ಶನಿವಾರ, ಆಗಸ್ಟ್ 13, 2022
26 °C
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್ ಮನದ ಮಾತು

ಹುಡುಗರಿಂದ ತಿಂದ ಪೆಟ್ಟುಗಳೇ ಯಶಸ್ಸಿನ ಮೆಟ್ಟಿಲುಗಳು– ಬಾಕ್ಸಿಂಗ್ ಚಾಂಪಿಯನ್ ನಿಖತ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಐದು ವರ್ಷಗಳ ಹಿಂದೆ ಭುಜದ ಗಾಯಕ್ಕೆ ಶಸ್ತ್ರಚಿಕಿತ್ಸೆಯಾದಾಗ ಬಹಳಷ್ಟು ಜನರು ಬಾಕ್ಸಿಂಗ್ ಬಿಟ್ಟುಬಿಡುವಂತೆ ಹೇಳಿದ್ದರು. ಮುಂದೆ ನಾನು ಬಾಕ್ಸಿಂಗ್ ಕ್ರೀಡೆಗೆ ಅರ್ಹಳಲ್ಲ ಎಂದೇ ಇನ್ನೂ ಕೆಲವರು ನಿರ್ಧರಿಸಿಬಿಟ್ಟಿದ್ದರು. ಗೆದ್ದರೂ, ಬಿದ್ದರೂ ಜನ ಮಾತನಾಡುತ್ತಾರೆ. ಆದ್ದರಿಂದ ಅವರ ಬಗ್ಗೆ ಹೆಚ್ಚು ಗಮನ ಕೊಡದೇ ಮುಂದುವರಿದೆ. ಇವತ್ತು ಫಲ ಸಿಕ್ಕಿದೆ’–

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್ ನಿಖತ್ ಜರೀನ್ ಅವರ ನುಡಿಗಳಿವು. ಆದರೆ 2017ರಲ್ಲಿ ಭುಜದ ಮೂಳೆ ಮುರಿದು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಛಲ ಬಿಡದ ಅವರು ಬಾಕ್ಸಿಂಗ್ ರಿಂಗ್‌ಗೆ ಮರಳಿದ್ದರು. ಕಳೆದ ಮೇ ತಿಂಗಳಲ್ಲಿ ಟರ್ಕಿಯಲ್ಲಿ ನಡೆದಿದ್ದ ಐಬಿಎ ವಿಶ್ವ ಮಹಿಳಾ ಬಾಕ್ಸಿಂಗ್‌ ಫ್ಲೈವೇಟ್ ವಿಭಾಗದಲ್ಲಿ ಚಿನ್ನ ಗಳಿಸಿದ್ದರು.`ಮಂಗಳವಾರ  ಆಡಿಡಾಸ್ ಕಂಪೆನಿಯು ಬ್ರಿಗೇಡ್ ರಸ್ತೆಯಲ್ಲಿ ಆರಂಭಿಸಿದ ನವೀಕೃತ ಮಳಿಗೆಯನ್ನು ಉದ್ಘಾಟಿಸಿದ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಕ್ರೀಡಾಪಯಣದ ಅನುಭವವನ್ನು ಹಂಚಿಕೊಂಡರು.

’ಬಾಲ್ಯದಿಂದಲೇ ಹಟಮಾರಿ ನಾನು. ತರಬೇತಿ ಸಂದರ್ಭದಲ್ಲಿಯೂ ಹುಡುಗರಿಂದ ಬೀಳುತ್ತಿದ್ದ ಪೆಟ್ಟುಗಳಿಗೆ ಯಾವತ್ತೂ ಬೆನ್ನು ತೋರಿಸಲಿಲ್ಲ. ಇವತ್ತು ಅವರು ಹೊಡೆದಿದ್ದಾರೆ, ನಾಳೆ ನಾನು ತಿರುಗಿ  ಹೊಡಿತೀನಿ ಎಂಬ ಛಲದಿಂದ ಮುಂದುವರಿದೆ. ಆರಂಭದಲ್ಲಿ ಕಷ್ಟವಾದರೂ ಈಗ ಸಿಹಿಫಲ ಸಿಗುತ್ತಿದೆ. ಆ ಪೆಟ್ಟುಗಳೇ ಯಶಸ್ಸಿಗೆ ಮೆಟ್ಟಿಲುಗಳಾದವು’ ಎಂದರು.  


ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ನಿಖತ್‌ ಜರೀನ್‌ (ಎಡದಿಂದ ಮೂರನೆಯವರು) -ಪ್ರಜಾವಾಣಿ ಚಿತ್ರ


ಗಾಜಿನ ಪರದೆ ಪುಡಿಯಾದಾಗ
ಮುಖ ಮುಚ್ಚಿಕೊಂಡ
ನಿಖತ್‌ ಜರೀನ್‌

‘ಮೇರಿ ಕೋಮ್ ಅವರ ಸಾಧನೆಗಳು ಅತ್ಯದ್ಭುತ. ಆ ಮಟಕ್ಕೇರುವುದು ಬಲುಕಷ್ಟ. ಅಸಾಧ್ಯವಲ್ಲ ನಿಜ. ಆದರೆ, ಮೊದಲಿನಂತೆ ಈಗ ಪ್ರತಿವರ್ಷ ವಿಶ್ವ ಚಾಂಪಿಯನ್‌ಷಿಪ್ ನಡೆಯುವುದಿಲ್ಲ. ಎರಡು ವರ್ಷಕ್ಕೊಮ್ಮೆ ಜರುಗುತ್ತದೆ. ಅವರು ಗೆದ್ದಷ್ಟು ಪದಕಗಳನ್ನು ಗಳಿಸು ವುದು ನನಗೆ ಸಾಧ್ಯವಾಗದಿರಬಹುದು. ಆದರೆ, ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸಿಂಗ್ ಪಟುಗಳು ಇದುವರೆಗೆ ಕಂಚಿನ ಪದಕ ಗೆದ್ದಿದ್ದಾರೆ. ನಾನು ಅದ ಕ್ಕಿಂತ ಉನ್ನತ ಪದಕಗಳನ್ನು ಜಯಿಸುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಕಾಮನ್‌ವೆಲ್ತ್ ಕೂಟಕ್ಕಾಗಿ ಸಿದ್ಧತೆ ಉತ್ತಮವಾಗಿದೆ. ಲವ್ಲಿನಾ ಬೋರ್ಗೊಹೈನ್ ಮತ್ತಿತರರೊಂದಿಗೆ  ನವದೆಹಲಿಯಲ್ಲಿ ಶಿಬಿರದಲ್ಲಿ ಅಭ್ಯಾಸ ಮಾಡಿದೆ. ಮುಂದಿನ ತಿಂಗಳು ಐರ್ಲೆಂಡ್‌ಗೆ ತೆರಳುತ್ತಿದ್ದು, ಅಲ್ಲಿ ಕೆಲವು ದಿನ ಅಭ್ಯಾಸ ನಡೆಸಿ ಬರ್ಮಿಂಗ್‌ಹ್ಯಾಮ್‌ಗೆ ಕಾಮನ್‌ವೆಲ್ತ್ ಕೂಟಕ್ಕೆ ಹೋಗುತ್ತೇವೆ’ ಎಂದು 26 ವರ್ಷದ ನಿಖತ್ ವಿವರಿಸಿದರು. 

‘ಬೆಂಗಳೂರು ನನಗೆ ಇಷ್ಟದ ಊರು. 2017ರಲ್ಲಿ ಶಸ್ತ್ರಚಿಕಿತ್ಸೆಯ ನಂತರ ಪುನಶ್ಚೇತನ ಮತ್ತು ಆರೈಕೆಗೆ ಇಲ್ಲಿಯೇ ಇದ್ದೆ. ಸುಮಾರು ಒಂದು ತಿಂಗಳ ವಾಸ್ತವ್ಯ ಇತ್ತು. ಹಲವು ಬಾರಿ ಸಂಜೆ ಹೊತ್ತಿನಲ್ಲಿ  ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆಗಳಲ್ಲಿ ಜಾಗಿಂಗ್ ಮತ್ತು ವಾಕಿಂಗ್ ಮಾಡಲು ಬರುತ್ತಿದ್ದೆವು. ಇಲ್ಲಿಯ ವಾತಾವರಣ, ತಿನಿಸುಗಳು ಬಹಳ ಇಷ್ಟ’ ಎಂದರು. 

ಗಾಜಿನ ‘ಗಿಮಿಕ್’ ಮೂಡಿಸಿದ ಆತಂಕ 

ನಿಖತ್ ಜರೀನ್ ಅವರು ಕಾರ್ಯಕ್ರಮಕ್ಕೆ ಪ್ರವೇಶಿಸುವುದನ್ನು ನಾಟಕೀಯವಾಗಿಸಲು ಮಾಡಿದ ಯೋಜನೆಯು ಕೆಲಕ್ಷಣ ಆತಂಕ ಮೂಡಿಸಿತು. 

ಬಾಕ್ಸಿಂಗ್ ಗ್ಲೌಸ್ ಧರಿಸಿದ್ದ ನಿಖತ್ ಕಾರ್ಯಕ್ರಮದ ಅಂಗಣದೊಳಗೆ ಕಾಲಿಡುವ ಮುನ್ನ ಸುಮಾರು ಆರಡಿ ಎತ್ತರದ ಗಾಜಿನ ಪರದೆಯನ್ನು ಪುಡಿಗಟ್ಟುವ (ಸಿನಿಮಾ ಸ್ಟಂಟ್ ಮಾದರಿ) ವ್ಯವಸ್ಥೆ ಮಾಡಲಾಗಿತ್ತು. ಆಯೋಜಕರ ಯೋಜನೆಯಂತೆ ಗಾಜು ಪುಡಿಯಾಯಿತು. ಆದರೆ ಅಲ್ಲಿ ಸೇರಿದ್ದ ಕೆಲವು ಜನರು, ಮಾಧ್ಯಮದವರು ಮತ್ತು ನಿಖತ್ ಅವರು ಕೆಲಕ್ಷಣ ದಂಗಾದರು.  

ಸುದ್ದಿಗಾರರಿಗೆ ಈ ಕುರಿತು ಆಯೋಜಕರ ಪರವಾಗಿ ಸ್ಪಷ್ಟನೆ ನೀಡಿದ ವಕ್ತಾರರು, ‘ಜನರು ಮತ್ತು ನಿಖತ್ ಅವರ ಸುರಕ್ಷತೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡೇ ಈ ಸ್ಟಂಟ್ ಏರ್ಪಡಿಸಲಾಗಿತ್ತು. ಅಷ್ಟಕ್ಕೂ ಇದು ಗಿಮಿಕ್ (ಶುಗರ್‌ ಕೋಟೆಡ್) ಗ್ಲಾಸ್‌. ಇದು ಪುಡಿಯಾಗಿ ಸಿಡಿದರೂ ಯಾವುದೇ ಹಾನಿ ಮಾಡದು. ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು