ಬುಧವಾರ, ಸೆಪ್ಟೆಂಬರ್ 29, 2021
20 °C
ಮೂರನೇ ಚಿನ್ನ ಗೆದ್ದ ಅಮೆರಿಕದ ವಿನ್ಸೆಂಟ್ ಹ್ಯಾನ್‌ಕಾಕ್; ಮಹಿಳಾ ವಿಭಾಗದಲ್ಲೂ ಪಾರಮ್ಯ

Tokyo Olympics: ಸ್ಕೀಟ್‌ನಲ್ಲಿ ನಿರಾಸೆ; ಮಿಶ್ರ ತಂಡದ ಮೇಲೆ ನಿರೀಕ್ಷೆ

ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಸ್ಕೀಟ್‌ನಲ್ಲಿ ನಿರಾಸೆ ಅನುಭವಿಸಿದ ಭಾರತದ ಶೂಟಿಂಗ್ ತಂಡ ಟೋಕಿಯೊ ಒಲಿಂಪಿಕ್ಸ್‌ನ ಮೊದಲ ಪದಕದ ನಿರೀಕ್ಷೆಯೊಂದಿಗೆ ಮಿಶ್ರ ವಿಭಾಗದಲ್ಲಿ ಮಂಗಳವಾರ ಸ್ಪರ್ಧೆಗಿಳಿಯಲಿದ್ದಾರೆ.

ಸೋಮವಾರ ನಡೆದ ಸ್ಕೀಟ್‌ನಲ್ಲಿ ಭಾರತದ ಅಂಗದ್ ವೀರ್ ಸಿಂಗ್ ಬಜ್ವ ಮತ್ತು ಮೆರಾಜ್ ಅಹಮ್ಮದ್ ಖಾನ್ ಫೈನಲ್ ಪ್ರವೇಶಿಸಲಾಗದೆ ನಿರಾಸೆ ಅನುಭವಿಸಿದರು. ಇವರು ಕ್ರಮವಾಗಿ 18 ಮತ್ತು 25ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಅಮೆರಿಕದ ಶೂಟರ್‌ಗಳು ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಚಿನ್ನ ಗೆದ್ದುಕೊಂಡರು. 25 ವರ್ಷದ ಅಂಗದ್ ಐದು ಸೀರಿಸ್‌ಗಳಲ್ಲಿ 120 ಸ್ಕೋರು ಮತ್ತು ಮೆರಾಜ್ 117 ಸ್ಕೋರು ಗಳಿಸಿದರು.

10 ಮೀಟರ್ಸ್ ಏರ್ ಪಿಸ್ತೂಲು ಮಿಶ್ರ ವಿಭಾಗದಲ್ಲಿ ಸೌರಭ್‌ ಚೌಧರಿ ಮತ್ತು ಮನು ಭಾಕರ್ ಕಣಕ್ಕೆ ಇಳಿಯುವರು. ಇತ್ತೀಚಿನ ವರ್ಷಗಳಲ್ಲಿ ಅಮೋಘ ಸಾಧನೆ ಮಾಡಿರುವುದರಿಂದ ಇವರಿಬ್ಬರ ಮೇಲೆ ಭರವಸೆ ಮೂಡಿದೆ. ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಸ್ಪರ್ಧೆಯಲ್ಲಿರುವ ಮತ್ತೊಂದು ಜೋಡಿ. 10 ಮೀಟರ್ಸ್ ರೈಫಲ್ ಮಿಶ್ರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಪನ್ವರ್ ಮತ್ತು ಇಳವೆನ್ನಿಲ ವಾಳರಿವನ್ ಜೋಡಿ ದೀಪಕ್ ಕುಮಾರ್ ಮತ್ತು ಅಂಜುಮ್ ಮೌದ್ಗಿಲ್‌ ಅವರೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. 

ಏರ್ ಪಿಸ್ತೂಲು ವಿಭಾಗದಲ್ಲಿ 20 ಜೋಡಿಗಳು ಇದ್ದು ರಷ್ಯಾ, ಇರಾನ್, ಚೀನಾ, ಫ್ರಾನ್ಸ್ ಮತ್ತು ಸರ್ಬಿಯಾ ಶೂಟರ್‌ಗಳು ಭಾರತಕ್ಕೆ ಸವಾಲೆಸೆಯುವ ಸಾಧ್ಯತೆ ಇದೆ. ರೈಫಲ್ ವಿಭಾಗದಲ್ಲಿ 29 ಜೋಡಿಗಳಿದ್ದು ಹಂಗರಿ, ರಷ್ಯಾ, ಅಮೆರಿಕ, ಚೀನಾ ಮತ್ತು ಜರ್ಮನಿ ಪದಕಗಳನ್ನು ಗೆಲ್ಲುವ ನೆಚ್ಚಿನ ತಂಡಗಳಾಗಿವೆ. 

ಅಮೆರಿಕದ ವಿನ್ಸೆಂಟ್ ಹ್ಯಾನ್‌ಕಾಕ್ ಪುರುಷರ ಸ್ಕೀಟ್‌ನಲ್ಲಿ ಮೂರನೇ ಚಿನ್ನ ಗೆದ್ದುಕೊಂಡರು. ಬೀಜಿಂಗ್ ಮತ್ತು ಲಂಡನ್‌ ಒಲಿಂಪಿಕ್ಸ್‌ನಲ್ಲೂ ಮೊದಲಿಗರಾಗಿದ್ದ ಅವರು ಡೆನ್ಮಾರ್ಕ್‌ನ ಜೆಸ್ಪೆರ್ ಹ್ಯಾನ್ಸೆನ್‌ ಮತ್ತು ಕುವೈಟ್‌ನ ಅಬ್ದುಲ್ಲ ಅಲ್‌ರಶೀದ್‌ ಅವರನ್ನು ಹಿಂದಿಕ್ಕಿದರು.

ಮಹಿಳೆಯರ ವಿಭಾಗದಲ್ಲಿ ಅಮೆರಿಕದ ಆ್ಯಂಬರ್ ಇಂಗ್ಲಿಷ್‌ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇಟಲಿಯ ಡಯಾನ ಬಕೋಸಿ ಬೆಳ್ಳಿ ಮತ್ತು ಚೀನಾದ ವೀ ಮೆಂಗ್‌ ಕಂಚಿನ ಪದಕ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು