ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಬಿಎದಲ್ಲಿ ಡಾನ್ಸಿಕ್ಸ್‌ ಮ್ಯಾಜಿಕ್

Last Updated 19 ಜನವರಿ 2021, 19:30 IST
ಅಕ್ಷರ ಗಾತ್ರ

ಸೋಮವಾರ ಲಾಸ್ ಏಂಜಲೀಸ್‌ನಲ್ಲಿ ನಡೆದ ಎನ್‌ಬಿಎ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಿಕಾಗೊ ಬುಲ್ಸ್‌ ತಂಡ ಡಲಾಸ್ ಮಾವೆರಿಕ್ಸ್‌ ವಿರುದ್ಧ ಜಯ ಗಳಿಸಿತು. ಎರಡೂ ತಂಡಗಳು ನೂರಕ್ಕೂ ಹೆಚ್ಚು ಸ್ಕೋರ್ ಗಳಿಸಿದ್ದು ಈ ಪಂದ್ಯದ ವಿಶೇಷ. ಬುಲ್ಸ್ 117 ಪಾಯಿಂಟ್ ಕಲೆ ಹಾಕಿದರೆ ಎದುರಾಳಿ ತಂಡದ ಖಾತೆಯಲ್ಲಿ 101 ಪಾಯಿಂಟ್‌ಗಳು ಸೇರಿದ್ದವು. ಪಂದ್ಯದ ಮತ್ತೊಂದು ವಿಶೇಷವೆಂದರೆ ಲೂಕಾ ಡಾನ್ಸಿಕ್ ಅವರ ಅಮೋಘ ಆಟ.

ಸ್ಲೊವೇನಿಯಾದ ಆಟಗಾರ,ಡಲಾಸ್ ಮಾವೆರಿಕ್ಸ್‌ ತಂಡದ ಸದಸ್ಯ ಡಾನ್ಸಿಕ್ ಈ ಪಂದ್ಯದಲ್ಲಿ 16 ರೀಬೌಂಡ್ಸ್ ಮತ್ತು 15 ಅಸಿಸ್ಟ್ ಒಳಗೊಂಡಂತೆ ಒಟ್ಟು 36 ಪಾಯಿಂಟ್ ಗಳಿಸಿದ್ದರು. ಇದು ವೃತ್ತಿ ಜೀವನದಲ್ಲಿ ಅವರು ಗಳಿಸಿದ 29ನೇ ‘ಡಬಲ್‌’ ಆಗಿದ್ದು ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ 15ನೇ ಸ್ಥಾನ ಗಳಿಸಿದರು. ಈ ಪಂದ್ಯಕ್ಕೂ ಮೊದಲು 16ನೇ ಸ್ಥಾನದಲ್ಲಿದ್ದ ಅವರು ಮೈಕೆಲ್ ಜೋರ್ಡನ್ ಅವರನ್ನು ಹಿಂದಿಕ್ಕಿದರು.

ಇಲ್ಲಿ ಮಾಡಿದ ಸಾಧನೆಯ ಮೂಲಕ ಎನ್‌ಬಿಎಯಲ್ಲೂ ಅವರು ಹೊಸ ದಾಖಲೆ ಬರೆದರು. ಅವರು ಪಂದ್ಯವೊಂದರಲ್ಲಿ ಕನಿಷ್ಠ 35 ಪಾಯಿಂಟ್ ಗಳಿಸಿದ ನಾಲ್ಕನೇ ಆಟಗಾರನಾದರು. ತಲಾ 15 ರೀಬೌಂಡ್ಸ್‌ ಮತ್ತು 15 ಅಸಿಸ್ಟ್ ಸಾಧಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಯಿತು. ಆಸ್ಕರ್ ರಾಬರ್ಟ್ಸನ್ ಐದು ಬಾರಿ ಈ ಸಾಧನೆ ಮಾಡಿದ್ದಾರೆ. ‌

21 ವರ್ಷದ ಲೂಕಾ ಅವರ ತಂದೆ ಸಾಸಾ ಡಾನ್ಸಿಕ್ ಬ್ಯಾಸ್ಕೆಟ್‌ಬಾಲ್ ಆಟಗಾರ ಹಾಗೂ ಕೋಚ್ ಆಗಿದ್ದರು. ಲೂಕಾ 2015ರಿಂದ 2018ರ ವರೆಗೆ ರಿಯಲ್ ಮ್ಯಾಡ್ರಿಡ್‌ನಲ್ಲಿ ಆಡಿದ್ದರು. ನಂತರ ಡಲಾಸ್ ಮಾವೆರಿಕ್ಸ್‌ ಸೇರಿದರು. ಕಳೆದ ವರ್ಷ ಎನ್‌ಬಿಎ ಆಲ್‌ ಸ್ಟಾರ್ ಪ್ರಶಸ್ತಿ ಗಳಿಸಿದ ಅವರು 2019ರಲ್ಲಿ ಎನ್‌ಬಿಎ ರೂಕಿ ಆಫ್‌ ದಿ ಇಯರ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. 2018ರಲ್ಲಿ ಗಾರ್ಡ್ ಆಫ್‌ ದಿ ಇಯರ್ ಕೂಡ ಆಗಿದ್ದರು.

ಏಳನೇ ವಯಸ್ಸಿನಲ್ಲೇ ಬ್ಯಾಸ್ಕೆಟ್‌ಬಾಲ್ ಕೈಗೆತ್ತಿಕೊಂಡಿದ್ಗ ಲೂಕಾ ತಮ್ಮ ಕೊಠಡಿಯಲ್ಲೇ ಆಟವಾಡುತ್ತ ಕಾಲ ಕಳೆಯುತ್ತಿದ್ದರು ಎಂದು ಅವರ ಕುಟುಂಬದವರು ಹೇಳಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಹಂತದಲ್ಲಿ ವ್ಯವಸ್ಥಿತವಾಗಿ ಬ್ಯಾಸ್ಕೆಟ್‌ಬಾಲ್ ಕಣಕ್ಕೆ ಇಳಿದ ಅವರು ತಮಗಿಂತ ಹೆಚ್ಚು ವಯಸ್ಸಿನವರ ವಿರುದ್ಧ ಆಡಿ ಗಮನ ಸೆಳೆದಿದ್ದರು. ಗ್ರೀಸ್‌ನ ಖ್ಯಾತ ಆಟಗಾರ ವ್ಯಾಸಲಿಸ್ ಪ್ಯಾನೊಲಿಸ್ ಅವರ ಶೈಲಿಯನ್ನು ಮೆಚ್ಚಿಕೊಂಡಿದ್ದ ಮತ್ತು ನೆಚ್ಚಿಕೊಂಡಿದ್ದ ಲೂಕಾ ಅವರು ರಿಯಲ್ ಮ್ಯಾಡ್ರಿಡ್‌ನಲ್ಲಿದ್ದಾಗ ವ್ಯಾಸಿಲಿಸ್ ಮೇಲಿನ ಅಭಿಮಾನದಿಂದ ಏಳನೇ ಸಂಖ್ಯೆಯ ಜೆರ್ಸಿ ತೊಟ್ಟುಕೊಂಡು ಆಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT