ಗುರುವಾರ , ಮಾರ್ಚ್ 23, 2023
20 °C

ಒಲಿಂಪಿಕ್ಸ್‌ ಬಳಿಕ ಮಂಕಾದರೇ ಸಿಂಧು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರೆಜಿಲ್‌ನಲ್ಲಿ 2016ರಲ್ಲಿ ರಿಯೊಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಜಯಿಸಿದ್ದ ಬೆಳ್ಳಿ ಪದಕಕ್ಕೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಟೋಕಿಯೊ ಕೂಟದಲ್ಲಿ ಚಿನ್ನದ ಲೇಪನ ಮೂಡಿಸುವರು ಎಂಬುದು ಕೋಟ್ಯಂತರ ಭಾರತೀಯರ ನಿರೀಕ್ಷೆಯಾಗಿತ್ತು. ಆದರೆ ಹಾಗಾಗದಿದ್ದರೂ ಕಂಚಿನ ಪದಕ ಒಲಿಸಿಕೊಂಡ ಭಾರತದ ಆಟಗಾರ್ತಿ ನಿರಾಸೆಯನ್ನಂತೂ ಮಾಡಲಿಲ್ಲ.

ಆದರೆ 2020ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಹಾಲಿ ವಿಶ್ವ ಚಾಂಪಿಯನ್ ಸಿಂಧು ಅವರ ಆಟ ಮಂಕಾಗಿದೆಯೇ?.. ಹೀಗೊಂದು ಚರ್ಚೆ ಬ್ಯಾಡ್ಮಿಂಟನ್ ವಲಯದಲ್ಲಿ ಕೇಳಿಬರುತ್ತಿರುವುದು ಸುಳ್ಳಲ್ಲ.

26 ವರ್ಷದ ಹೈದರಾಬಾದ್‌ ಪ್ರತಿಭೆ ಸಿಂಧು, ಟೋಕಿಯೊ ಕೂಟದ ಬಳಿಕ ದೀರ್ಘ ವಿರಾಮ ತೆಗೆದುಕೊಂಡರು. ಸತತ ಪಂದ್ಯಗಳಿಂದಾಗಿ ಬಸವಳಿದಿದ್ದ ಕಾರಣ ವಿಶ್ರಾಂತಿ ಪಡೆದಿದ್ದರು. ಈ ವರ್ಷದ ಆಗಸ್ಟ್‌ 8ರಂದು ಒಲಿಂಪಿಕ್ಸ್ ಕೊನೆಗೊಂಡರೂ ಸಿಂಧು ಮೊದಲ ಟೂರ್ನಿಯಲ್ಲಿ ಕಣಕ್ಕಿಳಿದಿದ್ದು, ಅಕ್ಟೋಬರ್ 19ರಂದು ಆರಂಭವಾದ ಡೆನ್ಮಾರ್ಕ್‌ ಓಪನ್ ಮೂಲಕ.

ಈ ಟೂರ್ನಿಗಳಿಗಿಂತಲೂ ಮೊದಲು ನಡೆದ ಸುದಿರ್‌ಮನ್ ಕಪ್ ಹಾಗೂ ಊಬರ್‌ಕಪ್‌ನಂತಹ ಮಹತ್ವದ ಟೂರ್ನಿಗಳಲ್ಲಿ ಅವರು ಸ್ಪರ್ಧಿಸಿರಲಿಲ್ಲ.

ಡೆನ್ಮಾರ್ಕ್‌ ಓಪನ್‌ ಟೂರ್ನಿಯಲ್ಲಿ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರೆ, ಅದರ ಬಳಿಕ ನಡೆದ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ವರೆಗೆ ಮಾತ್ರ ತಲುಪಲು ಸಾಧ್ಯವಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಸಿಂಧು ಏಳನೇ ಸ್ಥಾನದಲ್ಲಿದ್ದಾರೆ. ಡೆನ್ಮಾರ್ಕ್ ಟೂರ್ನಿಯಲ್ಲಿ ಅವರು ನಿರಾಸೆ ಅನುಭವಿಸಿದ್ದು ತನಗಿಂತ ಕೆಳರ‍್ಯಾಂಕಿನ ಕೊರಿಯಾ ಆಟಗಾರ್ತಿ ಆ್ಯನ್ ಸೆಯಂಗ್ (8ನೇ ಸ್ಥಾನ) ಎದುರು. ಹೈದರಾಬಾದ್‌ ಆಟಗಾರ್ತಿಯ ಫ್ರೆಂಚ್‌ ಓಪನ್‌ ಅಭಿಯಾನವು 15ನೇ ಕ್ರಮಾಂಕದಲ್ಲಿರುವ ಜಪಾನ್‌ನ ಸಯಕಾ ಟಕಾಹಸಿ ಅವರ ವಿರುದ್ಧ ಅಂತ್ಯವಾಗಿತ್ತು.

 ಸಿಂಧು ಅವರಿಗೆ, 2019ರಲ್ಲಿ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಒಲಿದಿತ್ತು. ಅದಕ್ಕಿಂತ ಮೊದಲು ಅವರು ವಿಶ್ವ ಕೂಟದಲ್ಲಿ ಅವರು ತಲಾ ಎರಡು ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದರು. 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳೂ ಅವರು ಮುಡಿಗೇರಿದ್ದವು.

‘ಸಿಂಧು ವಿಶ್ವದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿ. ಅವರು ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ ಪಟ್ಟ ಅಲಂಕರಿಸುವುದಕ್ಕೆ ಆದ್ಯತೆ ನೀಡಬೇಕು. ಅವರು ಜಯಿಸಿದ ವೃತ್ತಿಬದುಕಿನ ಪ್ರಮುಖ ಪ್ರಶಸ್ತಿಗಳ ಪಟ್ಟಿಯಲ್ಲಿ ಇರದ ಏಕೈಕ ಟ್ರೋಫಿ ಅದು‘ ಎಂದು ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಹೌದು..ಪಡುಕೋಣೆ ಅವರ ಮಾತಿನಂತೆ ಅಂತಹ ಛಲದ ಆಟ ಹಲವು ಬಾರಿ ಸಿಂಧು ಅವರಿಂದ ಹೊರಹೊಮ್ಮಿದೆ. ಕೆಲವು ಬಾರಿ ಕೂದಲೆಳೆ ಅಂತರದಲ್ಲಿ ಪದಕಗಳು ಅವರ ಕೈ ತಪ್ಪಿವೆ. ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಸೆಲೆಯಾಗಿರುವ ಸಿಂಧು, ‘ಚಾಂಪಿಯನ್ ಆಟ‘ಕ್ಕೆ ಮತ್ತೆ ಮರಳುವರು ಎಂಬುದು ಬ್ಯಾಡ್ಮಿಂಟನ್ ಪ್ರಿಯರ ನಿರೀಕ್ಷೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು