ಮಂಗಳವಾರ, ಸೆಪ್ಟೆಂಬರ್ 21, 2021
25 °C
ಅರ್ಹತಾ ಟ್ರಯಲ್ಸ್ ಕುಸ್ತಿ

ವಿಶ್ವ ಚಾಂಪಿಯನ್‌ಷಿಪ್‌: ಜೀತೆಂದರ್‌ ಎದುರು ಜಯಿಸಿದ ಸುಶೀಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್‌ ‍ಪದಕ ವಿಜೇತ ಸುಶೀಲ್‌ ಕುಮಾರ್‌ ವಿಶ್ವಚಾಂಪಿಯನ್‌ಷಿಪ್‌ ಕುಸ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ನಡೆದ 74 ಕೆಜಿ ವಿಭಾಗದ ಆಯ್ಕೆ ಟ್ರಯಲ್ಸ್‌ನಲ್ಲಿ ಜೀತೆಂದರ್‌ ಕುಮಾರ್‌ ಅವರನ್ನು 4–2ರಿಂದ ಅವರು ಸೋಲಿಸಿದರು. ಈ ಬೌಟ್‌ ವಿವಾದಕ್ಕೂ ಕಾರಣವಾಯಿತು. 

ಇವರಿಬ್ಬರ ನಡುವಣ ಫೈನಲ್‌ ಬೌಟ್‌ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು 1500 ಜನರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಅವಧಿಯಲ್ಲಿ ಸುಶೀಲ್‌ಗೆ 4–0 ಮುನ್ನಡೆ ಲಭಿಸಿತು. ಎರಡನೇ ಅವಧಿಯ ಆರಂಭದಲ್ಲಿ ಜೀತೆಂದರ್‌ ಕಣ್ಣಿಗೆ ಪೆಟ್ಟಾಗಿ ಪಂದ್ಯ ಸ್ಥಗಿತಗೊಂಡಿತ್ತು. ಸುಶೀಲ್‌ ಕೂಡಲೇ ಕ್ಷಮೆ ಕೋರಿದರು.

ಸುಶೀಲ್‌ ಅವರ ಮತ್ತೊಂದು ಆಕ್ರಮಣಕಾರಿ ನಡೆಯು ಜೀತೆಂದರ್‌ ಮೊಣಕಾಲಿಗೆ ಗಾಯ ಮಾಡಿತು. ಎದೆಗುಂದದ ಜೀತೆಂದರ್‌, ಮೂರು ಬಾರಿ ಸುಶೀಲ್‌ ಕುಮಾರ್‌ ಅವರ ಬಲಗಾಲನ್ನು ಭದ್ರವಾಗಿ ಹಿಡಿದರು. ಆದರೆ ಹಿಡಿತ ಸೂಕ್ತವಲ್ಲದ ಕಾರಣ ಅವರಿಗೆ ಪಾಯಿಂಟ್‌ ಲಭಿಸಲಿಲ್ಲ. ಈ ವೇಳೆ ತಾಪದಿಂದ ಬಳಲಿದ ಸುಶೀಲ್‌ ಅವರು ಎರಡು ಬಾರಿ ವೈದ್ಯಕೀಯ ವಿರಾಮ ತೆಗೆದುಕೊಂಡು ಸುಧಾರಿಸಿಕೊಂಡರು.

ಎರಡು ಪುಷ್‌ ಔಟ್‌ ಪಾಯಿಂಟ್‌ ಗಳಿಸಿದ ಜೀತೆಂದರ್‌ ಸೋಲಿನ ಅಂತರವನ್ನು ತಗ್ಗಿಸಿಕೊಂಡರು.

ಇಲ್ಲಿ ಸೋತ ಜೀತೆಂದರ್‌ ಅವರಿಗೆ ಭಾರತ ಕುಸ್ತಿ ಒಕ್ಕೂಟ ಇನ್ನೊಂದು ಅವಕಾಶ ನೀಡಿದೆ. 79 ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಿ ಅವರು ವಿಶ್ವ ಚಾಂಪಿಯನ್‌ಷಿಪ್‌ ಟಿಕೆಟ್‌ ‍ಪಡೆಯಬಹುದಾಗಿದೆ. ಈಗಾಗಲೇ ಈ ವಿಭಾಗದಲ್ಲಿ ಗೆದ್ದಿರುವ ವಿದರ್ವ್‌ ಗುಲಿಯಾ ಅವರನ್ನು ಜೀತೆಂದರ್‌ ಎದುರಿಸಬೇಕಿದೆ.

ಬೌಟ್‌ ಕುರಿತು ಜೀತೆಂದರ್‌ ಅಸಮಾಧಾನ ವ್ಯಕ್ತಪಡಿಸಿದರು. ‘ಸುಶೀಲ್‌ ಆಟವನ್ನು ಪ್ರತಿಯೊಬ್ಬರು ಗಮನಿಸಿದ್ದಾರೆ. ನಾನು ಕುಸ್ತಿ ಮಾತ್ರ ಆಡಿದೆ ಆದರೆ ಅವರು... ಕಣ್ಣಿಗೆ ಗಾಯವಾಗಿ ನಾನು ತೊಂದರೆ ಅನುಭವಿಸಿದೆ. ಸುಶೀಲ್‌ ಅನಗತ್ಯ ವಿರಾಮಗಳನ್ನು ತೆಗೆದುಕೊಂಡರು’ ಎಂದು ಅವರು ದೂರಿದರು. 

‘ಇದು ಉದ್ದೇಶಪೂರ್ವಕ ನಡೆದಿದ್ದಲ್ಲ. ಇದೊಂದು ಉತ್ತಮ ಹಣಾಹಣಿ. ತಾಂತ್ರಿಕ ಶ್ರೇಷ್ಠತೆಯೊಂದಿಗೆ ಗೆಲ್ಲುವುದು ನನ್ನ ಆಟದ ಶೈಲಿ. ಜೀತೆಂದರ್‌ಗೆ ಶುಭ ಹಾರೈಸುವೆ’ ಎಂದು ಸುಶೀಲ್ ತಿಳಿಸಿದರು.

ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ ಭೂಷನ್‌ ಶರಣ್‌ ಸಿಂಗ್‌ ಅವರೂ ಸುಶೀಲ್‌ ಅವರನ್ನು ಪರೋಕ್ಷವಾಗಿ ಬೆಂಬಲಸಿದರು. ಕುಸ್ತಿಯಲ್ಲಿ ಇದು ಸಾಮಾನ್ಯ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ರಾಹುಲ್‌ ಅವಾರೆ (61ಕೆಜಿ), ಕರಣ್‌ (70 ಕೆಜಿ), ಪ್ರವೀಣ್‌ (92ಕೆಜಿ) ಟ್ರಯಲ್ಸ್‌ನಲ್ಲಿ ಜಯಿಸಿದ ಕುಸ್ತಿಪಟುಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು