ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯಾನಿಶ್ ಓಪನ್ ಈಜು: ಚಿನ್ನ ಗೆದ್ದ ಸಜನ್ ಪ್ರಕಾಶ್‌

ವೇದಾಂತ್ ಮಾಧವನ್‌ಗೆ ಬೆಳ್ಳಿ
Last Updated 16 ಏಪ್ರಿಲ್ 2022, 13:13 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸಜನ್ ಪ್ರಕಾಶ್‌ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ಡ್ಯಾನಿಶ್‌ ಓಪನ್ ಈಜುಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಶುಕ್ರವಾರ200 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ನೀರಿಗಿಳಿದಿದ್ದ ಸಜನ್‌ 1 ನಿಮಿಷ 59.27 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಋತುವಿನಲ್ಲಿ ಮೊದಲ ಬಾರಿ ಅವರು ಸ್ಪರ್ಧಿಸಿದ್ದಾರೆ.

ಪ್ರದೀಪ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ದುಬೈನಲ್ಲಿ ತರಬೇತಿ ಪಡೆಯುತ್ತಿರುವ ಕೇರಳದ ಸಜನ್‌, ಹೀಟ್ಸ್‌ನಲ್ಲಿ 2 ನಿಮಿಷ 3.67 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಕಳೆದ ವರ್ಷ ರೋಮ್‌ನಲ್ಲಿ 1 ನಿಮಿಷ 56.38 ಸೆಕೆಂಡುಗಳಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದ ಸಜನ್‌, ಒಲಿಂಪಿಕ್ಸ್‌ಗೆ ‘ಎ‘ ಅರ್ಹತೆ ಗಳಿಸಿದ ಭಾರತದ ಮೊದಲ ಈಜುಪಟು ಎನಿಸಿಕೊಂಡಿದ್ದರು.

‘ಈ ತಿಂಗಳಲ್ಲಿ ಕೆಲವು ಸ್ಪರ್ಧೆಗಳಿವೆ. ಡೆನ್ಮಾರ್ಕ್‌ ಓಪನ್ ಪೂರ್ವಸಿದ್ಧತಾ ಕೂಟವಾಗಿತ್ತು. ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗಳ ವೇಳೆಗೆ ಸಾಮರ್ಥ್ಯವನ್ನು ಹಂತಹಂತವಾಗಿ ಉತ್ತಮಪಡಿಸಿಕೊಳ್ಳುವೆವು‘ ಎಂದು ಎರಡು ಬಾರಿಯ ಒಲಿಂಪಿಯನ್ ಸಜನ್ ಹೇಳಿದ್ದಾರೆ.

ವೇದಾಂಗ್‌ಗೆ ಬೆಳ್ಳಿ: ವೇದಾಂತ್ ಮಾಧವನ್ ಕೂಡ ಕೂಟದಲ್ಲಿ ಶುಭಾರಂಭ ಮಾಡಿದ್ದರು. 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು.

ಖ್ಯಾತ ನಟ ಆರ್‌. ಮಾಧವನ್ ಪುತ್ರ ವೇದಾಂತ್‌ 15 ನಿಮಿಷ 57.86 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 16 ವರ್ಷದ ವೇದಾಂತ್‌, ಹೋದ ವರ್ಷ ಮಾರ್ಚ್‌ನಲ್ಲಿ ನಡೆದಿದ್ದ ಲಾತ್ವಿಯಾ ಓಪನ್‌ನಲ್ಲಿ ಕಂಚು ಗೆದ್ದಿದ್ದರು. ಅದೇ ವರ್ಷ ನಡೆದ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲೂ ಏಳು ಪದಕಗಳು ಅವರ ಕೊರಳಿಗೇರಿದ್ದವು.

ಮಹಿಳೆಯರ 400 ಮೀಟರ್ಸ್ ಮೆಡ್ಲೆ ‘ಬಿ‘ ಫೈನಲ್‌ನಲ್ಲಿ ಶಕ್ತಿ ಬಾಲಕೃಷ್ಣನ್‌ ಎರಡನೇ ಸ್ಥಾನ ಗಳಿಸಿದರು. 5 ನಿ. 10.71 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು.

ಪುರುಷರ 50 ಮೀಟರ್ಸ್ ಫ್ರೀಸ್ಟೈಲ್ ಹೀಟ್ಸ್‌ನಲ್ಲಿ ತನಿಶ್ ಜಾರ್ಜ್‌ ಮ್ಯಾಥ್ಯೂ (24.29 ಸೆಕೆಂಡು) 29ನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT