ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರದ ‘ಇನಿಂಗ್ಸ್‌’ ಮುಕ್ತಾಯಕ್ಕೆ ಸಿದ್ಧತೆ

ಕ್ರೀಡಾ ಸಾಮಗ್ರಿಗಳ ‘ಹ್ಯಾಟ್ರಿಕ್‌’, ‘ಚಾನ್ಸ್‌ಲೆಸ್‌’ ‘ಸಿಲ್ಲಿ ಪಾಯಿಂಟ್‌’ಗೆ ಆಗಸ್ಟ್‌ ಕೊನೆಯಲ್ಲಿ ಬೀಗ
Last Updated 10 ಜುಲೈ 2021, 21:48 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ದಶಕಗಳಿಂದ ಕ್ರೀಡಾ ಸಾಮಗ್ರಿಗಳ ಮಾರಾಟದಲ್ಲಿ ತೊಡಗಿಸಿಕೊಂಡಿರುವ ಒಬ್ಬರದೇ ಮಾಲೀಕತ್ವದ ಮೂರು ಮಳಿಗೆಗಳು ವ್ಯಾಪಾರದ ‘ಇನಿಂಗ್ಸ್’ಗೆ ಮುಕ್ತಾಯ ಹಾಡಲು ಸಜ್ಜಾಗಿವೆ. ಖ್ಯಾತ ಕ್ರಿಕೆಟ್ ಪಟುಗಳು ಉದ್ಘಾಟಿಸಿದ ಮತ್ತು ದೇಶದ ಪ್ರಮುಖ ಕ್ರೀಡಾಪಟುಗಳು ಸಂದರ್ಶಿಸಿರುವ ‘ಹ್ಯಾಟ್ರಿಕ್‌’, ‘ಚಾನ್ಸ್‌ಲೆಸ್‌’ ಹಾಗೂ ‘ಸಿಲ್ಲಿ ಪಾಯಿಂಟ್‌’ ಮಳಿಗೆಗಳ ಬಾಗಿಲು ಮುಂದಿನ ತಿಂಗಳ ಕೊನೆಯಲ್ಲಿ ಶಾಶ್ವತವಾಗಿ ಮುಚ್ಚಲಿದೆ.

ಕ್ರೀಡಾ ಪ್ರಿಯರಾಗಿದ್ದ ರವಿ ಸೋಂದಿ ಅವರು 1977ರಲ್ಲಿ ಬೆಂಗಳೂರಿನಲ್ಲಿ ಐದು ಮಳಿಗೆಗಳನ್ನು ತೆರೆದಿದ್ದರು. ಈ ಪೈಕಿ ಗುಪ್ತ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿದ್ದ ಮಳಿಗೆಗಳನ್ನು ಎರಡು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಗಾಂಧಿನಗರ, ಹೊಸ ಬಿಇಎಲ್ ರಸ್ತೆಯಲ್ಲಿ ಒಟ್ಟು ಮೂರು ಮಳಿಗೆಗಳು ಉಳಿದಿದ್ದವು. ಕೊರೊನಾದಿಂದಾಗಿ ವ್ಯಾಪಾರ ಕುಸಿದಿರುವಾಗಲೇ ರವಿ ಸೋಂದಿ ಅವರು ಈಚೆಗೆ ತೀರಿಹೋದರು. ಅವರ ಪುತ್ರ, ವಕೀಲ ಆದಿತ್ಯ ಸೋಂದಿ ಅವರಿಗೆ ವ್ಯಾಪಾರ ಮುನ್ನಡೆಸುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಮುಚ್ಚಲು ನಿರ್ಧರಿಸಲಾಗಿದೆ.

‘44 ವರ್ಷಗಳಿಂದ ಸಾಮಾಗ್ರಿಗಳ ಮಾರಾಟದ ಮೂಲಕ ಕ್ರೀಡಾಕ್ಷೇತ್ರದ ಸೇವೆ ಮಾಡಿದ್ದೇವೆ. ಕೊರೊನಾದ ಹೊಡೆತದಿಂದಾಗಿ ಎರಡು ವರ್ಷಗಳಿಂದ ವ್ಯಾಪಾರ ಕುಸಿದಿದೆ. ಚೇತರಿಸಿಕೊಳ್ಳಲು ಇನ್ನೂ ಕನಿಷ್ಠ ಒಂದೆರಡು ವರ್ಷವಾದರೂ ಬೇಕು. ಹೀಗಾಗಿ ಮಳಿಗೆಯನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ವ್ಯವಸ್ಥಾಪಕ ಈರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹ್ಯಾಟ್ರಿಕ್ ಮಳಿಗೆಯನ್ನು ಮಾಜಿ ಟೆಸ್ಟ್ ಕ್ರಿಕೆಟಿಗ ಅಜಿತ್ ವಾಡೇಕರ್ ಉದ್ಘಾಟಿಸಿದ್ದರು. ಸುನಿಲ್ ಗಾವಸ್ಕರ್ ಅವರಿಂದ ಸಿಲ್ಲಿ ಪಾಯಿಂಟ್‌ ಉದ್ಘಾಟಿಸಲಾಗಿತ್ತು. ರಾಹುಲ್ ದ್ರಾವಿಡ್‌, ವೆಂಕಟೇಶ ಪ್ರಸಾದ್‌, ರಾಬಿನ್ ಉತ್ತಪ್ಪ ಮುಂತಾದವರು ನಮ್ಮ ಗ್ರಾಹಕರಾಗಿದ್ದರು. ಈಗ ಬೀಗ ಜಡಿಯಲು ಬೇಸರವಾಗುತ್ತಿದೆ. ಆದರೆ ಪರಿಸ್ಥಿತಿ ಈ ರೀತಿ ಮಾಡಿದೆ’ ಎಂದು ಈರಪ್ಪ ಬೇಸರ ವ್ಯಕ್ತಪಡಿಸಿದರು.

‘ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳು ಮತ್ತಿತರರು ನಮ್ಮ ಪ್ರಮುಖ ಗ್ರಾಹಕರು. ಶಾಲೆಗಳು ಕಾರ್ಯಾಚರಿಸದ ಕಾರಣ ಕ್ರೀಡಾ ಶಿಬಿರಗಳು ನಡೆಯುತ್ತಿಲ್ಲ. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕೂಡ ಖರೀದಿಗೆ ಬರುತ್ತಿಲ್ಲ. ಈಜು ಕ್ರೀಡೆಗೆ ಸಂಬಂಧಿಸಿದ ಸಾಮಗ್ರಿಗಳು ಹೆಚ್ಚು ಮಾರಾಟವಾಗುತ್ತಿದ್ದವು. ರೆಸಾರ್ಟ್‌ಗಳಿಂದಲೂ ಬೇಡಿಕೆ ಇರುತ್ತಿತ್ತು. ಈಗ ಈಜು ಚಟುವಟಿಕೆ ನಿಂತಿರುವುದರಿಂದ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎಂದು ಅವರು ವಿವರಿಸಿದರು.

ಆದಾಯ ಕಡಿಮೆ; ವೆಚ್ಚ ಹೆಚ್ಚು
ಕೊರೊನಾ ಆಘಾತದ ನಡುವೆಯೇ ಆನ್‌ಲೈನ್ ವ್ಯಾಪಾರದ ಕಡೆಗೆ ಜನರು ವಾಲುತ್ತಿರುವುದು ಮತ್ತು ಆಕರ್ಷಕ ಸೌಲಭ್ಯಗಳ ದೊಡ್ಡ ಮಳಿಗೆಗಳು ಆರಂಭವಾಗುತ್ತಿರುವುದು ವ್ಯವಹಾರಕ್ಕೆ ಪೆಟ್ಟುಕೊಟ್ಟಿದೆ. ಹೀಗಾಗಿ ಆದಾಯ ಕಡಿಮೆಯಾಗುತ್ತಿದೆ. ವೆಚ್ಚದಲ್ಲಿ ಯಾವ ಬದಲಾವಣೆಯೂ ಇಲ್ಲ. 44 ಸಿಬ್ಬಂದಿಯ ವೇತನ, ವಿದ್ಯುತ್ ಬಿಲ್ ಇತ್ಯಾದಿಗಳಿಗೆ ತಿಂಗಳಿಗೆ ₹ 16 ಲಕ್ಷ ಬೇಕು. ಇದನ್ನು ಭರಿಸುವುದು ಕಷ್ಟ. ಸಿಬ್ಬಂದಿಗೆ ಎಲ್ಲ ಸೌಲಭ್ಯಗಳನ್ನು ನೀಡಿ ಕಳುಹಿಸಲು ನಿರ್ಧರಿಸಲಾಗಿದೆ. ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಕೊಟ್ಟು ಖಾಲಿ ಮಾಡಲಾಗುತ್ತಿದೆ. ಆಗಸ್ಟ್ ಕೊನೆಯ ವರೆಗೂ ಮಳಿಗೆಗಳು ತೆರೆದಿರುತ್ತವೆ.
-ಈರಪ್ಪ,ಮಳಿಗೆಗಳ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT