ಗುರುವಾರ , ಮೇ 26, 2022
24 °C
ಪ್ರದೀಪ್ ನರ್ವಾಲ್ ಮಿಂಚು

ಪ್ರೊ ಕಬಡ್ಡಿ: ಪಟ್ನಾ ಪೈರೆಟ್ಸ್‌ ವಿರುದ್ಧ ಯುಪಿ ಯೋಧಾಗೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶನಿವಾರ ನಡೆದ ಎರಡು ಪಂದ್ಯಗಳಲ್ಲಿ ರೋಚಕ ಫಲಿತಾಂಶ ಹೊರಹೊಮ್ಮಿತು. ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಲೀಗ್‌ ನ ಮೊದಲ ಪಂದ್ಯದಲ್ಲಿ ಯೋಧಾ ತಂಡವು 36–35ರಿಂದ ಪಟ್ನಾ ಪೈರೆಟ್ಸ್‌ ವಿರುದ್ಧ ಜಯಿಸಿತು.

ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 34–33ರಿಂದ ತೆಲುಗು ಟೈಟನ್ಸ್‌ ವಿರುದ್ಧ ಜಯಿಸಿತು. ಎರಡೂ ಪಂದ್ಯಗಳಲ್ಲಿ ಕೇವಲ ಒಂದು ಅಂಕ ಅಂತರದಿಂದ ತಂಡಗಳು ಜಯಿಸಿದ್ದು ವಿಶೇಷ. 

ಮೊದಲ ಪಂದ್ಯದಲ್ಲಿ  ಯುಪಿ ಯೋಧಾ ಮತ್ತು ಪಟ್ನಾ ಪೈರೆಟ್ಸ್‌ ತಂಡಗಳು  ಆರಂಭದಿಂದ ಕೊನೆಯವರೆಗೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಅರ್ಧವಿರಾಮದ ವೇಳೆಗೆ ಪಟ್ನಾ ತಂಡವು 20–17ರಿಂದ ಮುನ್ನಡೆಯಲ್ಲಿತ್ತು. ವಿರಾಮದ ನಂತರ ಪ್ರದೀಪ್ ನರ್ವಾಲ್ ಆರ್ಭಟ ಹೆಚ್ಚಿತು. ಅದರಿಂದಾಗಿ ಪಂದ್ಯವು ರೋಚಕತೆಯ ತುತ್ತತುದಿಗೆ ಮುಟ್ಟಿತು. ರೇಡರ್ ಪ್ರದೀಪ್ 12 ಅಂಕಗಳನ್ನು ಗಳಿಸಿದರು. ಅದರಲ್ಲಿ ಮೂರು ಬೋನಸ್ ಅಂಕಗಳು ಸೇರಿವೆ. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸುಮಿತ್ ತಂಡಕ್ಕೆ ಆರು ಅಂಕಗಳ ಕಾಣಿಕೆ ನೀಡಿದರು.

ಎರಡನೇ ಪಂದ್ಯದಲ್ಲಿ ಅಸ್ಲಂ ಇನಾಂದಾರ್ ಎಂಟು ಅಂಕ  ಮತ್ತು ಅಭಿನೇಶ್ ನಾದರಾಜನ್ ಐದು ಅಂಕಗಳನ್ನು ಗಳಿಸಿ ಪುಣೇರಿಗೆ ಬಲ ತುಂಬಿದರು. ಸಮಬಲದ ಪೈಪೋಟಿಯೊಡ್ಡಿದ ಟೈಟನ್ಸ್ ತಂಡದ ಸಿದ್ಧಾರ್ಥ್ ದೇಸಾಯಿ 15 ಅಂಕಗಳನ್ನು ಗಳಿಸುವ ಮೂಲಕ ಮಿಂಚಿದರು. ಅವರ ಚುರುಕಿನ ದಾಳಿಯಿಂದಾಗಿ ಒಂದು ಹಂತದಲ್ಲಿ ತಂಡವು ವಿಜಯದತ್ತ ವಾಲಿತ್ತು. ಆದರೆ ಪುಣೇರಿಯ ಆಲ್‌ರೌಂಡ್‌ ಆಟಕ್ಕೆ ಜಯ ಒಲಿಯಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು