ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಸಿ ವಿರುದ್ಧ ಕ್ರೀಡಾ ಸಚಿವರಿಗೆ ಮನವಿ: ಗಾಲ್ಫರ್‌ ರಶೀದ್‌

ಒಲಿಂಪಿಕ್ಸ್‌ ತಯಾರಿಗೆ ಅಡಚಣೆ– ಅಳಲು
Last Updated 5 ಜೂನ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ‘ಅಭ್ಯಾಸ ನಡೆಸಲು ತಮಗೆ ಪ್ರವೇಶ ನೀಡದೇ ದೆಹಲಿ ಗಾಲ್ಫ್‌ ಕೋರ್ಸ್‌ (ಡಿಜಿಸಿ) ತಮ್ಮ ಒಲಿಂಪಿಕ್ಸ್‌ ಸಿದ್ಧತೆಗೆ ಅಡ್ಡಿ ಮಾಡುತ್ತಿದೆ’ ಎಂದು ಭಾರತದ ಗಾಲ್ಫ್‌ ತಾರೆ ರಶೀದ್‌ ಖಾನ್‌ ದೂರಿದ್ದಾರೆ. ನೆರವಿಗೆ ಬರುವಂತೆ ಕೇಂದ್ರ ಸರ್ಕಾರದ ಮೊರೆಹೋಗದೇ ತಮಗೆ ಅನ್ಯಮಾರ್ಗವಿಲ್ಲ ಎಂದಿದ್ದಾರೆ.

ಕೋರೊನಾ ಲಾಕ್‌ಡೌನ್‌ ಸಡಿಲಿಸಿದ ನಂತರ ಇತರ ಗಾಲ್ಫರ್‌ಗಳು ತರಬೇತಿ ಪುನರಾರಂಭ ಮಾಡಿದ್ದಾರೆ. ಕ್ರೀಡಾ ಸೌಲಭ್ಯಗಳ ಬಳಕೆಗೆ ಸರ್ಕಾರ ನಿರ್ಬಂಧ ತೆಗೆದುಹಾಕಿದರೂ ಡಿಜಿಸಿ ತಮಗೆ ಅವಕಾಶ ನಿರಾಕರಿಸುತ್ತಿದೆ ಎಂದು ರಶೀದ್‌ ಅಳಲು ತೋಡಿಕೊಂಡಿದ್ದಾರೆ.

ಎರಡು ಬಾರಿಯ ಏಷ್ಯನ್‌ ಟೂರ್‌ ವಿಜೇತರಾಗಿರುವ ರಶೀದ್‌ ಮತ್ತು ಕೆಲವು ಗಾಲ್ಫರ್‌ಗಳನ್ನು ಅಶಿಸ್ತಿನ ಕಾರಣ ನೀಡಿಡಿಜಿಸಿ 2018ರ ಜನವರಿಯಲ್ಲಿ ಎರಡು ವರ್ಷಗಳ ಕಾಲ ತನ್ನ ಕೋರ್ಸ್‌ನಲ್ಲಿ ಅಭ್ಯಾಸ ನಡೆಸುವುದಕ್ಕೆ ನಿಷೇಧ ಹೇರಿತ್ತು.

‘ಸರ್ಕಾರ ನಿರ್ಬಂಧ ಸಡಿಲಿಸಿದರೂ ಡಿಜಿಸಿ ಈಗಲೂ ತಮಗೆ ಪ್ರವೇಶ ನಿರಾಕರಿಸುತ್ತಿದೆ. ನನಗೆ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಅಭ್ಯಾಸದಲ್ಲಿ ತೊಡಗಿದ್ದು, ನಾನು ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಎಲ್ಲೂ ಹೋಗುವಂತಿಲ್ಲ’ ಎಂದು ರಶೀದ್‌ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಯತ್ನದಲ್ಲಿರುವ ಗಾಲ್ಫರ್‌ಗಳಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

‘ಡಿಜಿಸಿ ಸದಸ್ಯರು ಮಾತ್ರ ಕಾದಿರಿಸಿ ಆಡಲು ಅವಕಾಶ ನೀಡಲಾಗಿದೆ. ನನಗೆ ಶುಲ್ಕ ತೆತ್ತು ಆಡಲೂ ಬಿಡುತ್ತಿಲ್ಲ. ದೆಹಲಿ ಗಡಿಗಳನ್ನು ಸೀಲ್‌ ಮಾಡಲಾಗಿದೆ. ಹೀಗಾಗಿ ನಾನು ನೊಯ್ಡಾ ಅಥವಾ ಗುರುಗ್ರಾಮಕ್ಕೆ ಹೋಗಿ ಪ್ರಾಕ್ಟೀಸ್‌ ಮಾಡಲೂ ಆಗುತ್ತಿಲ್ಲ. ಇದರಿಂದ ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ. ನನ್ನ ಒಲಿಂಪಿಕ್ಸ್‌ ಸಿದ್ಧತೆಗೆ ತೊಂದರೆಯಾಗಿದೆ’ ಎಂದು ಅವರು ಅಲವತ್ತುಕೊಂಡಿದ್ದಾರೆ.

ಮುಂದಿನ ಹಾದಿಯ ಬಗ್ಗೆ ಕೇಳಿದಾಗ, ‘ನಾನು 5–6 ದಿನಗಳ ಹಿಂದೆ ಭಾರತ ಒಲಿಂಪಿಕ್‌ ಸಂಸ್ಥೆಗೆ ಈ ವಿಷಯಕ್ಕೆ ಸಂಬಂಧಿಸಿ ಪತ್ರ ಬರೆದಿದ್ದೇನೆ. ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಈಗ ನೆರವಿಗಾಗಿ ಕ್ರೀಡಾ ಸಚಿವರನ್ನು ಭೇಟಿ ಮಾಡುವುದೊಂದೇ ನನ್ನ ಮುಂದಿರುವ ದಾರಿ’ ಎಂದು ರಶೀದ್‌ ಉತ್ತರಿಸಿದ್ದಾರೆ.

ಎರಡು ಬಾರಿಯ ಏಷ್ಯಾ ಚಾಂಪಿಯನ್‌ ಆಗಿರುವ ರಶೀದ್‌, ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ 185ನೇ ಸ್ಥಾನದಲ್ಲಿದ್ದಾರೆ.

‘ಈ ಹಿಂದೆ, ಡಿಜಿಸಿ ವಿರುದ್ಧ ನೀಡಿರುವ ಪೊಲೀಸ್‌ ದೂರನ್ನು ಹಿಂಪಡೆಯಲು ಸಿದ್ಧ. ಕೋರ್ಟ್ ಪ್ರಕರಣವನ್ನೂ ಮರಳಿ ಪಡೆಯಲು ಸಿದ್ಧನಿದ್ದೇನೆ’ ಎಂದಿದ್ದಾರೆ. 2010ರ ಏಷ್ಯ ಕ್ರೀಡೆಗಳಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದ ಅವರನ್ನು ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT