ಮಂಗಳವಾರ, ಆಗಸ್ಟ್ 3, 2021
26 °C

Tokyo Olympics| ಕೋವಿಡ್ ಜೊತೆಗೆ ಪ್ರಕೃತಿ ವಿಕೋಪಗಳ ಸವಾಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ಗೆ ಕೊರೊನಾ ವೈರಸ್ ಹಾವಳಿ ದೊಡ್ಡ ಆತಂಕವೇ ಆದರೂ ಮಾರಣಾಂತಿಕ, ಅನಿರೀಕ್ಷಿತವಾದ ನೈಸರ್ಗಿಕ ವಿಕೋಪಗಳ ಭೀತಿಯೂ ಆಯೋಜಕರಿಗೆ ಸವಾಲಾಗಿದೆ.

ಜಪಾನ್‌ನಲ್ಲಿ ನಿಯಮಿತವಾಗಿ ಭೂಕಂಪನಗಳು ಸಂಭವಿಸುತ್ತವೆ. ಚಂಡಮಾರುತಗಳಿಂದಲೂ ಆ ದೇಶ ಜರ್ಜರಿತವಾಗಿದೆ. ಹೀಗಾಗಿ ಒಲಿಂಪಿಕ್‌ನಂತಹ ಪ್ರಮುಖ ಕ್ರೀಡಾಕೂಟದಲ್ಲಿ ಈ ವಿಕೋಪಗಳನ್ನು ಎದುರಿಸಲು ಮಾಡಿಕೊಳ್ಳುವ ಪೂರ್ವಸಿದ್ಧತೆಗೆ ಹಿನ್ನಡೆಯಾಗಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

‘ಕೋವಿಡ್ ತಡೆಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಕ್ರೀಡಾಕೂಟ ಆಯೋಜಕರ ಮುಂದಿರುವ ತುರ್ತು ಸವಾಲು. ಆದರೆ ಒಲಿಂಪಿಕ್ಸ್ ನಡೆಯುವ ಈ ಸಂದರ್ಭದಲ್ಲಿ ಭಾರಿ ಪ್ರಮಾಣದ ಭೂಕಂಪಗಳ ಅಪಾಯದ ಅರಿವಿರಲೇಬೇಕು‘ ಎಂದು ಪ್ರಕೃತಿ ವಿಕೋಪಗಳ ಅಧ್ಯಯನ ತಜ್ಞ, ಜಪಾನ್‌ನ ಹಿರೊಟಡಾ ಹಿರೊಸೆ ಹೇಳಿದ್ದಾರೆ.

ಜಪಾನ್‌, ಪೆಸಿಫಿಕ್‌ ಸಾಗರದ ‘ಭೂಕಂಪನ ಮತ್ತು ಜ್ವಾಲಾಮುಖಿಗಳ ಕೇಂದ್ರ‘ ವ್ಯಾಪ್ತಿಯಲ್ಲಿದೆ. ಮೇನಿಂದ ಅಕ್ಟೋಬರ್‌ ಅವಧಿಯೊಳಗೆ ಇಲ್ಲಿ ಜ್ವಾಲಾಮುಖಿ ಮತ್ತು ಚಂಡಮಾರುತಗಳು ನಿರಂತರವಾಗಿ ಸಂಭವಿಸುತ್ತಿರುತ್ತವೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇವುಗಳ ತೀವ್ರತೆ ಹೆಚ್ಚು.

2019ರಲ್ಲಿ ಜಪಾನ್ ರಗ್ಬಿ ವಿಶ್ವಕಪ್ ಆಯೋಜಿಸಿದ ಸಂದರ್ಭದಲ್ಲಿ ಹಕಿಬಿಸ್ ಚಂಡಮಾರುತ ಬೀಸಿತ್ತು. ಈ ಕಾರಣದಿಂದಾಗಿ ಹಲವು ಪಂದ್ಯಗಳನ್ನು ರದ್ದು ಮಾಡಲಾಗಿತ್ತು. ಚಂಡಮಾರುತದಿಂದಾಗಿ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ವ್ಯಾಪಕ ಪ್ರವಾಹವೂ ಕಾಣಿಸಿಕೊಂಡಿತ್ತು.

‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಜನರ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. ಪ್ರಕೃತಿ ವಿಕೋಪಗಳನ್ನು ಎದುರಿಸಲು ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ‘ ಎಂದು ಕ್ರೀಡಾಕೂಟದ ಆಯೋಜಕರು ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು