ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣೀತ್, ಶ್ರೀಕಾಂತ್ ಮೇಲೆ ನಿರೀಕ್ಷೆ

ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತಕ್ಕೆ ಥಾಯ್ಲೆಂಡ್‌ ಮೊದಲ ಎದುರಾಳಿ
Last Updated 25 ಸೆಪ್ಟೆಂಬರ್ 2021, 12:32 IST
ಅಕ್ಷರ ಗಾತ್ರ

ವಂಟಾ, ಫಿನ್ಲೆಂಡ್‌: ಅನುಭವಿ ಮತ್ತು ಯುವ ಆಟಗಾರರ ಮಿಶ್ರಣವಾಗಿರುವ ಭಾರತ ತಂಡವು ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾನುವಾರ ಕಣಕ್ಕಿಳಿಯಲಿದೆ. ಇಲ್ಲಿ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ತಂಡಕ್ಕೆ ಥಾಯ್ಲೆಂಡ್‌ ಸವಾಲು ಎದುರಾಗಿದೆ.

ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೀನಾ, ಮೂರು ಬಾರಿಯ ಸೆಮಿಫೈನಲಿಸ್ಟ್ ಥಾಯ್ಲೆಂಡ್‌ ಮತ್ತು ಆತಿಥೇಯ ಫಿನ್ಲೆಂಡ್‌ ಜೊತೆ ಭಾರತವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತಿ ತಂಡಗಳು ಪರಸ್ಪರರ ವಿರುದ್ಧ ಎರಡು ಸಿಂಗಲ್ಸ್ ಮತ್ತು ಮೂರು ಡಬಲ್ಸ್ ಪಂದ್ಯಗಳನ್ನು ಆಡಲಿವೆ.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಮತ್ತು ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಒಲಿಂಪಿಕ್ ಅಭಿಯಾನದ ಬಳಿಕ ವಿಶ್ರಾಂತಿ ಬಯಸಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಆಡುತ್ತಿಲ್ಲ. ಹೀಗಾಗಿ ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್‌ ಮತ್ತು ಅದಿತಿ ಭಟ್ ಕಣಕ್ಕಿಳಿಯಲಿದ್ದಾರೆ.

ಚಿರಾಗ್‌ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಪುರುಷರ ಡಬಲ್ಸ್‌ ವಿಭಾಗದ ಹೊಣೆ ಯುವ ಆಟಗಾರರಾದ ಧ್ರುವ ಕಪಿಲ ಮತ್ತು ಎಂ.ಆರ್‌.ಅರ್ಜುನ್ ಅವರ ಮೇಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿಗಳಾದ ಬಿ.ಸಾಯಿ ಪ್ರಣೀತ್‌,ಕಿದಂಬಿ ಶ್ರೀಕಾಂತ್ ಮತ್ತು ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿರೆಡ್ಡಿ ತಂಡವನ್ನು ಮುನ್ನಡೆಸಲಿದ್ದಾರೆ.

ಥಾಯ್ಲೆಂಡ್‌ ತಂಡವು 2013, 2017 ಮತ್ತು 2019ರಲ್ಲಿ ಸೆಮಿಫೈನಲ್ ತಲುಪಿತ್ತು. ಸದ್ಯ ಆ ತಂಡದ ಮಹಿಳಾ ಸಿಂಗಲ್ಸ್‌ನಲ್ಲಿ ಪಾರ್ನ್‌ಪವೀ ಚೊಚುವಾಂಗ್‌, ಬುಸಾನನ್‌ ಒಂಗ್‌ಬಮ್ರುಂಗಪನ್‌ ಆಡಲಿದ್ದರೆ, ಕಾಂತ್‌ಪೊನ್‌ ವಾಂಗ್ಚರೊಯಿನ್‌ ಪುರುಷರ ಸಿಂಗಲ್ಸ್ ಪ್ರಮುಖ ಆಟಗಾರ ಆಗಿದ್ದಾರೆ.

ಥಾಯ್ಲೆಂಡ್‌ ಬಳಿಕ ಭಾರತವು ಇದೇ 27ರಂದು ಚೀನಾ ಮತ್ತು 29ರಂದು ಫಿನ್ಲೆಂಡ್ ತಂಡಕ್ಕೆ ಮುಖಾಮುಖಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT