ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಮಾಮ್ ಮೇರಿ ಕೋಮ್

Last Updated 2 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದ ಏಕೈಕ ಮಹಿಳೆ ಮೇರಿ ಕೋಮ್ ಈಗ ಭಾರತದ ಅಮ್ಮಂದಿರ ಕಣ್ಮಣಿಯಾಗಿದ್ದಾರೆ. ಮೂರು ಮಕ್ಕಳ ತಾಯಿ ಮೇರಿ ಕೋಮ್ ಮಾಡಿರುವ ಸಾಧನೆ ಈಗ ಹಲವು ಮಹಿಳೆಯರಿಗೆ ಪ್ರೇರಣೆಯಾಗುತ್ತಿದೆ.

ನವೆಂಬರ್ 24ರಂದು ನವದೆಹಲಿಯ ಕೆ.ಡಿ. ಜಾಧವ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್‌ನ ಫ್ಲೈವೇಟ್ (48 ಕೆ.ಜಿ.) ವಿಭಾಗದಲ್ಲಿ ಉಕ್ರೇನ್‌ನ ಹನಾ ಒಖೋಟಾ ಅವರನ್ನು ಮಣಿಸಿದ ಮೇರಿ ಆರನೇ ಚಿನ್ನ ಗಳಿಸಿದರು. ಅವರು 2001ರಲ್ಲಿ ಬೆಳ್ಳಿ ಪದಕ ಗೆದ್ದಾಗ ಹದಿನೆಂಟು ವರ್ಷದವರಾಗಿದ್ದರು. ಈಗ ಅವರಿಗೆ 35 ವರ್ಷ. ಮೂವರು ಗಂಡುಮಕ್ಕಳ ತಾಯಿಯೂ ಹೌದು. ಆದರೆ 2002ರಲ್ಲಿ ಅವರು ಮೊದಲ ಬಾರಿಗೆ ಚಿನ್ನ ಜಯಿಸಿದಾಗ ಇದ್ದ ಹುರುಪು ಈಗಲೂ ಮಾಸಿಲ್ಲ. 16 ವರ್ಷಗಳ ಅವಧಿಯಲ್ಲಿ ಅವರ ಆಟ ಮತ್ತಷ್ಟು ಪರಿಪಕ್ವಗೊಂಡಿದೆ. ಬಹಳಷ್ಟು ಮಹಿಳಾ ಕ್ರೀಡಾಪಟುಗಳು ತಮ್ಮ ಮದುವೆಯ ನಂತರ ಕ್ರೀಡಾಂಗಣದಿಂದ ವಿಮುಖರಾಗುವುದೇ ಹೆಚ್ಚು. ಆದರೆ, ಮೇರಿ ಇದಕ್ಕೆ ಅಪವಾದ. ಅವರು 2007ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರ ನಂತರ ಅವರು ವಿಶ್ವ ಟೂರ್ನಿಗಳಲ್ಲಿ ಮೂರು ಚಿನ್ನ, 2012ರಲ್ಲಿ ಒಲಿಂಪಿಕ್ಸ್‌ ಕಂಚು ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ. 2013ರಲ್ಲಿ ಮೂರನೇ ಮಗ ಜನಿಸಿದ. ಕೆಲವು ತಿಂಗಳುಗಳ ನಂತರ ಮತ್ತೆ ರಿಂಗ್‌ಗೆ ಮರಳಿದರು. ಕಳೆದ ಐದು ವರ್ಷಗಳಲ್ಲಿ ಮತ್ತಷ್ಟು ಪದಕಗಳು ಅವರ ಕೊರಳನ್ನು ಅಲಂಕರಿಸಿದವು. ಇದೆಲ್ಲದರ ಹಿಂದಿನ ಗುಟ್ಟು ಅವರ ಫಿಟ್‌ನೆಸ್‌.

ಮಣಿಪುರದ ಗುಡ್ಡಗಾಡು, ನದಿ, ಕಣಿವೆಗಳಲ್ಲಿ ಓಡಾಡುತ್ತ ಬೆಳೆದ ಅವರಿಗೆ ಶ್ರಮ ಹೊಸದಲ್ಲ. ಆದರೆ ವೃತ್ತಿಪರ ಕ್ರೀಡಾಪಟುವಾದಾಗ ಸಹಜತೆಯ ಜೊತೆಗೆ ವೈಜ್ಞಾನಿಕ ಫಿಟ್‌ನೆಸ್‌ ಕ್ರಮಗಳನ್ನೂ ಅನುಸರಿಸುವುದು ಅಗತ್ಯ. ಅದನ್ನು ಚಾಚೂ ತಪ್ಪದೇ ಮಾಡಿದ್ದಾರೆ ಮೇರಿ ಕೋಮ್. ಆದ್ದರಿಂದಲೇ ಅವರು ಸತತ 18 ವರ್ಷಗಳಿಂದ 48 ಕೆ.ಜಿ. ವಿಭಾಗದೊಳಗೆ ಸಾಧನೆ ಮಾಡಲು ಸಾಧ್ಯವಾಗಿದೆ. ಹಾಗಿದ್ದರೆ ಅವರೇನು ಮಾಡುತ್ತಾರೆ? ಇತ್ತೀಚೆಗೆ ಅವರು ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ಧಾರೆ.

‘ಫಿಟ್‌ನೆಸ್‌ ನಿರ್ವಹಿಸಲು ಬರೀ ವ್ಯಾಯಾಮ, ವಿಶ್ರಾಂತಿ ಮತ್ತು ಊಟ ಮಾತ್ರ ಸಾಕಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಗಟ್ಟಿ ಮನೋಬಲ ಬೇಕು. ಎಲ್ಲ ಆಕರ್ಷಣೆ ಮತ್ತು ನೆ‍ಪಗಳಿಂದ ಮುಕ್ತಿ ಪಡಬೇಕು. ನಾನು ಒಂದೇ ಒಂದು ದಿನವೂ ನನ್ನ ವ್ಯಾಯಾಮ ಮತ್ತು ಅಭ್ಯಾಸವನ್ನು ತಪ್ಪಿಸುವುದಿಲ್ಲ. ಒಂದು ಬಾರಿ ನನ್ನ ಮನಸಾರೆ ನಿರ್ಧರಿಸಿದರೆ ಅದನ್ನು ಯಾವ ಕಾರಣಕ್ಕೂ ಬದಲಿಸುವುದಿಲ್ಲ. ಈ ವಿಷಯದಲ್ಲಿ ಅಪ್ಪ, ಅಮ್ಮ, ಪತಿ ಮಾತುಗಳನ್ನು ಕೇಳುವುದೇ ಇಲ್ಲ. ಮಕ್ಕಳ ಮೋಹವೂ ಅಡ್ಡ ಬರುವುದಿಲ್ಲ’ ಎಂದು ಮೇರಿ ಹೇಳುತ್ತಾರೆ.

‘ನಾನು ಪ್ರತಿದಿನ 10–12 ಕಿ.ಮೀ ಓಡುತ್ತೇನೆ. ನಂತರ ಹಗ್ಗ ಜಿಗಿತ ಮತ್ತು ಒಂದಷ್ಟು ಫ್ರೀ ಹ್ಯಾಂಡ್ ವ್ಯಾಯಾಮಗಳನ್ನು ಮಾಡು
ತ್ತೇನೆ. ಅದರ ನಂತರ ಶ್ಯಾಡೊ ಬಾಕ್ಸಿಂಗ್ ಅಭ್ಯಾಸ. ನಂತರ ಪಂಚಿಂಗ್ ಬ್ಯಾಗ್ ಮತ್ತು ಸ್ಪೀಡ್ ಬ್ಯಾಗ್‌ ಬಾಕ್ಸಿಂಗ್ ಮಾಡುತ್ತೇನೆ. ಜಿಮ್‌ಗೆ ಹೋದಾಗ ಪುಷ್‌ ಅಪ್ಸ್‌ ಮಾಡುತ್ತೇನೆ. ಬಹಳಷ್ಟು ಬಸ್ಕಿ ಹೊಡೆಯುತ್ತೇನೆ. ಕೊನೆಯಲ್ಲಿ ಕೂಲಿಂಗ್ ವ್ಯಾಯಾಮಗಳನ್ನು ಮತ್ತು ಲಘುವಾದ ಸ್ಟ್ರೆಚ್‌ಗಳನ್ನು ತಪ್ಪದೇ ಮಾಡುತ್ತೇನೆ. ಇದರಿಂದ ಗಾಯಗೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ’ ಎಂದು ಮೇರಿ ಹೇಳುತ್ತಾರೆ.

ಉತ್ತಮ ದೇಹ ಮತ್ತು ಆರೋಗ್ಯದಿಂದ ಉತ್ತಮ ಏಕಾಗ್ರತೆ ಸಾಧ್ಯವಾಗುತ್ತದೆ. ಇದರಿಂದ ರಿಂಗ್‌ನಲ್ಲಿ ಅವರು ಎದುರಾಳಿಯ ನಡೆಗಳನ್ನು ಗುರುತಿಸಿ ಚುರುಕಾದ ಪ್ರತಿಕ್ರಿಯೆ ನೀಡುತ್ತಾರೆ. ಮಿಂಚಿನ ವೇಗದಲ್ಲಿ ಮುಷ್ಟಿ ಪ್ರಹಾರ ನಡೆಸುತ್ತಾರೆ.

ನಾಲ್ಕು ತಿಂಗಳುಗಳ ಹಿಂದೆ ಮೇರಿ ದೇಹತೂಕ 50 ಕೆ.ಜಿ. ಆಗಿತ್ತು. ಅದಕ್ಕಾಗಿ ಅವರು ಪ್ರತಿದಿನ ನಾಲ್ಕು ಗಂಟೆ ಹಗ್ಗ ಜಿಗಿತ ಮತ್ತು ಸರಳ ವ್ಯಾಯಾಮಗಳನ್ನು ಮಾಡಿ ಒಂದೇ ತಿಂಗಳಲ್ಲಿ ಎರಡು ಕೆ.ಜಿ. ತೂಕ ಇಳಿಸಿದ್ದರು. ನಂತರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದರು.

ಮೇರಿ ಆಹಾರ ಸೇವನೆಯಲ್ಲೂ ತುಂಬಾ ಕಟ್ಟುನಿಟ್ಟು. ಬೆಳಿಗ್ಗೆ ತಿಂಡಿ ತಪ್ಪಿಸುವುದಿಲ್ಲ. ಮಧ್ಯಾಹ್ನ ಎರಡು ಗಂಟೆಗೆ ಊಟ ಮತ್ತು ರಾತ್ರಿ 8 ರಿಂದ 9 ಗಂಟೆಯೊಳಗೆ ಊಟ ಮಾಡುವ ಶಿಸ್ತು ಅವರದ್ದು.

‘ನನಗೆ ಮಾಂಸಾಹಾರ ಇಷ್ಟ. ಆದರೆ ಅದರಲ್ಲಿ ಪೌಷ್ಟಿಕತೆಗೆ ಹೆಚ್ಚು ಆದ್ಯತೆ. ಸುಮ್ಮನೇ ಬಾಯಿರುಚಿಗೆ ತಿನ್ನುವುದಿಲ್ಲ. ಮನೆ ಊಟವೇ ಎಲ್ಲಕ್ಕಿಂತ ಶ್ರೇಷ್ಠ’ಎನ್ನುತ್ತಾರೆ.

ಇದೀಗ ಅವರು 2020ರ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ. ರಾಜ್ಯಸಭಾ ಸದಸ್ಯೆಯೂ ಆಗಿರುವ ಮೇರಿ, ಸಂಸಾರ, ಕ್ರೀಡೆ ಮತ್ತು ವೈಯಕ್ತಿಕ ಜೀವನವನ್ನು ಸಮರ್ಥವಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ಧಾರೆ. ಅವರಿಗೆ ಪತಿ ಕರಂಗ್ ಒನ್ಲೆ ಕೂಡ ಬೆಂಬಲವಾಗಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT