ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನ ಆತಂಕ: ಒಲಿಂಪಿಕ್ಸ್‌ಗೆ ಪಟ್ಟು, ಐಪಿಎಲ್‌ ಆತಂಕ ದುಪ್ಪಟ್ಟು

ಎಲ್ಲ ಫುಟ್‌ಬಾಲ್ ಪಂದ್ಯಗಳು ಮುಂದೂಡಿಕೆ
Last Updated 15 ಮಾರ್ಚ್ 2020, 21:34 IST
ಅಕ್ಷರ ಗಾತ್ರ

ಟೋಕಿಯೊ/ಮುಂಬೈ: ಕೊರೊನಾ ವೈರಸ್ ಹರಡುವ ಆತಂಕದಿಂದಾಗಿ ಶನಿವಾರ ಜಗತ್ತಿನಾದ್ಯಂತ ಇನ್ನಷ್ಟು ಕ್ರೀಡಾಕೂಟ, ಪಂದ್ಯಗಳನ್ನು ಮುಂದೂಡಲಾಗಿದೆ. ಆದರೆ ಒಲಿಂಪಿಕ್ಸ್‌ ನಡೆಸಿಯೇ ತೀರುತ್ತೇವೆ ಎಂದು ಜಪಾನ್ ಪ್ರಧಾನಿ ಜಿಂಜೊ ಅಬೆ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದ ಕಾರಣ ಪ್ರಾಂಚೈಸ್‌ಗಳ ಆತಂಕ ದುಪ್ಪಟ್ಟಾಗಿದೆ.

ಜುಲೈ ಕೊನೆಯ ವಾರದಲ್ಲಿ ಟೋಕಿಯೊದಲ್ಲಿ ನಡೆಸಲು ಉದ್ದೇಶಿಸಿರುವ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಸಕಾರಾತ್ಮಕ ಅಂಶಗಳೇ ತುಂಬಿದ್ದು ಕೋವಿಡ್‌ ವೈರಸ್‌ ಭೀತಿಯಿಂದ ಕೂಟವನ್ನು ಮುಂದೂಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ಕುರಿತು ಕುತೂಹಲಕಾರಿ ಚರ್ಚೆಗಳು ಕೂಡ ನಡೆಯುತ್ತಿವೆ. ಬಾರ್ಸಿಲೋನಾದಲ್ಲಿ ಒಲಿಂಪಿಕ್ಸ್‌ ಮ್ಯಾಸ್ಕಟ್‌ಗಳ ಕುಣಿತಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು ‘ಈ ಮ್ಯಾಸ್ಕಟ್‌ಗಳು ಒಲಿಂಪಿಕ್ಸ್ ಸಂದೇಶವನ್ನು ಹೊತ್ತು ದೇಶದಿಂದ ದೇಶಕ್ಕೆ ಪಯಣಿಸಲಿವೆಯೇ’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮತ್ತೊಬ್ಬ ವ್ಯಕ್ತಿ ‘ಜಾಗತಿಕ ಯುದ್ಧ ನಡೆದರೆ ಮಾತ್ರ ಒಲಿಂಪಿಕ್ಸ್‌ಗೆ ತೊಂದರೆಯಾಗುತ್ತದೆ’ ಎಂದು ಹೇಳಿದ್ದಾರೆ.

‘ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಆಯೋಜಕರು ಕೈಗೊಳ್ಳುವ ನಿರ್ಧಾರಗಳನ್ನು ತಕ್ಷಣ ಸಾರ್ವಜನಿಕರಿಗೆ ತಲುಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ’ ಎಂದು ಆಯೋಜನಾ ಸಮಿತಿ ತಿಳಿಸಿದೆ.

ಐಪಿಎಲ್ ಯಾವಾಗ?: ಮುಂದೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿ ಮತ್ತೆ ಆರಂಭವಾಗುವುದು ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಲಿಲ್ಲ. ಇದೇ 29ರಂದು ಆರಂಭವಾಗಬೇಕಾಗಿದ್ದ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ ಎಂದು ಬಿಸಿಸಿಐ ಶುಕ್ರವಾರ ತಿಳಿಸಿತ್ತು. ಶನಿವಾರ ಫ್ರಾಂಚೈಸ್ ಮಾಲೀಕರ ಜೊತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸಭೆ ನಡೆಸಿದ್ದರು.

ಸಭೆಯ ನಂತರ ಮಾತನಾಡಿದ ಸೌರವ್ ಗಂಗೂಲಿ ‘ಐಪಿಎಲ್ ನಡೆಯಲಿದೆ. ಏಪ್ರಿಲ್ 15ರಂದು ಆರಂಭವಾಗುವುದಾದರೆ ಆಗಲೇ 15 ದಿನಗಳು ಕಳೆದಿರುತ್ತವೆ. ಕಳೆದು ಹೋದ ದಿನಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಲಿಲ್ಲ. ಟೂರ್ನಿಯನ್ನು ‘ಚುಟುಕಾಗಿ’ ನಡೆಸುವ ಚಿಂತನೆಯೂ ಇದೆ’ ಎಂದು ತಿಳಿಸಿದರು.

‘ಪ್ರತಿ ವಾರ ಪರಿಸ್ಥಿತಿಯ ಅವಲೋಕನ ನಡೆಯಲಿದೆ. ಜಗತ್ತಿನಾದ್ಯಂತ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಂಡು ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ’ ಎಂದು ಅವರು ವಿವರಿಸಿದರು.

ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳು ಪಂದ್ಯಗಳಿಗೆ ಅನುಮತಿ ನಿರಾಕರಿಸಿರುವ ಕಾರಣ ಐದು ಬದಲಿ ಕ್ರೀಡಾಂಗಣಗಳನ್ನು ಗುರುತಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಕಿಂಗ್ಸ್ ಇಲೆವನ್ ಪಂಜಾಬ್‌ನ ನೆಸ್ ವಾಡಿಯಾ ‘ಸದ್ಯದ ಪರಿಸ್ಥಿತಿಯಲ್ಲಿ ಪಂದ್ಯಗಳು ಯಾವಾಗ ಆರಂಭವಾಗುತ್ತವೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಎರಡು–ಮೂರು ವಾರಗಳ ಕಾಲ ಕಾದುನೋಡಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು. ‘ಟೂರ್ನಿಗೆ ಸಂಬಂಧಿಸಿ ಆರರಿಂದ ಏಳು ಅಂಶಗಳ ಕುರಿತು ಚರ್ಚೆಯೂ ನಡೆದಿದೆ. ಫ್ರಾಂಚೈಸ್‌ ಮಾಲೀಕರು ಮಾನವೀಯತೆಗೆ ಆದ್ಯತೆ ನೀಡಿದ್ದು ಆರ್ಥಿಕತೆಗೆ ನಂತರದ ಸ್ಥಾನ ನೀಡಿದ್ದಾರೆ’ ಎಂದು ಪದಾಧಿಕಾರಿಯೊಬ್ಬರು ತಿಳಿಸಿದರು.

ಕೋಚ್‌ ತವರು ಪ್ರವಾಸ ರದ್ದು: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಶೊರ್ಡ್ ಮ್ಯಾರಿಜ್ ಅವರ ತವರಿನ ಪ್ರವಾಸ ರದ್ದಾಗಿದೆ. ಬೆಂಗಳೂರಿನ ಸಾಯ್ ದಕ್ಷಿಣ ವಲಯ ಕೇಂದ್ರದಲ್ಲಿ ನಡೆಯುತ್ತಿದ್ದ ಶಿಬಿರದಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ ಈಗ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮ್ಯಾರಿಜ್ ತಾಯ್ನಾಡು ನೆದರ್ಲೆಂಡ್ಸ್‌ಗೆ ಹೋಗಲು ಸಿದ್ಧರಾಗಿದ್ದರು. ಆದರೆ ವಿದೇಶ ಪ್ರವಾಸವನ್ನು ನಿರ್ಬಂಧಿಸಿರುವ ಕಾರಣ ಅವರಿಗೆ ಹೋಗಲು ಸಾಧ್ಯವಾಗಲಿಲ್ಲ.

ಫುಟ್‌ಬಾಲ್ ಪಂದ್ಯಗಳು ಮುಂದಕ್ಕೆ: ಐ–ಲೀಗ್ ಸೇರಿದಂತೆ ಎಲ್ಲ ಟೂರ್ನಿಗಳನ್ನು ಮುಂದೂಡಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಶನಿವಾರ ನಿರ್ಧರಿಸಿದೆ. ಹೀಗಾಗಿ ಭಾನುವಾರದಿಂದ ಈ ತಿಂಗಳ ಮಾರ್ಚ್‌ 31ರ ವರೆಗೆ ಯಾವುದೇ ಪಂದ್ಯಗಳು ನಡೆಯುವುದಿಲ್ಲ.

‘ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶನದ ಮೇರೆಗೆ ಎಲ್ಲ ಟೂರ್ನಿಗಳನ್ನು ಮುಂದೂಡಲಾಗಿದೆ’ ಎಂದುಪ್ರಕಟಣೆಯಲ್ಲಿ ಫೆಡರೇಷನ್‌ ತಿಳಿಸಿದೆ.

ಆಟಗಾರರ ಸಂದೇಶ

ಕೊರೊನಾ ವೈರಸ್ ಭೀತಿ ಹೆಚ್ಚುತ್ತಿದ್ದಂತೆ ಪ್ರಮುಖ ಆಟಗಾರರು ಸಾಮಾಜಿಕ ತಾಣಗಳ ಮೂಲಕ ಸಾರ್ವಜನಿಕರಿಗೆ ಸಂದೇಶಗಳನ್ನು ನೀಡಿದ್ದು ಆತಂಕಕ್ಕಿಂತ ಮುಂಜಾಗರೂಕತೆ ಮುಖ್ಯ ಎಂದು ಹೇಳಿದ್ದಾರೆ.

‘ಮನಸ್ಸು ಗಟ್ಟಿ ಮಾಡಿಕೊಳ್ಳಿ. ಸೋಂಕು ತಗುಲದೇ ಇರಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಪ್ರತಿ ಕ್ಷಣವೂ ಹುಷಾರಾಗಿರಿ’ ಎಂದು ಭಾರತ ಕ್ರಿಎಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಕೂಡ ಇದೇ ಮಾದರಿಯ ಸಂದೇಶವನ್ನು ಟ್ವೀಟ್ ಮಾಡಿದ್ದರು.

ಪ್ರೊ ಹಾಕಿ ಲೀಗ್ ಮುಂದಕ್ಕೆ

ಲಾಸೇನ್ (ಪಿಟಿಐ): ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್‌) ಆಯೋಜಿಸಿರುವ ಪ್ರೊ ಹಾಕಿ ಲೀಗ್ ಅನ್ನು ಮುಂದೂಡಿದೆ. ಏಪ್ರಿಲ್ 15ರ ವರೆಗೆ ಪಂದ್ಯಗಳನ್ನು ನಡೆಸದೇ ಇರಲು ನಿರ್ಧರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದ ಮೇರೆಗೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಫೆಡರೇಷನ್ ತಿಳಿಸಿದೆ. ಒಂಬತ್ತು ತಂಡಗಳು ಪಾಲ್ಗೊಂಡಿರುವ ಟೂರ್ನಿಯ ಭಾರತದ ಮುಂದಿನ ಪಂದ್ಯ ಏಪ್ರಿಲ್ 26ರಂದು ನಡೆಯಲಿದೆ.

ಐಪಿಎಲ್‌: ಚರ್ಚೆಯಾದ ಸಾಧ್ಯತೆಗಳು

* ಆಟಗಾರರು ಮತ್ತು ಪ್ರೇಕ್ಷಕರ ಆರೋಗ್ಯ ರಕ್ಷಣೆಗೆ ಆದ್ಯತೆ; ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ.

* ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಪ್ಲೇ ಆಫ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸುವುದು.

* ಡಬಲ್ ಹೆಡರ್ಸ್‌ (ವಾರಾಂತ್ಯದ ಪಂದ್ಯಗಳು) ಹಣಾಹಣಿಗಳನ್ನು ಹೆಚ್ಚಿಸಿ ಪಂದ್ಯಗಳನ್ನು ಬೇಗ ಮುಗಿಸುವುದು.

* ಕೆಲವೇ ಕೆಲವು ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಡಿಸುವುದು; ಆಟಗಾರರು, ನೆರವು ಸಿಬ್ಬಂದಿ ಮತ್ತು ನೇರಪ್ರಸಾರ ಮಾಡುವ ತಂಡಗಳ ಚಲನವಲನಗಳ ಮೇಲೆ ನಿಗಾ ಇರಿಸುವುದು.

* ಯಾರಿಗೂ ಪ್ರವೇಶ ನೀಡದೆ 60 ಪಂದ್ಯಗಳನ್ನು ಕೂಡ ಆದಷ್ಟು ಬೇಗ ಆಡಿ ಮುಗಿಸುವುದು ಮತ್ತು ತಂಡಗಳ ಮಾಲೀಕರ ವೆಚ್ಚದ ಹೊರೆ ಇಳಿಸುವುದು.

ಭಾರತದಲ್ಲಿ ಮುಂದೂಡಿದ ಟೂರ್ನಿ/ಕೂಟಗಳು

ಅಥ್ಲೆಟಿಕ್ಸ್: ಭೋಪಾನಲ್‌ನಲ್ಲಿ ಏಪ್ರಿಲ್‌ 6ರಿಂದ 8ರ ವರೆಗೆ ನಡೆಯಬೇಕಾಗಿದ್ದ ಫೆಡರೇಷನ್ ಕಪ್ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌.

ಕ್ರಿಕೆಟ್‌: ಮಾರ್ಚ್ 29ರಿಂದ ನಡೆಯಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ; ಭಾರತ–ದಕ್ಷಿಣ ಆಫ್ರಿಕಾ ಏಕದಿನ ಟೂರ್ನಿ (ರದ್ದು). ಎಲ್ಲ ದೇಶಿ ಟೂರ್ನಿಗಳು; ಮಾರ್ಚ್ 22ರ ವರೆಗೆ ನಡೆಯಬೇಕಾಗಿದ್ದ ರಸ್ತೆ ಸುರಕ್ಷತಾ ಸರಣಿ.

ಫುಟ್‌ಬಾಲ್: ಭುವನೇಶ್ವರದಲ್ಲಿ ಮಾರ್ಚ್ 26ರಂದು ನಡೆಯಬೇಕಾಗಿದ್ದ ಭಾರತ–ಕತಾರ್ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ; ಜೂನ್ 9ರಂದು ಕೋಲ್ಕತ್ತದಲ್ಲಿ ನಡೆಯಬೇಕಾಗಿದ್ದ ಭಾರತ –ಅಫ್ಗಾನಿಸ್ತಾನ ಪಂದ್ಯ; ಐ–ಲೀಗ್ ಸೇರಿದಂತೆ ಮಾರ್ಚ್ 31ರ ವರೆಗೆ ನಡೆಯಬೇಕಾಗಿದ್ದ ಎಲ್ಲ ದೇಶಿ ಟೂರ್ನಿಗಳು.

ಬ್ಯಾಸ್ಕೆಟ್‌ಬಾಲ್‌: ಬೆಂಗಳೂರಿನಲ್ಲಿ ಮಾರ್ಚ್ 18ರಿಂದ 22ರ ವರೆಗೆ ನಡೆಯಬೇಕಾಗಿದ್ದ ಫಿಬಾ 3x3 ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿ.

ಬ್ಯಾಡ್ಮಿಂಟನ್: ಏಪ್ರಿಲ್ 12ರಿಂದ ನವದೆಹಲಿಯಲ್ಲಿ ನಡೆಯಬೇಕಾಗಿದ್ದ ಇಂಡಿಯಾ ಓಪನ್ ಟೂರ್ನಿ.

ಚೆಸ್‌: ಮೇ 31ರ ವರೆಗೆ ನಡೆಯಬೇಕಾಗಿದ್ದ ಅಖಿಲ ಭಾರತ ಮಟ್ಟದ ಎಲ್ಲ ಟೂರ್ನಿ.

ಗಾಲ್ಫ್‌: ಮಾರ್ಚ್ 19ರಿಂದ 22ರ ವರೆಗೆ ದೆಹಲಿಯಲ್ಲಿ ನಡೆಯಬೇಕಾಗಿದ್ದ ಇಂಡಿಯಾ ಓಪನ್‌ ಟೂರ್ನಿ

ಮೋಟಾರ್ ಸ್ಪೋರ್ಟ್ಸ್: ಮಾರ್ಚ್‌ 20ರಿಂದ 22ರ ವರೆಗೆ ಚೆನ್ನೈನಲ್ಲಿ ನಡೆಯಬೇಕಾಗಿದ್ದ ದಕ್ಷಿಣ ಭಾರತ ರ‍್ಯಾಲಿ.

ಶೂಟಿಂಗ್: ನವದೆಹಲಿಯಲ್ಲಿ ಮಾರ್ಚ್ 15ರಿಂದ 25ರ ವರೆಗೆ ನಡೆಯಬೇಕಾಗಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್ ರೈಫಲ್, ಪಿಸ್ತೂಲ್‌ ಮತ್ತು ಶಾಟ್‌ಗನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT