ಭಾನುವಾರ, ಏಪ್ರಿಲ್ 18, 2021
23 °C
ಪ್ರೊ ಕಬಡ್ಡಿ: ಈ ಸಲ ಆಡಿದ ಮೊದಲ ಪಂದ್ಯದಲ್ಲೇ ಸೂಪರ್–10 ಸಾಧನೆ ಮಾಡಿದ ದೀಪಕ್‌ ಹೂಡಾ

ಮುಂಬಾ ಮೇಲೆರಗಿದ ಪಿಂಕ್‌ ಪ್ಯಾಂಥರ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಆಟದ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಏಳನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.

ಗಚಿಬೌಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪೈಪೋಟಿಯಲ್ಲಿ ಪಿಂಕ್‌ ಪ್ಯಾಂಥರ್ಸ್‌ 42–23ರಲ್ಲಿ ಯು ಮುಂಬಾ ತಂಡವನ್ನು ಪರಾಭವಗೊಳಿಸಿತು.

ಪ್ಯಾಂಥರ್ಸ್‌ ತಂಡದ ದೀಪಕ್‌ ಹೂಡಾ, ಚಾಕಚಕ್ಯತೆಯ ರೈಡಿಂಗ್‌ಗಳ ಮೂಲಕ ಮುತ್ತಿನಗರಿಯ ಅಭಿಮಾನಿಗಳನ್ನು ಮುದಗೊಳಿಸಿದರು. ಅವರು ಒಟ್ಟು 11 ಪಾಯಿಂಟ್ಸ್‌ ಕಲೆಹಾಕಿದರು. ಇದರೊಂದಿಗೆ ಲೀಗ್‌ನಲ್ಲಿ 25ನೇ ಬಾರಿ ಸೂಪರ್‌–10 ಸಾಧನೆ ಮಾಡಿದರು.

ಚೊಚ್ಚಲ ರೈಡ್‌ನಲ್ಲೇ ಮುಂಬಾ ತಂಡದ ರಕ್ಷಣಾ ಕೋಟೆ ಭೇದಿಸಿದ ದೀಪಕ್‌ ಹೂಡಾ, ಹರೇಂದ್ರ ಕುಮಾರ್‌ ಮತ್ತು ಸುರೀಂದರ್‌ ಸಿಂಗ್‌ ಅವರನ್ನು ಔಟ್‌ ಮಾಡಿ ಪ್ಯಾಂಥರ್ಸ್‌ ಖಾತೆಗೆ ಎರಡು ಪಾಯಿಂಟ್ಸ್‌ ಸೇರ್ಪಡೆ ಮಾಡಿದರು. ನಾಲ್ಕನೇ ರೈಡ್‌ನಲ್ಲಿ ದೀಪಕ್‌ ನರ್ವಾಲ್‌ ಒಂದು ಪಾಯಿಂಟ್ ಹೆಕ್ಕಿದರು.

‘ಡೂ ಆರ್‌ ಡೈ’ ರೈಡ್‌ನಲ್ಲಿ ಹೂಡಾ ಅವರನ್ನು ಔಟ್‌ ಮಾಡಿದ ಡಾಂಗ್‌ ಜಿಯೊನ್‌ ಲೀ, ಮುಂಬಾ ಹಿನ್ನಡೆಯನ್ನು 1–3ಕ್ಕೆ ತಗ್ಗಿಸಿದರು. ನಂತರ ಪ್ಯಾಂಥರ್ಸ್‌ ಪರಾಕ್ರಮ ಮೆರೆಯಿತು. ಏಳನೇ ನಿಮಿಷದಲ್ಲಿ ಮುಂಬಾ ತಂಡದ ಆವರಣ ಖಾಲಿ ಮಾಡಿದ ಜೈಪುರದ ತಂಡ 10–2 ಮುನ್ನಡೆ ಪಡೆಯಿತು.

ಬಳಿಕ ಮುಂಬಾ ಇನ್ನಷ್ಟು ಮಂಕಾಯಿತು. ಮೊದಲಾರ್ಧದ ಆಟ ಮುಗಿಯಲು ಒಂದು ನಿಮಿಷ ಇದ್ದಾಗ ಮತ್ತೊಮ್ಮೆ ಆಲೌಟ್‌ ಆದ ಈ ತಂಡವು 9–22ರಿಂದ ಹಿನ್ನಡೆ ಅನುಭವಿಸಿತು.

ದ್ವಿತೀಯಾರ್ಧದ ಮೊದಲ ಹತ್ತು ನಿಮಿಷಗಳ ಅವಧಿಯಲ್ಲಿ ಎರಡು ತಂಡಗಳು ಸಮಬಲದಿಂದ ಹೋರಾಡಿದವು. ಇದರ ನಡುವೆಯೂ ಪ್ಯಾಂಥರ್ಸ್‌ ತಂಡವು ಮುನ್ನಡೆ (27–15) ಕಾಪಾಡಿಕೊಂಡಿತು.

ಕೊನೆಯ ಐದು ನಿಮಿಷಗಳಲ್ಲಿ ದೀಪಕ್‌ ಹೂಡಾ ಆಟ ರಂಗೇರಿತು. ಸತತವಾಗಿ ರೈಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಅವರು ಅಂಗಳದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ 34–24 ಪಾಯಿಂಟ್ಸ್‌ನಿಂದ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿತು.

ಹಿರಿಯ ಆಟಗಾರರಾದ ರಾಕೇಶ್‌ ಕುಮಾರ್‌ ಮತ್ತು ಅನೂಪ್‌ ಕುಮಾರ್‌ ಅವರು ಕ್ರಮವಾಗಿ ಸ್ಟೀಲರ್ಸ್‌ ಮತ್ತು ಪುಣೇರಿ ತಂಡಗಳ ಕೋಚ್‌ ಆಗಿದ್ದರಿಂದ ಈ ಪೈಪೋಟಿ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.