ಭಾನುವಾರ, ಮೇ 29, 2022
21 °C

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಡೆಲ್ಲಿಗೆ ಆಘಾತ ನೀಡಿದ ಖಂಡೋಲ,ಹರಿಯಾಣ ಸ್ಟೀಲರ್ಸ್ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಯಕ ವಿಕಾಸ್ ಖಂಡೋಲ ಅವರ ಭರ್ಜರಿ ಆಟದ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು ಬಲಿಷ್ಠ ದಬಂಗ್ ಡೆಲ್ಲಿಗೆ ಆಘಾತ ನೀಡಿತು. 

ಇಲ್ಲಿಯ ಹೋಟೆಲ್‌ ಶೆರಟನ್ ಗ್ರ್ಯಾಂಡ್‌ ಆವರಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಹರಿಯಾಣ 36–33ರಿಂದ ಡೆಲ್ಲಿ ತಂಡಕ್ಕೆ ಸೋಲುಣಿಸಿತು.

ಹರಿಯಾಣ ಪರ ವಿಕಾಸ್‌ ಒಂಬತ್ತು ಟಚ್‌ ಪಾಯಿಂಟ್ಸ್ ಮತ್ತು ನಾಲ್ಕು ಬೋನಸ್ ಸೇರಿ ಒಟ್ಟು 13 ರೇಡಿಂಗ್‌ ಪಾಯಿಂಟ್ಸ್ ಕಲೆಹಾಕಿದರು. ವಿನಯ್‌ (7) ಮತ್ತು ಆಶಿಶ್ (4) ಕೂಡ ಮಿಂಚಿದರು.

ಪಂದ್ಯದ ಮೊದಲಾರ್ಧದಲ್ಲೇ ಹರಿಯಾಣ 19–11ರಿಂದ ಮುಂದಿತ್ತು. ಅದೇ ಲಯವನ್ನು ಮುಂದುವರಿಸಿಕೊಂಡು ಸಾಗಿತು.

ಡೆಲ್ಲಿ ತಂಡದ ಆಲ್‌ರೌಂಡರ್‌ ಸಂದೀಪ್ ನರ್ವಾಲ್‌ ಒಂಬತ್ತು ಪಾಯಿಂಟ್ಸ್ ಗಳಿಸಿದರು. ವಿಜಯ್‌ ಮತ್ತು ಅಶು ಮಲಿಕ್ ಕ್ರಮವಾಗಿ ಐದು ಮತ್ತು ಮೂರು ಪಾಯಿಂಟ್ಸ್ ಗಳಿಸಿದರು.

ಸ್ಟಾರ್‌ ರೇಡರ್ ನವೀನ್ ಕುಮಾರ್ ಇಲ್ಲದ ಡೆಲ್ಲಿ ಪೇಲವವಾಯಿತು.

ಹರಿಯಾಣ ಸ್ಟೀಲರ್ಸ್‌ಗೆ ಇದು ಐದನೇ ಜಯವಾಗಿದೆ. ಈ ಪಂದ್ಯದ ಅಂತ್ಯದಲ್ಲಿ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತ್ತು.

ಯುಪಿ ಯೋಧಾ ಜಯಭೇರಿ: ಮತ್ತೊಂದು ಹಣಾಹಣಿಯಲ್ಲಿ ಯುಪಿ ಯೋಧಾ ಸಂಘಟಿತ ಆಟವಾಡಿ 40–36ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಹಣಿಯಿತು.

ಬೆಂಗಾಲ್ ಪರ ನಾಯಕ, ತಾರಾ ರೇಡರ್‌ ಮಣಿಂದರ್ ಸಿಂಗ್ 19 ಪಾಯಿಂಟ್ಸ್ ಗಳಿಸಿದ್ದು ವ್ಯರ್ಥವಾಯಿತು. ಸುಖೇಶ್ ಹೆಗ್ಡೆ (9) ಕೂಡ ಉತ್ತಮ ಆಟವಾಡಿದರು. ಯೋಧಾ ತಂಡದ ಜಯದಲ್ಲಿ ಪ್ರದೀಪ್ ನರ್ವಾಲ್ (9) ಮತ್ತು ಸುರೇಂದರ್ ಗಿಲ್ (9) ಪ್ರಮುಖ ಪಾತ್ರ ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು