ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ನೇಮಕ: ಇನ್ಯಾವಾಗ?

Last Updated 12 ಮೇ 2019, 19:30 IST
ಅಕ್ಷರ ಗಾತ್ರ

ಹೋದ ವಾರ ಮಲೇಷ್ಯಾದ ಕ್ವಾಲಾಲಂ‍ಪುರದಲ್ಲಿ ನಡೆದಿದ್ದ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಜೋಷ್ನಾ ಚಿಣ್ಣಪ್ಪ ಮತ್ತು ಸೌರವ್‌ ಘೋಷಾಲ್‌, ವೈಯಕ್ತಿಕ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಮೈಲುಗಲ್ಲು ಸ್ಥಾಪಿಸಿದ್ದು ಮನದಂಗಳದಲ್ಲಿ ಹಸಿರಾಗಿರುವಾಗಲೇ ಮತ್ತೊಂದು ಮಹತ್ವದ ವಿಚಾರ ಮುನ್ನೆಲೆಗೆ ಬಂದಿದೆ. ಅದು ವಿದೇಶಿ ಕೋಚ್‌ ನೇಮಕ ಕುರಿತಾದದ್ದು.

ಮಹತ್ವದ ಚಾಂಪಿಯನ್‌ಷಿಪ್‌ಗಳಿಗೂ ಮುನ್ನ ವಿದೇಶಗಳಲ್ಲಿ ವಿಶಿಷ್ಠ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಮುಖ್ಯ ಕೋಚ್‌ಗಳು ಆಟಗಾರರ ತಪ್ಪುಗಳನ್ನು ಗುರುತಿಸಿ ಅವುಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ವಿನೂತನ ಕೌಶಲಗಳನ್ನು ಕಲಿಸಿ ಸ್ಪರ್ಧಿಗಳ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಭಾರತದಲ್ಲಿ ಸದ್ಯ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಿ ಕೋಚ್‌ ಹುದ್ದೆ ಖಾಲಿಯಾಗಿ ವರ್ಷವೇ ಉರುಳಿದೆ. ತರಬೇತಿ ಶಿಬಿರವಂತೂ ದೂರದ ಮಾತಾಗಿದೆ. ಇಂತಹ ಅವ್ಯವಸ್ಥೆಯ ನಡುವೆಯೂ ಜೋಷ್ನಾ ಮತ್ತು ಸೌರವ್‌, ಏಷ್ಯಾ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವುದು ಪ್ರಶಂಸನೀಯ.

ಬಿಕ್ಕಟ್ಟು ಶುರುವಾಗಿದ್ದು ಹೀಗೆ
ಈ ಮೊದಲು ಮುಖ್ಯ ಕೋಚ್‌ ಆಗಿದ್ದ ಈಜಿಪ್ಟ್‌ನ ಅಚರಾಫ್‌ ಅಲ್‌ ಕಾರಾರ್ಗುಯಿ ಹೋದ ವರ್ಷ ಹುದ್ದೆ ತೊರೆದಿದ್ದರು. ರಾಜೀನಾಮೆ ನೀಡುವ ಮುನ್ನ ಭಾರತ ಸ್ಕ್ವಾಷ್‌ ಮತ್ತು ರ‍್ಯಾಕೆಟ್‌ ಫೆಡರೇಷನ್‌ (ಎಸ್‌ಆರ್‌ಎಫ್ಐ) ಬಗ್ಗೆ ಹಲವು ಗುರುತರ ಆರೋಪಗಳನ್ನೂ ಮಾಡಿದ್ದರು. ಫೆಡರೇಷನ್‌ನ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

ಹೋದ ವರ್ಷದ ಫೆಬ್ರುವರಿ 20ರಿಂದ 28ರವರೆಗೆ ಅಮೆರಿಕದ ಚಿಕಾಗೊದಲ್ಲಿ ವಿಂಡಿ ಸಿಟಿ ಓಪನ್‌ ಟೂರ್ನಿ ಆಯೋಜನೆಯಾಗಿತ್ತು. ಇದರಲ್ಲಿ ದೀಪಿಕಾ ಪಳ್ಳಿಕಲ್‌, ಸೌರವ್‌ ಘೋಷಾಲ್ ಮತ್ತು ಜೋಷ್ನಾ ಚಿಣ್ಣಪ್ಪ ಸೇರಿದಂತೆ ಪ್ರಮುಖ ಸ್ಪರ್ಧಿಗಳು ಭಾಗವಹಿಸಿದ್ದರಿಂದ ಅವರ ಜೊತೆ ಹೋಗಲು ಅಚರಾಫ್‌ ನಿರ್ಧರಿಸಿದ್ದರು. ಅಲೆಕ್ಸಾಂಡ್ರಿಯಾದಿಂದ ಚಿಕಾಗೊಗೆ ಹೋಗಲು ಎಸ್‌ಆರ್‌ಎಫ್‌ಐ ಅನುಮತಿಯನ್ನೂ ನೀಡಿತ್ತು. ಎರಡು ವಾರ ಆಟಗಾರರ ಜೊತೆ ಇದ್ದು ಮಾರ್ಚ್‌ 10ಕ್ಕೆ ಚೆನ್ನೈಗೆ ವಾಪಾಸಾಗಲೂ ಸೂಚಿಸಿತ್ತು. ತವರೂರು ಅಲೆಕ್ಸಾಂಡ್ರಿಯಾದಿಂದ ಚಿಕಾಗೊಗೆ ಹೋರಡಲು ಸಿದ್ಧರಾಗಿದ್ದ ಅಚರಾಫ್‌ಗೆ ಅಚ್ಚರಿ ಕಾದಿತ್ತು. ಟೂರ್ನಿಗೂ ಮುನ್ನಾ ದಿನ ಫೆಡರೇಷನ್‌ನಿಂದ ಅವರಿಗೆ ದೂರವಾಣಿ ಕರೆ ಬಂದಿತ್ತು. ಕೂಡಲೇ ಚೆನ್ನೈಗೆ ಬರುವಂತೆ ಸೂಚಿಸಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಅಚರಾಫ್‌, ದೀರ್ಘ ರಜೆ ಹಾಕಿ ತವರೂರಿನಲ್ಲೇ ತಂಗಿದ್ದರು.

ಅಲ್ಲಿಂದ ಅಚರಾಫ್‌ ಮತ್ತು ಎಸ್‌ಆರ್‌ಎಫ್‌ಐ ನಡುವಣ ಬಿಕ್ಕಟ್ಟು ಉದ್ಭವಿಸಿತು. ಅಭಿಪ್ರಾಯ ಭೇದ ಶುರುವಾಗಿತ್ತು. ಇದು ಆಟಗಾರರ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತೆ ಸ್ಪರ್ಧಿಗಳ ಪ್ರದರ್ಶನ ಮಟ್ಟ ಕುಸಿದಿತ್ತು. 2011ರ ವಿಂಡಿ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಜೋಷ್ನಾ ಮತ್ತು 2012ರಲ್ಲಿ ಪ್ರಶಸ್ತಿ ಗೆದ್ದಿದ್ದ ಸೌರವ್‌ ಹೋದ ವರ್ಷ ಬರಿಗೈಲಿ ವಾಪಾಸಾಗಿದ್ದರು. ದೀಪಿಕಾ ಕೂಡಾ ಮಂಕಾಗಿದ್ದರು.

ಸಂಘರ್ಷ ಹೆಚ್ಚಾಗಿದ್ದರಿಂದ ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೂ ಮುನ್ನವೇ ಕಾರಾರ್ಗುಯಿ ರಾಜೀನಾಮೆ ನೀಡಿದ್ದರು. 2019ರ ಜುಲೈವರೆಗೂ ಅವರೊಂದಿಗೆ ಎಸ್‌ಆರ್‌ಎಫ್‌ಐ ಒಪ್ಪಂದ ಮಾಡಿಕೊಂಡಿತ್ತು.

‘ಎಸ್‌ಆರ್‌ಎಫ್‌ಐ ನನ್ನನ್ನು ಕೀಳಾಗಿ ನಡೆಸಿಕೊಂಡಿತು. ಕೋಚ್‌ ಆಗಿ ನಾನು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಬೇಕಂತಲೇ ವಿರೋಧಿಸುತ್ತಿತ್ತು. ಫೆಡರೇಷನ್‌ ಜೊತೆಗೆ ಸಂಬಂಧ ಹಳಸಿದ್ದರೂ ಆಟಗಾರರ ಹಿತದೃಷ್ಟಿಯಿಂದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ತಂಡದ ಜೊತೆ ಹೋಗಲು ನಿರ್ಧರಿಸಿದ್ದೆ. ಫೆಡರೇಷನ್‌ನ ಕಿರುಕುಳ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ರಾಜೀನಾಮೆ ನೀಡುವಂತೆ ಎಸ್‌ಆರ್‌ಎಫ್‌ಐ ಒತ್ತಡ ಹೇರುತ್ತಲೇ ಇತ್ತು. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ಕೋಚ್‌ ಹುದ್ದೆ ತೊರೆಯುತ್ತಿದ್ದೇನೆ’ ಎಂದು ಕಾರಾರ್ಗುಯಿ ಜರಿದಿದ್ದರು. ಅವರ ದಿಢೀರ್‌ ನಿರ್ಗಮನ ವಿವಾದದ ಸ್ವರೂಪ ‍ಪಡೆದುಕೊಂಡಿತ್ತು.

ದೀಪಿಕಾ, ಸೌರವ್‌ ಸೇರಿದಂತೆ ಹಲವರು ಎಸ್‌ಆರ್‌ಎಫ್ಐನ ನಡೆಯನ್ನು ಟೀಕಿಸಿದ್ದರು. ಹಿರಿಯ ಆಟಗಾರರೂ ಫೆಡರೇಷನ್‌ ಮೇಲೆ ವಾಗ್ಬಾಣ ಬಿಟ್ಟಿದ್ದರು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಕಾಮನ್‌ವೆಲ್ತ್‌ ಕೂಟಕ್ಕೂ ಮುನ್ನವೇ ಫೆಡರೇಷನ್‌ ವಿದೇಶಿ ಕೋಚ್‌ ಒಬ್ಬರನ್ನು ನೇಮಿಸಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿತ್ತು. ಕಾಮನ್‌ವೆಲ್ತ್‌ನಲ್ಲೂ ಭಾರತದ ಸ್ಪರ್ಧಿಗಳು ಮುಖ್ಯ ಕೋಚ್‌ ಅನುಪಸ್ಥಿತಿಯಲ್ಲೇ ಕಣಕ್ಕಿಳಿಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಅಂದಿನಿಂದ ಇಂದಿನವರೆಗೂ ಭಾರತದ ಸ್ಪರ್ಧಿಗಳು ವಿದೇಶಿ ಕೋಚ್‌ ಇಲ್ಲದೆಯೇ ಪರಿತಪಿಸುತ್ತಿದ್ದಾರೆ. ಈ ವಿಷಯವಾಗಿ ಎಸ್‌ಆರ್‌ಎಫ್ಐಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿದ್ದಾಗ ಅನಿವಾರ್ಯವಾಗಿ ವೈಯಕ್ತಿಕ ಕೋಚ್‌ಗಳ ಬಳಿ ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ. ಈ ಬೆಳವಣಿಗೆ ಭಾರತದಲ್ಲಿ ಸ್ಕ್ವಾಷ್‌ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತವರು ಇದರಿಂದ ವಿಮುಖರಾಗುವ ಅಪಾಯವೂ ಇದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಅದಕ್ಕೂ ಮುನ್ನ ಫೆಡರೇಷನ್ ಎಚ್ಚೆತ್ತುಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ.

ಮುಂಬರುವ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತದ ಸ್ಪರ್ಧಿಗಳು ಪ್ರಶಸ್ತಿ ಗೆದ್ದು ವಿಜಯ ವೇದಿಕೆಯಲ್ಲಿ ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಅವರ ಕನಸಿಗೆ ಬಲತುಂಬುವ ಕೆಲಸಕ್ಕೆ ಎಸ್‌ಆರ್‌ಎಫ್‌ಐ ಮುಂದಾಗಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

‘ಚುನಾವಣೆಯ ಕಾರಣ ಕೋಚ್‌ ನೇಮಕಕ್ಕೆ ಕ್ರೀಡಾ ಸಚಿವಾಲಯದಿಂದ ಅನುಮತಿ ಸಿಕ್ಕಿಲ್ಲ. ಅನುಮತಿ ದೊರೆತ ತಕ್ಷಣವೇ ವಿದೇಶಿ ಕೋಚ್‌ ನೇಮಿಸುತ್ತೇವೆ’ ಎಂದು ಎಸ್‌ಆರ್‌ಎಫ್‌ಐ ಅಧ್ಯಕ್ಷ ದೇವೇಂದ್ರನಾಥ್‌ ಸಾರಂಗಿ ಹೇಳಿದ್ದಾರೆ. ಅವರ ಮಾತಿಗೆ ಆಕ್ಷೇಪಗಳೂ ವ್ಯಕ್ತವಾಗಿವೆ.

ಏಷ್ಯನ್‌ ಚಾಂಪಿಯನ್‌ಷಿಪ್‌ ವೇಳೆ ರಾಷ್ಟ್ರೀಯ ಕೋಚ್‌ ಸಿರಸ್‌ ಪೂಂಚಾ ಅವರು ತಂಡದ ಜೊತೆಗೇ ಇದ್ದರು ಎಂದೂ ಸಾರಂಗಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೌರವ್‌ ಘೋಷಾಲ್‌ ‘ಅವರು ಎಲ್ಲಿದ್ದರೋ ಗೊತ್ತಿಲ್ಲ. ದುರ್ಬೀನು ಹಾಕಿ ಹುಡುಕಿದರೂ ಸಿಗಲಿಲ್ಲ’ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಸಾರಂಗಿಯವರು ಇನ್ನಾದರೂ ಬಾಲಿಶ ಹೇಳಿಕೆ ನೀಡುವುದನ್ನು ಬಿಟ್ಟು ಕೋಚ್‌ ನೇಮಕಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಿ. ಆ ಮೂಲಕ ಭಾರತದ ಸ್ಪರ್ಧಿಗಳ ಹಿತ ಕಾಯಲಿ ಎಂಬುದು ಸ್ಕ್ವಾಷ್‌ ಪ್ರಿಯರ ಒತ್ತಾಯ.

ಆತ್ಮೀಯ ಸ್ನೇಹಿತನೇ ಕೋಚ್‌
ಭಾರತದ ಪ್ರಮುಖ ಆಟಗಾರ ಹರಿಂದರ್‌ ಪಾಲ್‌ ಸಂಧು ಗಾಯದ ಕಾರಣ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿಲ್ಲ. ಆದರೆ ಕೋಚ್‌ ಆಗಿ ಸೌರವ್‌ ಮತ್ತು ಜೋಷ್ನಾ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನುರಿತ ತರಬೇತುದಾರನ ಕೊರಗನ್ನು ಹರಿಂದರ್‌ ದೂರ ಮಾಡಿದ್ದರು.

ಸೌರವ್‌ ಅವರ ಆತ್ಮೀಯ ಗೆಳೆಯ ಆಗಿರುವ ಹರಿಂದರ್‌ ಫೈನಲ್ ಪಂದ್ಯದ ಸಂದರ್ಭದಲ್ಲಿ ಘೋಷಾಲ್‌ಗೆ ಅಗತ್ಯ ಸಲಹೆಗಳನ್ನು ನೀಡಿದ್ದರು. ಜೋಷ್ನಾಗೂ ಅವರು ಮಾರ್ಗದರ್ಶನ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಪ್ರಶಸ್ತಿ ಜಯಿಸಿದ ನಂತರ ಸೌರವ್ ಮತ್ತು ಜೋಷ್ನಾ ಅವರು ಸಂಧು ನೆರವನ್ನು ಸ್ಮರಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT