ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚಾಂಪಿಯನ್‌ಷಿಪ್‌| ಬಾಕ್ಸರ್‌ಗಳ ‘ಚಿನ್ನ’ದ ನಿರೀಕ್ಷೆ

ವಿಶ್ವ ಚಾಂಪಿಯನ್‌ಷಿಪ್‌: ಫೈನಲ್‌ನಲ್ಲಿ ಭಾರತದ ನಾಲ್ವರು
Last Updated 24 ಮಾರ್ಚ್ 2023, 19:21 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿ ಫೈನಲ್‌ಗೆ ಲಗ್ಗೆಯಿಟ್ಟಿರುವ ಭಾರತದ ಲವ್ಲಿನಾ ಬೊರ್ಗೊಹೈನ್‌, ನಿಖತ್ ಜರೀನ್, ನೀತು ಗಂಗಾಸ್‌ ಮತ್ತು ಸ್ವೀಟಿ ಬೂರಾ ಅವರು ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ.

ಇಲ್ಲಿಯ ಕೆ.ಡಿ. ಜಾಧವ್ ಒಳಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಈ ನಾಲ್ವರು ಬಾಕ್ಸರ್‌ಗಳು ತಮ್ಮ ಸೆಮಿಫೈನಲ್‌ಗಳಲ್ಲಿ ರೋಚಕ ಜಯ ಸಾಧಿಸಿ ಫೈನಲ್‌ ತಲುಪಿದ್ದರು.

52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ನಿಖತ್ ಅವರಿಗೆ ಎರಡನೇ ಬಾರಿ ವಿಶ್ವ ಕಿರೀಟ ಧರಿಸುವ ಅವಕಾಶವಿದೆ. ದಿಗ್ಗಜ ಬಾಕ್ಸರ್‌ ಮೇರಿ ಕೋಮ್‌ (ಆರು ಬಾರಿ) ನಂತರ ಈ ಸಾಧನೆ ಮಾಡುವ ಕಾತರದಲ್ಲಿ ಅವರಿದ್ದಾರೆ.

ಭಾನುವಾರ ನಡೆಯುವ ಫೈನಲ್‌ನಲ್ಲಿ ನಿಖತ್‌, ವಿಯೆಟ್ನಾಂನ ಗುಯೆನ್‌ ಥಿ ಟಾಮ್‌ ಅವರನ್ನು ಎದುರಿಸುವರು.

ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ (75 ಕೆಜಿ) ಮೊದಲ ಬಾರಿ ವಿಶ್ವ ಚಾಂಪಿಯನ್ ಆಗುವ ಹಂಬಲದಲ್ಲಿದ್ದು, ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಈ ಫೈನಲ್ ಬೌಟ್‌ ಕೂಡ ಭಾನುವಾರ ನಿಗದಿಯಾಗಿದೆ.

48 ಕೆಜಿ ವಿಭಾಗದ ಸ್ಪರ್ಧಿ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಅವರು ಚಿನ್ನದ ಪದಕದ ಸುತ್ತಿನಲ್ಲಿ ಶನಿವಾರ ಮಂಗೋಲಿಯಾದ ಲುತ್ಸಾಯಿಖಾನ್‌ ಅಲ್ಟಂಟ್‌ಸೆಟ್‌ಸೆಗ್‌ ಅವರಿಗೆ ಮುಖಾಮುಖಿಯಾಗುವರು.

81 ಕೆಜಿ ವಿಭಾಗದಲ್ಲಿ ಚಿನ್ನದ ಪದಕದ ಸುತ್ತು ತಲುಪಿರುವ ಸ್ವೀಟಿ ಬೂರಾ ಅವರಿಗೆ ಶನಿವಾರ ನಡೆಯುವ ಫೈನಲ್‌ ಬೌಟ್‌ನಲ್ಲಿ ಚೀನಾದ ವಾಂಗ್‌ ಲೀನಾ ಅವರ ಸವಾಲು
ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT