ಗುರುವಾರ , ಏಪ್ರಿಲ್ 9, 2020
19 °C
ವ್ಯಾಪಿಸುತ್ತಿರುವ ಕೊರೊನಾ: ಕ್ರೀಡಾ ಸಂಸ್ಥೆಗಳಿಂದ ಪತ್ರ; ಫ್ರಾನ್ಸ್‌ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರಯಾಣಕ್ಕೆ ನಿರ್ಬಂಧ

ಒಲಿಂಪಿಕ್ಸ್‌ ಮುಂದೂಡಿಕೆಗೆ ಹೆಚ್ಚಿದ ಒತ್ತಡ

ರಾಯಿಟರ್ಸ್‌/ ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಕೊರೊನಾ ಸೋಂಕಿನ ಪಿಡುಗು ಹೆಮ್ಮಾರಿಯಂತೆ ಎಲ್ಲೆಡೆ ವ್ಯಾಪಿಸುತ್ತಿರುವಂತೆಯೇ ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು ಮುಂದೂ ಡುವಂತೆ ವಿವಿಧ ದೇಶಗಳ ಒಲಿಂಪಿಕ್‌ ಸಮಿತಿಗಳಿಂದ, ಪ್ರಮುಖ ಕ್ರೀಡಾ ಫೆಡರೇಷನ್‌ಗಳಿಂದ ಒತ್ತಡ ಹೆಚ್ಚುತ್ತಿದೆ.

ಅಮೆರಿಕದ ಅಥ್ಲೆಟಿಕ್ಸ್‌ ಸಂಸ್ಥೆ (ಯುಎಸ್‌ಎ ಟ್ರ್ಯಾಕ್‌ ಅಂಡ್ ಫೀಲ್ಡ್‌), ಈಜು ಸಂಸ್ಥೆ, ಫ್ರಾನ್ಸ್‌ನ ಈಜು ಫೆಡ ರೇಷನ್‌, ನಾರ್ವೆಯ ಒಲಿಂಪಿಕ್‌ ಸಮಿತಿ ಸೇರಿದಂತೆ ವಿವಿಧ ಕ್ರೀಡಾ ಸಂಸ್ಥೆಗಳು, ಟೋಕಿಯೊ ಕ್ರೀಡೆಗಳನ್ನು ಮುಂದೂ ಡುವಂತೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ಯನ್ನು ಶನಿವಾರ ಒತ್ತಾಯಿಸಿವೆ. ಜುಲೈ 25 ರಿಂದ ಆಗಸ್ಟ್‌ 3ರವರೆಗೆ 29ನೇ ಒಲಿಂಪಿಕ್ಸ್‌ ನಿಗದಿಯಾಗಿದೆ.

ಅಮೆರಿಕದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್‌ ಸಮಿತಿ (ಯುಎಸ್‌ ಒಪಿಸಿ) ಚೀಫ್‌ ಎಕ್ಸಿಕ್ಯೂಟಿವ್‌ ಸಾರಾ ಹಿರ್ಷ್‌ಲ್ಯಾಂಡ್‌ ಅವರಿಗೆ ಈ ಸಂಬಂಧ ಅಥ್ಲೆಟಿಕ್‌ ಸಂಸ್ಥೆ ಪತ್ರ ಬರೆದಿದೆ. ‘ಪ‍್ರಸಕ್ತ ಸನ್ನಿವೇಶದಲ್ಲಿ ನಮ್ಮ ಅಥ್ಲೀಟುಗಳ ಹಿತಾಸಕ್ತಿಯಿಂದ ಕ್ರೀಡೆಗಳನ್ನು ಮುಂದೂಡುವುದು ಶ್ರೇಯಸ್ಕರ’ ಎಂದು ಯುಎಸ್‌ಎ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಚೀಫ್‌ ಎಕ್ಸಿಕ್ಯೂಟಿವ್‌ ಮ್ಯಾಕ್‌ ಸೀಗೆಲ್‌ ಪತ್ರದಲ್ಲಿ ತಿಳಿಸಿದ್ದಾರೆ.

ಕ್ರೀಡೆಗಳನ್ನು ಮುಂದೂಡುವಂತೆ ಅಮೆರಿಕ ಈಜು ಫೆಡರೇಷನ್‌ ಶುಕ್ರವಾರ ಒಲಿಂಪಿಕ್‌ ಮತ್ತು ಪ್ಯಾರಾಲಿಂಪಿಕ್‌ ಸಮಿತಿಯನ್ನು ಶುಕ್ರವಾರ ಒತ್ತಾಯಿಸಿತ್ತು. ಒಲಿಂಪಿಕ್ಸ್‌ ನಿಗದಿಯಂತೆ ನಡೆಸುವ ಬಗ್ಗೆ ಐಒಸಿ ಗೊಂದಲದಲ್ಲಿದೆ. ಕ್ರೀಡೆಗಳಿಗೆ ಇನ್ನೂ ನಾಲ್ಕು ತಿಂಗಳು ಇದ್ದು, ಈಗಲೇ ತೀರ್ಮಾನಕ್ಕೆ ಬಂದರೆ ಅದು ಅವಸರದ ನಿರ್ಧಾರವಾಗುತ್ತದೆ ಎಂದು ಐಒಸಿ ಅಧ್ಯಕ್ಷ ಥಾಮಸ್‌ ಬ್ಯಾಚ್‌ ಹೇಳಿದ್ದಾರೆ.

ನಾರ್ವೆ ಒತ್ತಾಯ

ಓಸ್ಲೊ: ಕೊರೊನಾ ಪಿಡುಗು ನಿಯಂ ತ್ರಣಕ್ಕೆ ಬರುವವರೆಗೆ ಒಲಿಂಪಿಕ್ಸ್‌ ಮುಂದಕ್ಕೆ ಹಾಕಬೇಕು ಎಂದು ನಾರ್ವೆಯ ಒಲಿಂಪಿಕ್‌ ಸಮಿತಿಯು ಐಒಸಿಯನ್ನು ಒತ್ತಾಯಿಸಿದೆ.

ಈ ಮೊದಲು, ಕೊಲಂಬಿಯಾ, ಸ್ಲೊವೇನಿಯಾ ದೇಶಗಳ ಒಲಿಂಪಿಕ್‌ ಸಮಿತಿಗಳೂ ಕ್ರೀಡೆಗಳನ್ನು ಮುಂದೂಡು ವಂತೆ ಆಗ್ರಹಿಸಿದ್ದವು. ಐಒಸಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು. ಇದರಿಂದ ಎಲ್ಲರಿಗೂ ತಯಾರಿ ನಡೆಸಲು ಸಾಧ್ಯವಾಗುತ್ತದೆ ಎಂದು ಐಒಸಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಈಜು ಫೆಡರೇಷನ್‌ ಒತ್ತಾಯ

ಪ್ಯಾರಿಸ್: ಅಮೆರಿಕದ ಕ್ರೀಡಾ ಸಂಸ್ಥೆಗಳ ಕರೆಗೆ ಧ್ವನಿಗೂಡಿಸಿರುವ ಫ್ರಾನ್ಸ್‌ನ ಈಜು ಸಂಸ್ಥೆ, ಕ್ರೀಡೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿದೆ.

‘2020ರ ಕ್ರೀಡೆಗಳನ್ನು ನ್ಯಾಯೋಚಿತವಾಗಿ ಸಂಘಟಿಸಲು ಪ್ರಸಕ್ತ ಸನ್ನಿವೇಶವು ಸೂಕ್ತವಾಗಿಲ್ಲ’ ಎಂದು ಫೆಡರೇಷನ್‌ ತನ್ನ ಕಾರ್ಯಕಾರಿ ಸಮಿತಿ ಸಭೆಯ ನಂತರ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹೇಳಿದೆ.

‘ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಒಲಿಂಪಿಕ್ಸ್‌ ನಡೆಸಿದರೂ ಅದು ಸಿದ್ಧತೆಯ ದೃಷ್ಟಿಯಿಂದ ಎಲ್ಲರಿಗೂ ನ್ಯಾಯ ಒದಗಿಸಿದಂತೆ ಆಗುವುದಿಲ್ಲ’ ಎಂದು ಈಜು ಫೆಡರೇಷನ್‌ ತಿಳಿಸಿದೆ.

ಮುಂದಿನ ವರ್ಷ ನಡೆಸಿ

ಜಮೈಕಾ: ಒಲಿಂಪಿಕ್ ಕ್ರೀಡೆಗಳನ್ನು 2021ರವರೆಗೆ ಮುಂದೂಡಬೇಕು ಎಂದು ಉಸೇನ್‌ ಬೋಲ್ಟ್‌ ಅವರ ದೀರ್ಘ ಕಾಲದ ಕೋಚ್‌ ಹೇಳಿದ್ದಾರೆ. ‘ನನ್ನ ಶಿಫಾರಸು ಅಂದರೆ ಮುಂದಿನ ವರ್ಷಕ್ಕೆ ಮುಂದೂಡುವುದು’ ಎಂದು ಜಮೈಕದ ಸ್ಪ್ರಿಂಟ್‌ ಕೋಚ್‌ ಗ್ಲೆನ್‌ ಮಿಲ್ಸ್‌ ರಾಯಿಟರ್ಸ್‌ಗೆ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ ನಿಗದಿ ಸಮಯಕ್ಕೆ ನಡೆಯುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಈ ಸೋಂಕು ವಿಶ್ವವ್ಯಾಪಿಯಾಗಿದೆ. ಕೆಲವು ದೇಶಗಳಲ್ಲಿ ಇದು
ವೇಗ ಪಡೆದುಕೊಳ್ಳತೊಡಗಿದೆ’ ಎಂದಿದ್ದಾರೆ.

ಮುಂದೂಡಲು ಬ್ರೆಜಿಲ್‌ ಒತ್ತಾಯ

ರಿಯೊ ಡಿ ಜನೈರೊ: ಕೊರೊನಾ ವೈರಸ್‌ ಕಾರಣ ಒಲಿಂಪಿಕ್ಸ್‌ ಕ್ರೀಡೆಗಳನ್ನು ಮುಂದೂಡಬೇಕು ಎಂದು ಶನಿವಾರ ಒತ್ತಾಯಿಸಿರುವ ಬ್ರೆಜಿಲ್‌ ಒಲಿಂಪಿಕ್‌ ಸಮಿತಿ (ಸಿಒಬಿ), ಮುಂದಿನ ವರ್ಷದ ಇದೇ ಅವಧಿಯಲ್ಲಿ (2021ರ ಜುಲೈ 24– ಆಗಸ್ಟ್‌ 9) ‌ನಡೆಸುವಂತೆ ಸಲಹೆ ನೀಡಿದೆ.

ಟೋಕಿಯೊ ಕ್ರೀಡೆಗಳಿಗೆ ಮೊದಲೇ ನಡೆಯುವ ಒಲಿಂಪಿಕ್ಸ್‌ ಕ್ವಾಲಿಫೈಯಿಂಗ್‌ ಮತ್ತು ಇತರ ಟೂರ್ನಿಗಳಿಗೆ ಫಿಟ್ನೆಸ್ ಹೊಂದುವ ಬಗ್ಗೆ ಅಥ್ಲೀಟುಗಳು ಚಿಂತಾಕ್ರಾಂತರಾಗಿದ್ದಾರೆ. ‘ಒಲಿಂಪಿಕ್ಸ್‌ಗೆ ಒಳ್ಳೆಯ ಸಿದ್ಧತೆ, ಮನಃಸ್ಥಿತಿಯೊಡನೆ ಹೋಗಬೇಕೆಂಬುದು ಪ್ರತಿಯೊಬ್ಬ ಅಥ್ಲೀಟ್‌ ಕನಸಾಗಿದೆ ಎಂಬುದು ಹಿಂದೆ ಜೂಡೊಪಟುವಾಗಿದ್ದು, ಈಗ ಕೋಚ್‌ ಆಗಿರುವ ನನ್ನ ಅನುಭವದ ಮಾತು’ ಎಂದು ಸಿಒಬಿ ಅಧ್ಯಕ್ಷ ಪೌಲೊ ವಂಡರ್ಲಿ ಹೇಳಿದ್ದಾರೆ.

ಈ ಹಿಂದಿನ ಒಲಿಂಪಿಕ್ಸ್‌ 2016ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದಿತ್ತು. ಆಗ ಬ್ರೆಜಿಲ್‌ ಏಳು ಚಿನ್ನ, ಆರು ಬೆಳ್ಳಿ, ಆರು ಕಂಚಿನ ಪದಕಗಳೊಡನೆ ಪದಕ ಪಟ್ಟಿಯಲ್ಲಿ 13ನೇ ಸ್ಥಾನ ಗಳಿಸಿ ತನ್ನ ಸರ್ವಶ್ರೇಷ್ಠ ಸಾಧನೆ ದಾಖಲಿಸಿತ್ತು.

‘ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಮೇಲೆ ತಮಗೆ ಪೂರ್ಣ ವಿಶ್ವಾಸವಿದೆ. ಆದರೆ ಕ್ರೀಡೆಗಳನ್ನು ಮುಂದೂಡುವುದು ಒಳ್ಳೆಯ ಪರಿಹಾರ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು