‘ಪವನಂಜಯ’ನ ಒಲಿಂಪಿಕ್ಸ್ ಓಟಕ್ಕೆ 100!

ಬೆಂಗಳೂರು: ಪ್ರತಿಬಾರಿ ಒಲಿಂಪಿಕ್ಸ್ ನಡೆದಾಗಲೂ ಕರ್ನಾಟಕದ ಕ್ರೀಡಾಪ್ರೇಮಿಗಳಿಗೆ ನೆನಪಾಗುವ ಹೆಸರು ಪಡೆಪ್ಪ ಧರೆಪ್ಪ ಚೌಗುಲೆ. ಕೊರೊನಾದಿಂದಾಗಿ ಈ ಬಾರಿಯ ಒಲಿಂಪಿಕ್ ಕೂಟ ಮುಂದಕ್ಕೆ ಹೋಗಿದೆ. ಇದೇ ಹೊತ್ತಿನಲ್ಲಿ ಬೆಳಗಾವಿಯ ಚೌಗುಲೆ ಅವರ ಸಾಧನೆಗೆ ಈಗ 100 ವರ್ಷ ತುಂಬಿದೆ.
ಕರ್ನಾಟಕದ (ಆಗಿನ ಮುಂಬೈ ಪ್ರಾಂತ್ಯ) ಚೌಗುಲೆ 1920ರ ಆಗಸ್ಟ್ 14 ರಿಂದ ಸೆಪ್ಟೆಂಬರ್ 12ರವರೆಗೆ ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು. ಮ್ಯಾರಥಾನ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಅವರು ಪದಕ ಗೆದ್ದಿರಲಿಲ್ಲ. ಆದರೆ ತಮ್ಮ ದಿಟ್ಟತನದಿಂದ ಕ್ರೀಡಾಭಿಮಾನಿಗಳ ಮನ ಗೆದ್ದುಕೊಂಡಿದ್ದರು.
ಅವತ್ತು ಸುರಿಯುತ್ತಿದ್ದ ಮಳೆಯಿಂದಾಗಿ ಆ್ಯಂಟ್‌ವರ್ಪ್‌ನ ರಸ್ತೆಗಳು ಹದಗೆಟ್ಟಿದ್ದವು. ಅದರಲ್ಲಿಯೇ ಓಟಗಾರರು ಓಡಿದ್ದರು. ಅದರಲ್ಲಿ ಫಿನ್ಲೆಂಡ್‌ನ ದಂತಕತೆ ಪಾವೊ ನೂರ್ಮಿ ಮೊದಲಿಗರಾಗಿದ್ದರು. ಚೌಗುಲೆ (2 ಗಂಟೆ 50 ನಿಮಿಷ 45.2 ಸೆಕೆಂಡು) 19ನೇ ಸ್ಥಾನ ಪಡೆದಿದ್ದರು.
ಬರಿಗಾಲಿನಲ್ಲಿ ಓಡಿ ರೂಢಿಯಿದ್ದ ಪಡೆಪ್ಪ ಒಲಿಂಪಿಕ್ಸ್‌ನಲ್ಲಿ ನಿಯಮಕ್ಕೆ ಬದ್ಧರಾಗಿ ಬೂಟು ಹಾಕಿಕೊಂಡು ಓಡಿದರು. ಪಾದ, ಬೆರಳುಗಳಲ್ಲಿ ಗಾಯಗಳಾಗಿ ರಕ್ತ ಒಸರುತ್ತಿತ್ತು. ಕುಂಟುತ್ತಲೇ ಓಡಿ ಗುರಿಮುಟ್ಟಿದ್ದ ಪಡೆಪ್ಪ ಅವರ ಕ್ರೀಡಾಸ್ಪೂರ್ತಿ ಜನಜನಿತವಾಯಿತು. ಬೆಳಗಾವಿಗೆ ಮರಳಿದ ಅವರಿಗೆ ’ಪವನಂಜಯ‘ ಎಂಬ ಬಿರುದು ನೀಡಿ ಸತ್ಕರಿಸಲಾಯಿತು. ಅವರ ಬಗ್ಗೆ ಲಾವಣಿಗಳು (ಜನಪದ ಪದ್ಯ) ರಚನೆಯಾದವು.
ಆ ಒಲಿಂಪಿಕ್ಸ್‌ನಲ್ಲಿ 29 ದೇಶಗಳಿಂದ ಸುಮಾರು 2606 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ ತಂಡದಲ್ಲಿ ನಾಲ್ವರು ಓಟಗಾರರು ಮತ್ತು ಇಬ್ಬರು ಕುಸ್ತಿಪಟುಗಳು ಇದ್ದರು.
ಕ್ರೀಡಾ ಕುಟುಂಬ: ಪಡೆಪ್ಪ ಅವರ ತಂದೆ ರೈತರಾಗಿದ್ದರು. ಅಂಗಸಾಧನೆ ಹವ್ಯಾಸವಾಗಿತ್ತು. ಆ ಮೂಲಕ ಮಗ ಪಡೆಪ್ಪನಿಗೂ ಅದು ರೂಢಿಯಾಗಿತ್ತು. ಕುಸ್ತಿಯ ಜೊತೆಗೆ ಓಟದ ಹವ್ಯಾಸವೂ ಅವರನ್ನು ಆವರಿಸಿಕೊಂಡಿತು.
‘ನನ್ನ ಅಜ್ಜ ಪಡೆಪ್ಪನವರು 16ನೇ ವಯಸ್ಸಿನಲ್ಲಿದ್ದಾಗ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಬೆಳಗಾವಿಯಿಂದ ಖಾನಾಪುರದವರೆಗೆ (27 ಕಿ.ಮೀ) ಓಡುತ್ತಿದ್ದರಂತೆ. ಅಲ್ಲಿಯ ಹೊಳೆಯಲ್ಲಿ ಮಿಂದು ಮತ್ತೆ ಬೆಳಗಾವಿಗೆ ಓಡಿಬರುತ್ತಿದ್ದರಂತೆ. ಚಲಿಸುವ ರೈಲುಗಳನ್ನು ಬೆನ್ನತ್ತಿ ಓಡುವುದನ್ನು ರೂಢಿಸಿಕೊಂಡಿದ್ದರು. ಸರ್ದಾರ್ ಶಾಲೆಯಲ್ಲಿ ಅವರು ಓದುವಾಗ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹಿಸಿದ್ದರಂತೆ’ ಎಂದು ಪಡೆಪ್ಪ ಅವರ ಮರಿಮೊಮ್ಮಗ, ಟೇಬಲ್ ಟೆನಿಸ್ ಕೋಚ್ ವಿಪುಲ್ ಚೌಗುಲೆ ‘ಪ್ರಜಾವಾಣಿ’ಗೆ ಹೇಳಿದರು.
1958ರಲ್ಲಿ ಪಡೆಪ್ಪ ನಿಧನರಾದರು. ಆದರೆ, ಅವರ ಕ್ರೀಡಾಪ್ರೀತಿಯನ್ನು ಕುಟುಂಬವು ಮುಂದುವರಿಸಿದೆ. ವಿಪುಲ್ ಅವರ ತಮ್ಮ ದೀಪಕ್ ಚೌಗುಲೆ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದಾರೆ. ದೀಪಕ್ ಪತ್ನಿ ಮಿಹಿರಾ ಅವರು ಬಿಸಿಸಿಐ ಅಂಪೈರ್ಸ್ ಪ್ಯಾನೆಲ್‌ಗೆ ಆಯ್ಕೆಯಾಗಿರುವ ಕರ್ನಾಟಕದ ಮೊದಲ ಮಹಿಳಾ ಅಂಪೈರ್.
ಆದರೆ, ಇದುವರೆಗೂ ‘ಪವನಂಜಯ’ನ ಸಾಧನೆಯನ್ನು ಗುರುತಿಸುವ ಕೆಲಸವನ್ನು ಸರ್ಕಾರವಾಗಲಿ, ಕ್ರೀಡಾ ಸಂಸ್ಥೆಗಳಾಗಲಿ ಮಾಡಿಲ್ಲ ಎಂಬ ಕೊರಗು ಕುಟುಂಬದಲ್ಲಿದೆ.
‘ಸಾಧಕರನ್ನು ಗುರುತಿಸುವ ಕೆಲಸವನ್ನು ಆಡಳಿತವೇ ಮಾಡಬೇಕು. ನಾವು ಇಂದಿಗೂ ಯಾರಿಗೂ ಮನವಿ ಸಲ್ಲಿಸಿಲ್ಲ. ಗೌರವಾದರಗಳನ್ನು ಕೇಳಿಪಡೆಯುವುದು ಸರಿಯಲ್ಲ’ ಎಂದು ವಿಪುಲ್ ಖಡಾಖಂಡಿತವಾಗಿ ಹೇಳುತ್ತಾರೆ.
ನಾರ್ಮನ್ ಪ್ರಿಚರ್ಡ್ ಮೊದಲ ಭಾರತೀಯ?
1900ರ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಸ್ಪರ್ಧಿಸಿದ್ದ ಬ್ರಿಟಿಷ್ ವ್ಯಕ್ತಿ ನಾರ್ಮನ್ ಪ್ರಿಚರ್ಡ್ ಅವರನ್ನೇ ಇದುವರೆಗೂ ಮೊದಲ ಭಾರತೀಯ ಎನ್ನಲಾಗುತ್ತಿದೆ. ಬೆಳಗಾವಿಯ ಪಿ. ಡಿ. ಚೌಗುಲೆ ಅವರೇ ಭಾರತದ ಪ್ರಥಮ ಅಥ್ಲೀಟ್ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಇತಿಹಾಸಕಾರರ ಸಂಘಟನೆಯ ಸ್ಮರಣಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ದಾಖಲೆಗಳಲ್ಲಿ ನಾರ್ಮನ್ ಅವರೇ ಭಾರತವನ್ನು ಪ್ರತಿನಿಧಿಸಿದ್ದರು ಎಂದು ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.