ಸೋಮವಾರ, ಜುಲೈ 4, 2022
25 °C
ತಾಂತ್ರಿಕ ದೋಷ ಪತ್ತೆ ಮಾಡಿದ ಸಿಎಫ್‌ಐ ಅಧಿಕಾರಿ; ಒಂದೂವರೆ ದಶಕದ ಹಳೆಯ ಯೋಜನೆಗೆ ತಿಲಾಂಜಲಿ?

ಸೈಕ್ಲಿಂಗ್ ವೆಲೊಡ್ರೋಮ್: ಟ್ರ್ಯಾಕ್‌ ತಪ್ಪಿದ ಕಾಮಗಾರಿ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಟ್ರ್ಯಾಕ್ ಸೈಕ್ಲಿಂಗ್‌ಗೆ ಹೊಸ ಆಯಾಮ ನೀಡುವ ಕನಸಿನೊಂದಿಗೆ ವಿಜಯಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವೆಲೊಡ್ರೋಮ್‌ ಕಾಮಗಾರಿ ಹಳಿ ತಪ್ಪಿದೆ. ಹೀಗಾಗಿ ಯೋಜನೆಗೆ ಎಳ್ಳುನೀರು ಬಿಡುವ ಆತಂಕ ಮೂಡಿದ್ದು ಸೈಕ್ಲಿಸ್ಟ್‌ಗಳು ನಿರಾಸೆಗೆ ಒಳಗಾಗಿದ್ದಾರೆ.

ದೇಶದ ರೋಡ್ ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಸಾಧನೆ ಅಪಾರ. ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಇದ್ದರೂ ವೆಲೊಡ್ರೋಮ್ ಇಲ್ಲ ಎಂಬ ನೋವು ಕಾಡುತ್ತಿತ್ತು. ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಸತತ ಪ್ರಯತ್ನದ ಫಲವಾಗಿ ವಿಜಯಪುರದಲ್ಲಿ ವೆಲೊಡ್ರೋಮ್‌ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಗದಗ ಮತ್ತು ಬೆಳಗಾವಿ ಜಿಲ್ಲೆಗಳು ರಾಜ್ಯದ ಸೈಕ್ಲಿಂಗ್‌ನ ಗಟ್ಟಿ ನೆಲ ಆಗಿರುವುದರಿಂದ ಉತ್ತರ ಕರ್ನಾಟಕದಲ್ಲೇ ವೆಲೊಡ್ರೋಮ್ ನಿರ್ಮಿಸಲು ತೀರ್ಮಾನಿಸಲಾಗಿತ್ತು. ದಾವಣಗೆರೆಯ ವ್ಯಕ್ತಿ ಗುತ್ತಿಗೆ ಪಡೆದುಕೊಂಡಿದ್ದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಒಬ್ಬರನ್ನು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರಿನಿಂದ ಕಳುಹಿಸಿತ್ತು.

ಐದು ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿಗೆ ಆರಂಭದಿಂದಲೇ ತೊಡಕುಗಳು ಎದುರಾಗಿದ್ದವು. ಮಳೆಯ ಅಡ್ಡಿ, ಕಾರ್ಮಿಕರ ಕೊರತೆ ಮುಂತಾದ ನೆಪ ಹೇಳಿ ಕಾಮಗಾರಿಯನ್ನು ಆಗಾಗ ನಿಲ್ಲಿಸಲಾಗುತ್ತಿತ್ತು. ಅಂತೂ ಇಂತು ಮೂರು ವರ್ಷಗಳಾಗುವಷ್ಟರಲ್ಲಿ ಶೇಕಡಾ 60ರಷ್ಟು ಕೆಲಸ ಪೂರ್ಣಗೊಂಡಿತು. ಎರಡು ವರ್ಷಗಳ ಹಿಂದೆ ಕಾಮಗಾರಿ ‘ಶಾಶ್ವತ‘ವಾಗಿ ನಿಂತಾಗ ಸೈಕ್ಲಿಸ್ಟ್‌ಗಳ ನಿರೀಕ್ಷೆಯ ಮೇಲೆ ಕಾರ್ಮೋಡ ಕವಿಯಿತು.

ಸೈಕ್ಲಿಂಗ್ ಸಂಸ್ಥೆ, ಕ್ರೀಡಾಪಟುಗಳಿಂದ ದೂರು

ಈ ನಡುವೆ ಆಗಿರುವ ಕಾಮಗಾರಿಯೂ ಕಳಪೆಯಾಗಿದೆ ಎಂಬ ಸಂದೇಹದಿಂದ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಮತ್ತು ಸೈಕ್ಲಿಸ್ಟ್‌ಗಳು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು. ತಾಂತ್ರಿಕ ಪರಿಶೀಲನೆಗೆ ನಿರ್ಧರಿಸಲಾಯಿತು. ಸೈಕ್ಲಿಂಗ್‌ನಲ್ಲಿ ಪಿಎಚ್‌ಡಿ ಮಾಡಿರುವ, ಭಾರತ ಸೈಕ್ಲಿಂಗ್ ಫೆಡರೇಷನ್‌ನ ಮ್ಯಾಕ್ಸ್‌ವೆಲ್ ಟ್ರೆವರ್ ಈ ವರ್ಷದ ಫೆಬ್ರುವರಿಯಲ್ಲಿ ವಿಜಯಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಸಿದ್ಧರಾಮ ಲೋನಿ ಅವರಿಗೆ ವರದಿ ಸಲ್ಲಿಸಿದರು. ಅದು ಸರ್ಕಾರಕ್ಕೆ ತಲುಪಿದೆ. ಆದರೆ ಸರ್ಕಾರ ಇಲ್ಲಿಯ ವರೆಗೆ ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ.

‘ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಮುಂದಿನ ಕೆಲಸವೆಲ್ಲವೂ ಸರ್ಕಾರದ ಮಟ್ಟದಲ್ಲಿ ನಡೆಯಬೇಕು’ ಎಂದು ಸಹಾಯಕ ನಿರ್ದೇಶಕರು ಹೇಳಿದರೆ, ‘ವರದಿ ನನ್ನ ಬಳಿಗೆ ಇನ್ನೂ ತಲುಪಿಲ್ಲ’ ಎಂದು ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ ಅವರು ಹೇಳಿದರು.

ವರದಿಯಲ್ಲಿ ಇರುವುದೇನು?

ಮ್ಯಾಕ್ಸ್‌ವೆಲ್ ಟ್ರೆವರ್ ತಮ್ಮ ವರದಿಯಲ್ಲಿ ಈ ಟ್ರ್ಯಾಕ್ ಉಪಯೋಗಶೂನ್ಯ ಎಂದು ಸ್ಪಷ್ಟವಾಗಿ ನಮೂದಿಸಿದ್ದಾರೆ. ದುರಸ್ತಿ ಮಾಡಲು ಸಾಧ್ಯವಿಲ್ಲದಂಥ ಲೋಪ ಆಗಿದೆ ಎಂದು ಅವರು ಹೇಳಿದ್ದಾರೆ. ಇದು 333.333 ಮೀಟರ್ ಅಳತೆಯ ವೆಲೊಡ್ರೋಮ್. ನಿಯಮಗಳ ಪ್ರಕಾರ ಇದರ ನೇರ ಭಾಗವು 12 ಡಿಗ್ರಿ ವಾಲಿಕೊಂಡಿರಬೇಕು, ತಿರುವು 38 ಡಿಗ್ರಿ ವಾಲಿರಬೇಕು. ಇದರಲ್ಲಿ ಲೋಪವಾದರೆ ಸೈಕ್ಲಿಸ್ಟ್‌ ವೇಗೋತ್ಕರ್ಷ ಕಾಪಾಡಿಕೊಳ್ಳಲಾಗದೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.  

ಟ್ರೆವರ್ ಪತ್ತೆ ಮಾಡಿರುವ ಐದು ಅಂಶಗಳು

* ವಿಜಯಪುರ ವೆಲೊಡ್ರೋಮ್‌ನ ನೇರವಿರುವ ಎರಡೂ ಭಾಗಗಳಲ್ಲಿ ನಿಯಮಕ್ಕೆ ಅನುಗುಣವಾದ ವಾಲುವಿಕೆ ಇಲ್ಲ. ತಿರುವಿನ ಭಾಗದಲ್ಲೂ ಇದೇ ಲೋಪ ಆಗಿದೆ.

* ನೇರ ಇರುವ ಎರಡು ತುದಿಗಳು ತಿರುವನ್ನು ಸೇರುವಲ್ಲಿ ಆರು ಇಂಚುಗಳ ವ್ಯತ್ಯಾಸವಿದೆ.

* ನೇರ ಮತ್ತು ತಿರುವಿನ ಭಾಗದ ಅಗಲದಲ್ಲಿ ಅರ್ಧ ಮೀಟರ್‌ಗೂ ಹೆಚ್ಚಿನ ವ್ಯತ್ಯಾಸವಿದೆ.

* ತಳಭಾಗದ ಎಕ್ಸ್‌ಪ್ಯಾನ್ಶನ್ ಜಾಯಿಂಟ್ ಕಾಲಮ್‌ನಲ್ಲಿ ಕನಿಷ್ಠ ಒಂದು ಇಂಚು ಜಾಗ ಇರಬೇಕು. ಇಲ್ಲಿ ಎಳ್ಳಷ್ಟೂ ಜಾಗ ಬಿಡಲಿಲ್ಲ.   

ಬಾಗಲಕೋಟೆ, ಗದಗದಲ್ಲಿ ವೆಲೊಡ್ರೋಮ್‌ಗೆ ಪ್ರಯತ್ನ?

ವಿಜಯಪುರದಲ್ಲಿ ಕಾಮಗಾರಿ ಕಳಪೆಯಾಗಿದೆ ಎಂದು ತಿಳಿಯುತ್ತಿದ್ದಂತೆ ಬಾಗಲಕೋಟೆಯಲ್ಲೂ ಗದಗದಲ್ಲೂ ವೆಲೊಡ್ರೋಮ್ ನಿರ್ಮಾಣದ ಆಸೆ ಗರಿಗೆದರಿದೆ. ಬಾಗಲಕೋಟೆಯಲ್ಲಿ ಜಿಲ್ಲಾಡಳಿತವೇ ಈ ಬಗ್ಗೆ ಮುತುವರ್ಜಿ ವಹಿಸಿದೆ ಎಂದು ಮೂಲಗಳು ತಿಳಿಸಿದ್ದು ಗದಗದಲ್ಲಿ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಸಂಸ್ಥೆಯ ಗೌರವ ಅಧ್ಯಕ್ಷ ಜಿ.ವಿ.ಪಾಟೀಲ ನೇತೃತ್ವದಲ್ಲಿ ಪ್ರಯತ್ನ ನಡೆದಿದೆ. ಇದಕ್ಕೆ ಮಾಜಿ ಸಚಿವ ಎಚ್‌.ಕೆ.ಪಾಟೀಲ ಅವರ ಬೆಂಬಲವೂ ಸಿಕ್ಕಿದೆ.

‘ಖೇಲೊ ಇಂಡಿಯಾ ಯೋಜನೆಯಡಿ ವೆಲೊಡ್ರೋಮ್ ನಿರ್ಮಿಸುವ ಸಾಧ್ಯತೆ ಇದೆ. ಎಚ್‌.ಕೆ.ಪಾಟೀಲ ಅವರೊಂದಿಗೆ ಸಭೆ ನಡೆಸಿದ ನಂತರ ವೆಲೊಡ್ರೋಮ್‌ಗಾಗಿ ನಾಲ್ಕು ಎಕರೆ ಜಾಗ ಒದಗಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಲಾಗಿದೆ. ಇಲ್ಲಿ ವೆಲೊಡ್ರೋಮ್ ನಿರ್ಮಾಣಕ್ಕೆ 1997ರಿಂದಲೇ ಪ್ರಯತ್ನ ನಡೆಯುತ್ತಿದೆ. ಆದರೆ ಸರ್ಕಾರ ವಿಜಯಪುರಕ್ಕೆ ಅದನ್ನು ಮಂಜೂರು ಮಾಡಿತು. ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸೈಕ್ಲಿಸ್ಟ್‌ಗಳಿಗೆ ಪ್ರತಿಭೆ ಬೆಳಗಲು ಆಗುತ್ತಿಲ್ಲ. ಗದಗದಲ್ಲಿ ವೆಲೊಡ್ರೋಮ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದರೆ ರಾಜ್ಯದ ಪಾಲಿಗೆ ಅನುಕೂಲ ಆಗಲಿದೆ’ ಎಂದು ಜಿ.ವಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.  

ಗದಗ ಮತ್ತು ಬಾಗಲಕೋಟೆಯಲ್ಲಿ ವೆಲೊಡ್ರೋಮ್ ನಿರ್ಮಾಣವಾದರೂ ವಿಜಯಪುರದ ಯೋಜನೆಯನ್ನು ಕೈಬಿಡುವುದಿಲ್ಲ ಎಂದು ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ಮತ್ತು ಭಾರತ ಸೈಕ್ಲಿಂಗ್ ಫೆಡರೇಷನ್ ಉಪಾಧ್ಯಕ್ಷ ವಿಜಯಪುರದ ಶ್ರೀಧರ ಗೋರೆ ಹೇಳಿದರು.

***

ರಾಜ್ಯದಲ್ಲಿ ವೆಲೊಡ್ರೋಮ್ ನಿರ್ಮಾಣ ಆಗಬೇಕೆಂಬುದು ನಮ್ಮ ದೊಡ್ಡ ಕನಸಾಗಿತ್ತು. ಸೈಕ್ಲಿಸ್ಟ್‌ಗಳು ಮತ್ತು ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗಳ ಆಯೋಜಕರು ಇದಕ್ಕಾಗಿ ಅನೇಕ ವರ್ಷಗಳಿಂದ ಕಾಯುತ್ತಿದ್ದರು. ವೆಲೊಡ್ರೋಮ್ ನಿರ್ಮಾಣ ಆಗಿದ್ದರೆ ರೋಡ್ ಸೈಕ್ಲಿಂಗ್‌ನಂತೆ ಟ್ರ್ಯಾಕ್ ಸೈಕ್ಲಿಂಗ್‌ನಲ್ಲೂ ರಾಜ್ಯಕ್ಕೆ ಇನ್ನಷ್ಟು ಪದಕಗಳು ಬರುತ್ತಿದ್ದವು.

-ಶ್ರೀಶೈಲ ಎಂ. ಕುರಣಿ, ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ

 

 

₹ 7.5 ಕೋಟಿ

ಯೋಜನೆಯ ಅಂದಾಜು ವೆಚ್ಚ

₹ 3.60 ಕೋಟಿ

ಸರ್ಕಾರದಿಂದ ಬಿಡುಗಡೆ ಆಗಿರುವ ಮೊತ್ತ

2003

ಯೋಜನೆ ಮಂಜೂರಾದ ವರ್ಷ

2015

ಕಾಮಗಾರಿ ಆರಂಭಗೊಂಡ ವರ್ಷ

2018

ಕಾಮಗಾರಿ ಸ್ಥಗಿತಗೊಂಡ ವರ್ಷ

14

ಐದು ವರ್ಷದಲ್ಲಿ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳು

 

 

5 ವರ್ಷದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದವರು

ಸೈಕ್ಲಿಸ್ಟ್‌ ಹೆಸರು;ಯಾವ ಜಿಲ್ಲೆ;ಪದಕ

ವೆಂಕಪ್ಪ ಕೆಂಗಲಗುತ್ತಿ;ಬಾಗಲಕೋಟೆ;ಚಿನ್ನ1,ಬೆಳ್ಳಿ2,ಕಂಚು3

ರಾಜು ಭಾಟಿ;ಬಾಗಲಕೋಟೆ;ಚಿನ್1ನ,ಬೆಳ್ಳಿ1,ಕಂಚು1

ನವೀನ್ ಜಾನ್;ಬೆಂಗಳೂರು;ಚಿನ್ನ1

ದಾನಮ್ಮ ಚಿಚಖಂಡಿ;ಬಾಗಲಕೋಟೆ;ಬೆಳ್ಳಿ1,ಕಂಚು1

ಮೇಘಾ ಗೂಗಾಡ್;ಬಾಗಲಕೋಟೆ;ಬೆಳ್ಳಿ1

ಕೃಷ್ಣ ನಾಯ್ಕೋಡಿ;ವಿಜಯಪುರ;ಕಂಚು2

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು