ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಭಾರತ ವೀರೋಚಿತ ವನಿತೆಯರ ತಂಡ ಸೆಮಿಫೈನಲ್‌ಗೆ

ಒಲಿಂಪಿಕ್ಸ್‌ ಹಾಕಿ: ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಅಚ್ಚರಿಯ ಸೋಲು
Last Updated 2 ಆಗಸ್ಟ್ 2021, 10:07 IST
ಅಕ್ಷರ ಗಾತ್ರ

ಟೋಕಿಯೊ: ವೀರೋಚಿತ ಆಟದ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ಮೊಟ್ಟ ಮೊದಲ ಬಾರಿ ಒಲಿಂಪಿಕ್ಸ್‌ ಹಾಕಿಯಲ್ಲಿ ಸೆಮಿಫೈನಲ್‌ ತಲುಪಿತು. ಮೂರು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಸೋಮವಾರ 1–0 ಗೋಲಿನಿಂದ ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿ ಇತಿಹಾಸ ಬರೆಯಿತು.

ಭಾರತ ಪುರುಷರ ತಂಡ ಸೆಮಿಫೈನಲ್‌ ತಲುಪಿದ ಮರುದಿನವೇ ಮಹಿಳೆಯರ ತಂಡ ತಾವೇನೂ ಕಮ್ಮಿಯಿಲ್ಲ ಎಂಬಂತೆ ಆಡಿ, ವಿಶ್ವದ ಎರಡನೇ ಕ್ರಮಾಂಕದ ತಂಡಕ್ಕೆ ಸೋಲಿನ ಕಹಿಯುಣಿಸಿದರು. ಭಾರತ ಪುರುಷರ ತಂಡ, ಭಾನುವಾರ 3–1 ಗೋಲುಗಳಿಂದ ಬ್ರಿಟನ್‌ ತಂಡವನ್ನು ಸದೆಬಡಿದು 49 ವರ್ಷಗಳ ನಂತರ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿತ್ತು.

ಭಾರತ ಮಹಿಳೆಯರ ತಂಡ 1980ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಆಗ ಆರು ತಂಡಗಳು ಮಾತ್ರ ಕಣದಲ್ಲಿದ್ದವು. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆದು ಅಗ್ರ ಎರಡು ತಂಡಗಳು ಫೈನಲ್‌ ಆಡಿದ್ದವು. ಹೀಗಾಗಿ ಇಂದಿನ ಸಾಧನೆಗೆ ಹೆಚ್ಚೇ ಮೌಲ್ಯ ಇದೆ.

ಈ ಪಂದ್ಯ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾಸುಲಭವಾಗಿ ಗೆಲ್ಲಬಹುದೆಂಬುದು ಹಾಕಿ ಪಂಡಿತರ ಲೆಕ್ಕಾಚಾರವಾಗಿತ್ತು. ಆದರೆ, ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನಲ್ಲಿರುವ ರಾಣಿ ರಾಂಪಾಲ್‌ ಪಡೆ ಕೆಚ್ಚೆದೆಯ ಆಟದ ಪ್ರದರ್ಶನ ನೀಡಿ, ‘ಹಾಕಿರೂಸ್‌‘ ತಂಡದ ಮೇಲೆ ಗೆದ್ದು ಬೀಗಿತು.

ಡ್ರ್ಯಾಗ್‌ ಫ್ಲಿಕರ್ ಗುರ್ಜಿತ್‌ ಕೌರ್‌ ಪಂದ್ಯದ 22ನೇ ನಿಮಿಷ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗುರಿತಪ್ಪಲಿಲ್ಲ. ಅಂತಿಮವಾಗಿ ಈ ಗೋಲು ನಿರ್ಣಾಯಕವಾಯಿತು. ಭಾರತ ತಂಡ, ಬುಧವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಆರ್ಜೆಂಟಿನಾ ತಂಡವನ್ನು ಎದುರಿಸಲಿದೆ.

ಭಾರತ ತಂಡದವರು ನಿಧಾನಗತಿಯಲ್ಲಿ ಕುದುರಿಕೊಂಡರೂ, ಪಂದ್ಯ ಮುಂದುವರಿದಂತೆ ವಿಶ್ವಾಸದಿಂದ ಆಡತೊಡಗಿದರು. ಆಸ್ಟ್ರೇಲಿಯಾಕ್ಕೆ ಗೋಲಿನ ಮೊದಲ ಅವಕಾಶ ದೊರೆತಿದ್ದು, ಅಮ್ರೊಸಿಯಾ ಮೆಲೋನ್ ವೃತ್ತದ ಒಳಗಿಂದ ಮಾಡಿದ ಗೋಲಿನ ಯತ್ನವನ್ನು ಗೋಲುರಕ್ಷಕಿ ಸವಿತಾ ತಡೆಯಲು ಮುಂದಾದರು. ಆದರೆ ಚೆಂಡು ಗೋಲ್‌ಪೋಸ್ಟ್‌ಗೆ ತಾಗಿ ಆಚೆಹೋಯಿತು.

ಇದರ ನಂತರ ಆಕ್ರಮಣದ ಆಟಕ್ಕಿಳಿದ ಭಾರತ ಮಹಿಳೆಯರು ಆಸ್ಟ್ರೇಲಿಯಾದ ರಕ್ಷಣಾ ಕೋಟೆಯತ್ತ ನುಗ್ಗಿದರು. ಆದರೆ ಮೊದಲ ಕ್ವಾರ್ಟರ್‌ನಲ್ಲಿ ಯತ್ನ ಫಲ ನೀಡಲಿಲ್ಲ. 9ನೇ ನಿಮಿಷ ವಂದನಾ ಕಟಾರಿಯಾ ಪಾಸ್‌ನಲ್ಲಿ ರಾಣಿ ರಾಂಪಾಲ್ ಅಟ್ಟಿದ ಚೆಂಡು ಗೋಲ್‌ಪೋಸ್ಟ್‌ನ ಹಿಂಭಾಗಕ್ಕೆ ಬಡಿಯಿತು. ಕೆಲ ನಿಮಿಷಗಳ ನಂತರ ಪ್ರತಿದಾಳಿಯಲ್ಲಿ ಆಸ್ಟ್ರೇಲಿಯಾದ ಬ್ರೂಕ್ ಪೆರಿಸ್‌ ಯತ್ನದಲ್ಲಿ ಚೆಂಡು ಸವಿತಾ ಅವರನ್ನು ದಾಟಿದರೂ ಅಂತಿಮವಾಗಿ ಗೋಲ್‌ಪೋಸ್ಟ್‌ ಆಚೆ ಹೋಯಿತು.

ಎರಡನೇ ಕ್ವಾರ್ಟರ್‌ನಲ್ಲಿ, ಆಸ್ಟ್ರೇಲಿಯಾಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶ ದೊರೆಯಿತು. 20ನೇ ನಿಮಿಷದಲ್ಲಿ ಆ ಯತ್ನವನ್ನು ಭಾರತೀಯ ಆಟಗಾರ್ತಿಯರು ಯಶಸ್ವಿಯಾಗಿ ತಡೆದರು.

ನಿರಾಶೆ ಮರೆಸಿದ ಗುರ್ಜಿತ್‌:

ಕೆಲವೇ ನಿಮಿಷಗಳ ನಂತರ ಗುರ್ಜಿತ್‌ ತಮಗೆ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಫ್ಲಿಕ್‌ ಮಾಡಿದಾಗ ಕೆಳಮಟ್ಟದಲ್ಲೇ ವೇಗವಾಗಿ ಧಾವಿಸಿದ ಚೆಂಡು ಎದುರಾಳಿ ಗೋಲಿನೊಳಕ್ಕೆ ಹೊಕ್ಕಿತು. ಇದುವರೆಗಿನ ಪಂದ್ಯಗಳಲ್ಲಿ ನಿರಾಶಾದಾಯಕ ನಿರ್ವಹಣೆ ತೋರಿದ್ದ ಗುರ್ಜಿತ್‌ ಅವೆಲ್ಲವನ್ನು ಮರೆಸುವ ರೀತಿ ಭಾರತದ ಪಾಳೆಯದಲ್ಲಿ ಸಂಭ್ರಮ ಮೂಡಿಸಿದರು. ಈ ಹಠಾತ್ ಹಿನ್ನಡೆಯಿಂದ ಕಾಂಗರೂಗಳ ಪಡೆ ಬೆಕ್ಕಸಬೆರಗಾಯಿತು.

ಇದರ ನಂತರ ಭಾರತದ ಆಟಗಾರ್ತಿಯರು ರಕ್ಷಣೆಯ ಕಡೆ ಗಮನ ನೀಡಿ ಆಸ್ಟ್ರೇಲಿಯಾದ ದಾಳಿಯನ್ನು ಹಿಮ್ಮೆಟ್ಟಿಸಲು ಹೆಚ್ಚು ಗಮನ ಕೊಟ್ಟರು. ಆಸ್ಟ್ರೇಲಿಯಾಕ್ಕೆ, ಭಾರತದ ಗೋಲಿನ ಬಳಿಯೇ ದೊರೆತ ಅವಕಾಶ ಒಂದರಲ್ಲಿ ಎಮಿಲಿ ಚಾಕರ್ಸ್‌ ಅವರ ಯತ್ನವನ್ನು ದೀಪ್‌ ಗ್ರೇಸ್‌ ಎಕ್ಕಾ ಸಕಾಲದಲ್ಲೇ ಸ್ಟಿಕ್‌ ಅಡ್ಡವಿಟ್ಟು ಭಗ್ನಗೊಳಿಸಿದರು.

ಆಸ್ಟ್ರೇಲಿಯಾ ತಂಡಕ್ಕೆ ಬೆನ್ನು ಬೆನ್ನಿಗೆ ಮೂರು ಬಾರಿ ಪೆನಾಲ್ಟಿ ಅವಕಾಶಗಳು ದಕ್ಕಿದರೂ, ಸವಿತಾ ಮತ್ತು ದೀಪ್‌ ಗ್ರೇಸ್‌ ನೇತೃತ್ವದ ಭಾರತೀಯರ ರಕ್ಷಣಾ ಕೋಟೆ ಭೇದಿಸಲು ಆಗಲಿಲ್ಲ. ಹಠ ಬಿಡದೇ ಆಸ್ಟ್ರೇಲಿಯಾ ದಾಳಿ ಮುಂದುವರಿಸಿದರೂ, ಭಾರತೀಯ ಆಟಗಾರ್ತಿಯರು ತಮ್ಮಲ್ಲಾ ಸಾಮರ್ಥ್ಯ ಪಣಕ್ಕೊಡ್ಡಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದರು.

ಕೊನೆಯ ಎಂಟು ನಿಮಿಷಗಳಲ್ಲಿ ಆಸ್ಟ್ರೇಲಿಯಾದ ದಾಳಿಗೆ ಫಲವಾಗಿ ನಾಲ್ಕು ಪೆನಾಲ್ಟಿ ಕಾರ್ನರ್‌ಗಳು ಒದಗಿದವು. ಆದರೆ ಭಾರತೀಯ ಆಟಗಾರ್ತಿಯರು ತಮಗೆ ಗೆಲುವಿನ ಇಂಥ ಸುಸಂದರ್ಭ ಕೈತಪ್ಪಬಾರದೆಂಬ ದೃಢಮನಸ್ಸಿನೊಡನೆ ಕೊನೆಗಳಿಗೆಯ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT