ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Breaking | ಕೋವಿಡ್ 19 ಭೀತಿ: 2021ಕ್ಕೆ ಒಲಿಂಪಿಕ್ಸ್ ಮುಂದೂಡಿಕೆ

Last Updated 24 ಮಾರ್ಚ್ 2020, 14:25 IST
ಅಕ್ಷರ ಗಾತ್ರ

ಟೊಕಿಯೊ: ಕೋವಿಡ್‌-19 ಪಿಡುಗಿನಿಂದ ಕಂಗಾಲಾಗಿರುವ ಜಪಾನ್‌ ಆಡಳಿತಒಲಿಂಪಿಕ್ಸ್‌ ಕ್ರೀಡಾಕೂಟವನ್ನು 2021ಕ್ಕೆ ಮುಂದೂಡುವ ನಿರ್ಧಾರ ಪ್ರಕಟಿಸಿದೆ.

ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡುವ ಕುರಿತುಜಪಾನ್ ಪ್ರಧಾನಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಶಾಂತಿ ಕಾಲದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದು ಇದೇ ಮೊದಲು.

'ಒಂದು ವರ್ಷದ ಅವಧಿಗೆ ಕ್ರೀಡಾಕೂಟ ಮುಂದೂಡುವ ಬಗ್ಗೆ ನಾನು ಪ್ರಸ್ತಾವ ಮಂಡಿಸಿದೆ. ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಸಂಪೂರ್ಣ ಸಹಮತ ವ್ಯಕ್ತಪಡಿಸಿದರು' ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದ ಟೊಕಿಯೊ ನಗರಕ್ಕೆ ಈ ನಿರ್ಧಾರ ಹೊರೆಯಾಗಿ ಪರಿಣಮಿಸಲಿದೆ ಎಂಬ ಲೆಕ್ಕಾಚಾರಗಳು ಚಾಲ್ತಿಯಲ್ಲಿವೆ. ಅತ್ಯುತ್ತಮ ಸಿದ್ಧತೆಗಾಗಿ ನಗರಾಡಳಿತ ಮತ್ತು ಜಪಾನ್ ಸರ್ಕಾರಗಳು ವಿಶ್ವದ ಹಲವೆಡೆಯಿಂದ ಹೊಗಳಿಕೆ ಪಡೆದುಕೊಂಡಿದ್ದವು. ಕೆಲ ಕ್ರೀಡಾಕೂಟಗಳ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದವು.

ಮುಂದೂಡಿಕೆ ಒತ್ತಡ ಹೇರಿದ ಐಒಸಿ, ಕೋವಿಡ್-19 ಹರಡುವುದನ್ನು ತಡೆಗಟ್ಟಲು ಪ್ರಪಂಚದಾದ್ಯಂತ ಸುಮಾರು 170 ಕೋಟಿಗೂ ಹೆಚ್ಚು ಜನರು ಲಾಕ್‌ಡೌನ್ ಆಗಿದ್ದಾರೆ ಎಂದಿತ್ತು.

ಸೋಂಕು ಭೀತಿಯಿಂದಾಗಿ ಕ್ರೀಡಾಪಟುಗಳ ತರಬೇತಿ ಅಸಾಧ್ಯವಾಗಿದೆ. ಇದರಿಂದ ಅಪಾಯಕ್ಕೆ ಒಳಗಾಗಲಿದ್ದೇವೆ ಎಂದಿದ್ದ ಐಒಸಿ ಆರಂಭದಲ್ಲೇ ಕ್ರೀಡಾಕೂಟ ಮುಂದೂಡಿಕೆ ನಿರ್ಧಾರ ಕೈಗೊಳ್ಳಲು ನಾಲ್ಕು ವಾರಗಳ ಗಡುವನ್ನು ನೀಡಿತ್ತು.

ಜುಲೈ 24ರಿಂದ ಟೋಕಿಯೊದಲ್ಲಿ ಕ್ರೀಡಾಕೂಟ ಆರಂಭವಾಗಬೇಕಿತ್ತು. ಇದುವರೆಗೆ ಜಪಾನ್‌ ಸರ್ಕಾರ ಮತ್ತು ಒಲಿಂಪಿಕ್‌ ಅಧಿಕಾರಿಗಳು, ನಿಗದಿಯಂತೆಯೇ ಒಲಿಂಪಿಕ್ ನಡೆಸುವುದಾಗಿ ಬಿಗಿಪಟ್ಟು ಹಿಡಿದಿದ್ದವು. ಆದರೆ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದ್ದರಿಂದ ಅಥ್ಲೀಟುಗಳಿಂದ ಮತ್ತು ಕ್ರೀಡಾ ಫೆಡರೇಷನ್‌ಗಳಿಂದ ಕ್ರೀಡಾಕೂಟ ಮುಂದೂಡಿಕೆಗೆ ಒತ್ತಾಯ ಕೇಳಿಬಂದಿತ್ತು.

ಭಾನುವಾರ ನಡೆದ ಐಒಸಿ ಸಭೆಗೂ ಮುನ್ನ ಅಂತರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಥಾಮಸ್‌ ಬಾಚ್‌ ಅವರಿಗೆ ಪತ್ರ ಬರೆದಿದ್ದ ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್‌ ಕೊ, ಒಲಿಂಪಿಕ್ ಮುಂದೂಡುವಂತೆ ಆಗ್ರಹಿಸಿದ್ದರು.

ಒಲಿಂಪಿಕ್ಸ್‌ ಕುರಿತು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದ್ದ ಜಪಾನ್‌ ಪ್ರಧಾನಿ ಶಿಂಜೊ ಅಬೆ, ‘ಕ್ರೀಡಾಕೂಟ ಮುಂದೂಡಬೇಕಾದ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ’ ಎಂದಿದ್ದರು.

ಒಲಿಂಪಿಕ್‌ ಕ್ರೀಡೆಗಳನ್ನು ಮುಂದೂಡಬೇಕು ಎಂದು ಕೊಲಂಬಿಯಾ, ಸ್ಲೊವೇನಿಯಾದ ಒಲಿಂಪಿಕ್‌ ಸಮಿತಿಗಳು ಮತ್ತು ಯುಎಸ್‌ಎ ಈಜು ಮಂಡಳಿ ಒತ್ತಾಯಿಸಿದ್ದವು. ವಿಶ್ವ ಅಥ್ಲೆಟಿಕ್ಸ್‌ ಮುಖ್ಯಸ್ಥ ಸೆಬಾಸ್ಟಿಯನ್‌ ಕೊ ಅವರೂ ಕ್ರೀಡೆಗಳನ್ನು ಮುಂದೂಡುವಂತೆ ಈ ಮೊದಲೇ ಕರೆ ನೀಡಿದ್ದರು.

ಒಂದು ಹೆಜ್ಜೆ ಮುಂದೆ ಸಾಗಿದ್ದ ಕೆನಡಾ ಮತ್ತು ಆಸ್ಟ್ರೇಲಿಯಾಒಲಿಂಪಿಕ್‌ ಸಂಸ್ಥೆಯು, ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಿಂದ ಹಿಂದೆ ಸರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT