ಹಾಕಿ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರು

7

ಹಾಕಿ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರು

Published:
Updated:
Prajavani

ಮ್ಯೂನಿಚ್‌ (ಪಿಟಿಐ): ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಐರ್ಲೆಂಡ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ ಭಾರತ ಮಹಿಳೆಯರು ಸೌಹಾರ್ದ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದರು.

ಡ್ರ್ಯಾಗ್‌ಫ್ಲಿಕ್ಕರ್‌ ಗುರುಜೀತ್ ಕೌರ್‌ ಮೊದಲಾರ್ಧದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟಿದ್ದರು. ದ್ವಿತೀಯಾರ್ಧದಲ್ಲಿ ಐರ್ಲೆಂಡ್ ತಿರುಗೇಟು ನೀಡಿತು. ಎದೆಗುಂದದ ಭಾರತ ತಂಡದವರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಸ್ಪೇನ್ ವಿರುದ್ಧ ನಾಲ್ಕು ಪಂದ್ಯಗಳ ಸೌಹಾರ್ದ ಸರಣಿಯಲ್ಲಿ ಸಮಬಲ ಸಾಧಿಸಿದ್ದ ಭಾರತ ಭರವಸೆಯಿಂದಲೇ ಕಣಕ್ಕೆ ಇಳಿದಿತ್ತು. ಆಕ್ರಮಣಕಾರಿ ಆಟವಾಡಿದ ತಂಡಕ್ಕೆ ನಾಲ್ಕನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಲಭಿಸಿತ್ತು. ಆದರೆ ಗೋಲು ಗಳಿಸಲು ಎದುರಾಳಿ ತಂಡದ ರಕ್ಷಣಾ ವಿಭಾಗದವರು ಅವಕಾಶ ನೀಡಲಿಲ್ಲ.

18ನೇ ನಿಮಿಷದಲ್ಲಿ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ಐರ್ಲೆಂಡ್ ಗೋಲ್‌ಕೀಪರ್‌ ಎಮಾ ಬಕ್ಲಿ ಅವರನ್ನು ವಂಚಿಸಿದ ಗುರುಜೀತ್‌, ಚೆಂಡನ್ನು ಗುರಿ ಮುಟ್ಟಿಸಿ ಪ್ರವಾಸಿ ತಂಡದ ಪಾಳಯದಲ್ಲಿ ಸಂತಸದ ಹೊನಲು ಹರಿಸಿದರು.

ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಐರ್ಲೆಂಡ್‌ ದ್ವಿತೀಯಾರ್ಧದಲ್ಲಿ ಭಾರಿ ಸವಾಲು ಒಡ್ಡಿತು. ಉತ್ತಮ ತಂತ್ರಗಳೊಂದಿಗೆ ಇದಕ್ಕೆ ಉತ್ತರ ನೀಡಿದ ಭಾರತ 45ನೇ ನಿಮಿಷದಲ್ಲಿ ಎಡವಿತು. ಸಾರಾ ಹಾಕ್‌ಶಾ ಅವರ ದಾಳಿಯನ್ನು ತಡೆಯುವಲ್ಲಿ ಭಾರತದ ಗೋಲ್‌ಕೀಪರ್ ಸವಿತಾ ವಿಫಲರಾದರು.

ಅಂತಿಮ ಕ್ವಾರ್ಟರ್‌ನಲ್ಲಿ ಮುನ್ನಡೆಗಾಗಿ ಉಭಯ ತಂಡಗಳು ಭಾರಿ ಪ್ರಯತ್ನ ನಡೆಸಿದವು. ಐರ್ಲೆಂಡ್‌ನ ಆಕ್ರಮಣವನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಯಿತು. ಕೊನೆಯ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಐರ್ಲೆಂಡ್ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿತು. ಆದರೆ ಸವಿತಾ ಅವರ ಕೆಚ್ಚೆದೆಯ ಆಟ ಎದುರಾಳಿಗಳ ಕನಸನ್ನು ಭಗ್ನಗೊಳಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !