ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಹಾಕಿ ಸ್ವರ್ಣ ಪದಕದ ಹೊಳಪಿಗೆ 40

Last Updated 26 ಜುಲೈ 2020, 22:32 IST
ಅಕ್ಷರ ಗಾತ್ರ

ಕೊರೊನಾ ಸಂಕಟ ವಕ್ಕರಿಸದೇ ಹೋಗಿದ್ದರೆ, ಈ ಹೊತ್ತಿನಲ್ಲಿ ನಾವು ಟೋಕಿಯೊ ಒಲಿಂಪಿಕ್ಸ್‌ನ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದಿತ್ತು. ಇರಲಿ; 1980ರ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಚಿನ್ನ ಗೆದ್ದ ಸಂಭ್ರಮಕ್ಕೆ ಈಗ ಬರೋಬ್ಬರಿ 40 ವರ್ಷ ತುಂಬಿದೆ. ಆಗ ತಂಡದಲ್ಲಿ ಆಡಿದ್ದ ಕೊಡಗಿನ ಎಂ.ಎಂ. ಸೋಮಯ್ಯ ಆ ಮಧುರ ಕ್ಷಣಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಆ ದಿನಗಳಲ್ಲಿ ಭಾರತೀಯರ ಎದೆಯಲ್ಲಿ ಹಾಕಿ ಕ್ರೀಡೆಯ ಪ್ರೀತಿ ತುಂಬಿ ತುಳುಕುತ್ತಿತ್ತು. ಬರೋಬ್ಬರಿ ಹದಿನೆಂಟು ವರ್ಷಗಳ ನಂತರ ಒಲಿಂಪಿಕ್ಸ್‌ ನಲ್ಲಿ ಹಾಕಿ ತಂಡಕ್ಕೆ ಚಿನ್ನದ ಪದಕ ಒಲಿದಿತ್ತು. ಮಾಸ್ಕೋನಲ್ಲಿ ಗೆದ್ದ ಆ ಚಿನ್ನದ ಪದಕ ಐತಿಹಾಸಿಕ. ಅದಕ್ಕೀಗ 40ರ ಹೊಳಪು. 1964ರಲ್ಲಿ ಟೋಕಿಯೊದಲ್ಲಿ ಚಿನ್ನ ಗೆದ್ದ ನಂತರ ಭಾರತ ತಂಡಕ್ಕೆ 1968 ಮತ್ತು 1972ರಲ್ಲಿ ಕಂಚಿನ ಪದಕಗಳು ಸಂದಿದ್ದವು. ಆದರೆ 1976ರಲ್ಲಿ ಏಳನೇ ಸ್ಥಾನಕ್ಕೇ ಸರಿದಿದ್ದೆವು. ಆದ್ದರಿಂದ ಮಾಸ್ಕೋ ಗೆಲುವು ಮಹತ್ವದ್ದು.

ನಾನು ಒಂದು ಮಾತನ್ನು ಪ್ರಾಮಾಣಿಕವಾಗಿ ಹೇಳಲೇಬೇಕು. ಆ ಒಲಿಂಪಿಕ್ ಕೂಟವನ್ನು ಬಹಳಷ್ಟು ದೇಶಗಳು ಬಹಿಷ್ಕರಿಸಿದ್ದವು. ಅದರಿಂದಾಗಿ ಪೈಪೋಟಿ ಕಡಿಮೆ ಇತ್ತು. ಆದರೆ ಆಸ್ಟ್ರೋ ಟರ್ಫ್‌ನಲ್ಲಿ ಆಡುವ ಸವಾಲು ನಮ್ಮದಾಗಿತ್ತು. 1975ರಲ್ಲಿ ವಿಶ್ವಕಪ್ ಚಿನ್ನ ಗೆದ್ದಿದ್ದ ತಂಡದ ಬಹುತೇಕರು 1976ರ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಆದರೆ, ಫಲಿತಾಂಶ ಬಂದಿರಲಿಲ್ಲ. ಮಾಸ್ಕೋದಲ್ಲಿ ನಮ್ಮ ಗೆಲುವಿಗೆ ಮುಖ್ಯ ಕಾರಣ ಕೋಚ್ ಬಾಲಕಿಶನ್‌ ಸಿಂಗ್ ಅವರ ಮಾರ್ಗದರ್ಶನ. ವಾಸುದೇವನ್ ಭಾಸ್ಕರನ್ ಚಾಣಾಕ್ಷ ನಾಯಕತ್ವ. ಫಾರ್ವರ್ಡ್‌ನಲ್ಲಿದ್ದ ಅಪ್ರತಿಮ ಆಟಗಾರರು ತಂಡವನ್ನು ಫೈನಲ್‌ಗೆ ತಂದು ನಿಲ್ಲಿಸಿದ್ದರು. ಸುರೀಂದರ್ ಸಿಂಗ್ ಸೋಧಿ, ಜಾಫರ್ ಇಕ್ಬಾಲ್, ಮೆರ್ವಿನ್ ಫರ್ನಾಂಡಿಸ್ ಅವರ ಆಟ ಅಮೋಘವಾಗಿತ್ತು. ಬಾಲಕಿಶನ್‌ ಸಿಂಗ್‌ ಅವರ ಸಬ್‌ಸ್ಟಿಟ್ಯೂಟ್ ಆಯ್ಕೆಗಳು ಫಲ ನೀಡಿದವು.

ಆ ಒಲಿಂಪಿಕ್ಸ್‌ನಲ್ಲಿ ನಾನು ಮತ್ತು ಮೊಹಮ್ಮದ್ ಶಾಹೀದ್ ತಂಡದಲ್ಲಿದ್ದ ಕಡಿಮೆ ವಯಸ್ಸಿನ ಆಟಗಾರರು. ಮೊಹಮ್ಮದ್ ನನಗಿಂತಲೂ ಒಂದು ವರ್ಷ ಚಿಕ್ಕವರು. ಬಹುಶಃ ಆಗ 20 ವರ್ಷದವರು. ಆದರೆ ನಾವಿಬ್ಬರೂ ಸಬ್‌ಸ್ಟಿಟ್ಯೂಟ್ ಆಗಿದ್ದೆವು.

ಅದರೆ ಆ ಸಣ್ಣ ವಯಸ್ಸಿನಲ್ಲಿಯೇ ಮೊಹಮ್ಮದ್ ಗೆ ಇದ್ದ ಡ್ರಿಬ್ಲಿಂಗ್ ಕೌಶಲ ಅಮೋಘವಾದದ್ದು. ಡಿಫೆಂಡರ್‌ ಸ್ಥಾನದಲ್ಲಿ ಆಡಿದ್ದ ನಾನು ಫಾರ್ವರ್ಡ್‌ ವಿಭಾಗಕ್ಕೆ ಉತ್ತಮವಾಗಿ ಸಹಕರಿಸಿ ಕೆಲವು ಸ್ಮರಣಾರ್ಹ ಕ್ಷಣಗಳಿಗೆ ಪಾಲುದಾರನಾದ ತೃಪ್ತಿ ಇದೆ.

ಜುಲೈ 26ರ ಸೆಮಿಫೈನಲ್‌ ಮರೆಯುವುದಾದರೂ ಹೇಗೆ ‌? ಆತಿಥೇಯ ಸೋವಿಯತ್ ಯೂನಿಯನ್ ತಂಡದ ಎದುರಿನ ಆ ಪಂದ್ಯದಲ್ಲಿ ನಮ್ಮವರ ಆಟ ಉತ್ತುಂಗದಲ್ಲಿತ್ತು. ದೇವಿಂದರ್, ಸುರೀಂದರ್ ಮತ್ತು ಕೌಶಿಕ್ ಜೊತೆಗೆ ಯುವ ಆಟಗಾರ ಶಾಹೀದ್ ಗಳಿಸಿದ ಗೋಲುಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ. ಮೂರು ದಿನಗಳ ನಂತರ ನಡೆದ ಫೈನಲ್‌ನಲ್ಲಿ ಸ್ಪೇನ್‌ಗೆ ಮುಖಾಮುಖಿಯಾಗಿದ್ದೆವು.

ಮೊದಲಾರ್ಧದಲ್ಲಿ ಸುರೀಂದರ್ ತಂಡಕ್ಕೆ 2–0 ಮುನ್ನಡೆ ಕೊಡಿಸಿದ್ದರು. ವಿರಾಮದ ನಂತರ ಕೌಶಿಕ್ ಕೂಡ ಒಂದು ಗೋಲು ಹೊಡೆದಿದ್ದರು. ಆದರೆ ನಂತರದ ಅವಧಿಯಲ್ಲಿ ಸ್ಪೇನ್ ಆಕ್ರಮಣಕಾರಿಯಾಯಿತು. ಅಮಾತ್ ಎರಡು ಗೋಲು ಹೊಡೆದರು. ಆದರೆ 58ನೇ ನಿಮಿಷದಲ್ಲಿ ಶಾಹೀದ್ ಗೋಲು ಹೊಡೆದರು. 4–2ರಿಂದ ತಂಡ ಲೀಡ್ ನಲ್ಲಿತ್ತು. 65ನೇ ನಿಮಿಷದಲ್ಲಿ ಸ್ಪೇನ್‌ನ ಅಮಾತ್ ಮತ್ತೊಂದು ಗೋಲು ಹೊಡೆದರು. ಆದರೆ ಕೊನೆಯ ಕ್ಷಣಗಳ ಆತಂಕವನ್ನು ಮೆಟ್ಟಿ ನಿಲ್ಲುವಲ್ಲಿ ನಾವು ಯಶಸ್ವಿಯಾದೆವು.

ಅಂತಹ ಮತ್ತೊಂದು ಅನುಭವ ನಂತರದ ಒಲಿಂಪಿಕ್ಸ್‌ಗಳಲ್ಲಿ ನಮಗಾಗಲಿಲ್ಲ. ಈಗ ಕಳೆದ ಹತ್ತು ವರ್ಷಗಳಿಂದ ಒಂದಿಷ್ಟು ಭರವಸೆಯ ಕಿರಣಗಳು ಹೊರಹೊಮ್ಮುತ್ತಿವೆ. ಆಧುನಿಕ ಶೈಲಿ, ಫಿಟ್‌ನೆಸ್‌ಗೆ ಹೆಚ್ಚು ಮಹತ್ವ ಸಿಗುತ್ತಿದೆ. ಈಗಿನ ಸಬ್‌ಸ್ಟಿಟ್ಯೂಟ್‌ ನಿಯಮವೂ ಅನುಕೂಲಕರವಾಗಿದೆ. ಕೋಚಿಂಗ್ ವಿಧಾನಗಳು ಸುಧಾರಣೆಗೊಂಡಿವೆ. ಅದಕ್ಕಾಗಿಯೇ ಭಾರತ ಇವತ್ತು ಅಗ್ರ ಐದರಲ್ಲಿ ಬಂದು ನಿಲ್ಲಲು ಸಾಧ್ಯವಾಗಿರುವುದು. ಮನ್‌ಪ್ರೀತ್ ಸಿಂಗ್, ಗೋಲ್‌ಕೀಪರ್ ಶ್ರೀಜೇಶ್ ಮತ್ತು ಎಸ್‌.ವಿ. ಸುನಿಲ್ ಅವರು ಉತ್ತಮ ಆಟಗಾರರಾಗಿದ್ದಾರೆ. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಈ ಬಳಗದಿಂದ ಪದಕ ನಿರೀಕ್ಷೆ ಮಾಡಬಹುದು.

ಮಹಿಳಾ ಹಾಕಿ ತಂಡವು ಹಿಂದೆಂದಿಗಿಂತಲೂ ಉತ್ತಮ ಪ್ರಗತಿ ಸಾಧಿಸಿದೆ. ಆದರೆ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಲು ಇನ್ನಷ್ಟು ಕಾಲ ಬೇಕಾಗಬಹುದು. ಅವರಿಂದ ಉತ್ತಮ ಆಟವನ್ನು ಖಂಡಿತವಾಗಿಯೂ ನಿರೀಕ್ಷಿಸಬಹುದು.

ನಿರೂಪಣೆ: ಗಿರೀಶ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT