ಸಂಭ್ರಮಿಸಿದರು. ಮೂರನೇ ಕ್ವಾರ್ಟರ್‌ನ ಕೊನೆಯಲ್ಲಿ ಲಭಿಸಿದ ಸತತ ಮೂರು ಪೆನಾಲ್ಟಿಗಳನ್ನು ಭಾರತ ಕೈಚೆಲ್ಲಿತು. 

ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷ ಬಾಕಿ ಇದ್ದಾಗ ದಿಲ್‌ಪ್ರೀತ್ ಸಿಂಗ್ ಅವರ ಆಕ್ರಮಣವನ್ನು ವಿವಾಲ್ಡಿ ತಡೆದರು. ಆದರೆ ವಾಪಸ್ ಬಂದ ಚೆಂಡನ್ನು ವಿವೇಕ್‌ ಗೋಲುಪೆಟ್ಟಿಗೆಯ ಒಳಗೆ ಸೇರಿಸಿದರು. ಎಂಟನೇ ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಗೋಲು ಮೂಡಿಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು