ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕ ಗೆಲ್ಲಲು ಪ್ರಧಾನಿ ಮಾತುಗಳು ಶಕ್ತಿ ತುಂಬಿದವು: ಮನ್‌ಪ್ರೀತ್ ಸಿಂಗ್‌

Last Updated 10 ಆಗಸ್ಟ್ 2021, 13:44 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಪ್ರೋತ್ಸಾಹದ ಮಾತುಗಳು ತಂಡದಲ್ಲಿ ಸಕಾರಾತ್ಮಕ ಶಕ್ತಿ ತುಂಬಿದವು. 41 ವರ್ಷಗಳ ಬಳಿಕ ಪದಕವೊಂದನ್ನು ಗೆಲ್ಲಲು ಅವರ ನುಡಿಗಳು ಸ್ಫೂರ್ತಿಯಾದವು ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಟೋಕಿಯೊ ಕೂಟದ ಸೆಮಿಫೈನಲ್‌ನಲ್ಲಿ ಮನ್‌ಪ್ರೀತ್ ಬಳಗವು ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ಬೆಲ್ಜಿಯಂಗೆ 2-5ರಿಂದ ಸೋತಿತ್ತು. ಪಂದ್ಯದ ಬಳಿಕ ಮೋದಿ ಅವರು ಮನ್‌ಪ್ರೀತ್ ಮತ್ತು ಮುಖ್ಯ ತರಬೇತುದಾರ ಗ್ರಹಾಂ ರೀಡ್ ಅವರಿಗೆ ಕರೆ ಮಾಡಿ ಸಂತೈಸಿ, ಕಂಚಿನ ಪದಕದ ಪಂದ್ಯಕ್ಕೆ ಸಜ್ಜುಗೊಳ್ಳುವಂತೆ ಪ್ರೇರೇಪಿಸಿದ್ದರು.

‘ಸೆಮಿಫೈನಲ್‌ನಲ್ಲಿ ಸೋತಾಗ ತಂಡದಲ್ಲಿ ನಿರಾಸೆ ಆವರಿಸಿತ್ತು. ಈ ವೇಳೆ ಕೋಚ್‌ ಅವರು ಪ್ರಧಾನ ಮಂತ್ರಿ ನಿಮ್ಮೊಂದಿಗೆ ಮಾತನಾಡಲು ಬಯಸಿರುವುದಾಗಿ ತಿಳಿಸಿದರು. ಈ ವೇಳೆ ಮಾತನಾಡಿದ ಮೋದಿ ಅವರು, ನೀವೆಲ್ಲ ಚೆನ್ನಾಗಿ ಆಡಿದ್ದೀರಿ, ನಿರಾಶರಾಗಬೇಡಿ ಮುಂದಿರುವ ಪಂದ್ಯದತ್ತ ಗಮನಹರಿಸಿ, ಇಡೀ ದೇಶಕ್ಕೆ ನಿಮ್ಮ ಕುರಿತು ಹೆಮ್ಮೆಯಿದೆ ಎಂದರು. ಇದು ತಂಡದಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸಲು ಕಾರಣವಾಯಿತು‘ ಎಂದು ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮನ್‌ಪ್ರೀತ್ ಹೇಳಿದ್ದಾರೆ.

‘ಮೋದಿ ಅವರ ಮಾತುಗಳ ಬಳಿಕ ನಾವು ಸಭೆ ಸೇರಿದೆವು. ನಮಗೆ ಇನ್ನೊಂದು ಅವಕಾಶವಿದೆ. ಖಾಲಿ ಕೈಯಲ್ಲಿ ಮರಳಿದರೆ ಜೀವನಪರ್ಯಂತ ವಿಷಾದಿಸಬೇಕಾಗುತ್ತದೆ. ನಮಗೆ ನಮಗೆ 60 ನಿಮಿಷಗಳ ಕಾಲಾವಕಾಶವಿದೆ. ಈ ಒಂದು ತಾಸಿನ ಅವಧಿಯಲ್ಲಿ ಸಾಧ್ಯವಾದಷ್ಟು ಶ್ರೇಷ್ಠ ಸಾಮರ್ಥ್ಯ ತೋರಿದರೆ ನಗುಮೊಗದೊಂದಿಗೆ ತವರಿಗೆ ಮರಳಬಹುದು ಎಂದು ಮಾತನಾಡಿಕೊಂಡೆವು‘ ಎಂದು ಮನ್‌ಪ್ರೀತ್ ಹೇಳಿದ್ದಾರೆ.

ಕಂಚಿನ ಪದಕದ ಪಂದ್ಯದಲ್ಲಿ ಭಾರತ ತಂಡವು 5–4ರಿಂದ ಜರ್ಮನಿಯನ್ನು ಸೋಲಿಸಿತ್ತು.

‘ಕ್ವಾರಂಟೈನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿ, ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಆಟಗಾರರ ಕುರಿತು ತಿಳಿದುಕೊಂಡೆವು. ಅದೂ ನಮಗೆ ಸ್ಫೂರ್ತಿಯಾಯಿತು‘ ಎಂದೂ ಮನ್‌ಪ್ರೀತ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT