ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಚಿನೊಂದಿಗೆ ಹೃದಯ ಗೆದ್ದ ಲವ್ಲಿನಾ ಬೊರ್ಗೊಹೈನ್‌

Last Updated 4 ಆಗಸ್ಟ್ 2021, 16:47 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಭರವಸೆಯಾಗಿದ್ದ ಲವ್ಲಿನಾ ಬೊರ್ಗೊಹೈನ್‌ ಕಂಚಿನ ಪದಕ ಗೆದ್ದು ತಂತ್ರಜ್ಞಾನದ ನಗರಿಯಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದರು.

69 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಲವ್ಲಿನಾ 0–5ರಿಂದ ಟರ್ಕಿಯ ಹಾಲಿ ವಿಶ್ವ ಚಾಂಪಿಯನ್‌ ಬುಸೆನಾಜ್‌ ಸುರ್ಮೆನೆಲಿ ವಿರುದ್ಧ ಸೋತರು. ಹೀಗಿದ್ದರೂ ಕಂಚು ಪಡೆದು ಚೊಚ್ಚಲ ಒಲಿಂಪಿಕ್ಸ್‌ ಅನ್ನು ಸ್ಮರಣೀಯವಾಗಿಸಿಕೊಂಡರು.

ಅಸ್ಸಾಂ ರಾಜ್ಯದ 23 ವರ್ಷ ವಯಸ್ಸಿನ ಲವ್ಲಿನಾ, ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೂರನೇ ಬಾಕ್ಸರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ವಿಜೇಂದರ್‌ ಸಿಂಗ್‌ (2008) ಮತ್ತು ಎಂ.ಸಿ.ಮೇರಿ ಕೋಮ್‌ (2012) ಈ ಸಾಧನೆ ಮಾಡಿದ್ದರು.

ಹಿಂದಿನ ಪಂದ್ಯಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಚಿನ್ನದ ಭರವಸೆ ಮೂಡಿಸಿದ್ದ ಲವ್ಲಿನಾ, ಸುರ್ಮೆನೆಲಿ ವಿರುದ್ಧ ಸಂಪೂರ್ಣವಾಗಿ ಮಂಕಾದರು. ಹಲವು ಎಚ್ಚರಿಕೆಗಳನ್ನು ನೀಡಿದರೂ ಭಾರತದ ಬಾಕ್ಸರ್‌, ಪಂದ್ಯದ ರೆಫರಿಯ ಮಾತಿಗೆ ಕಿವಿಗೊಡಲಿಲ್ಲ. ಹೀಗಾಗಿ ಎರಡನೇ ಸುತ್ತಿನ ವೇಳೆ ಲವ್ಲಿನಾ ಖಾತೆಯಿಂದ ಒಂದು ಪಾಯಿಂಟ್‌ ಕಡಿತಗೊಳಿಸಲಾಯಿತು.

ಆರಂಭದಲ್ಲಿ ಲವ್ಲಿನಾ ಚುರಕಿನ ಪಾದ ಚಲನೆಯ ಮೂಲಕ ಗಮನಸೆಳೆದಿದ್ದರು. ಬಳಿಕ ಸುರ್ಮೆನೆಲಿ ಮಿಂಚಿದರು. ಭಾರತದ ಬಾಕ್ಸರ್‌ನ ತಲೆ ಹಾಗೂ ಮುಖಕ್ಕೆ ಬಲವಾದ ಪಂಚ್‌ಗಳನ್ನು ಮಾಡಿ ಪಾಯಿಂಟ್‌ ಹೆಕ್ಕಿದರು. ಮೂರನೇ ಸುತ್ತಿನಲ್ಲೂ ಟರ್ಕಿಯ ಬಾಕ್ಸರ್‌ ಆಕ್ರಮಣಕಾರಿಯಾದರು.23 ವರ್ಷದ ಸುರ್ಮೆನೆಲಿ ಈ ವರ್ಷ ಎರಡು ಅಂತರರಾಷ್ಟ್ರೀಯ ಕೂಟಗಳಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

‘ಏನು ಹೇಳಬೇಕೊ ತೋಚುತ್ತಿಲ್ಲ. ಈ ಪಂದ್ಯದಲ್ಲಿ ಅಂದುಕೊಂಡ ರೀತಿಯಲ್ಲಿ ಹೋರಾಡಲು ಆಗಲಿಲ್ಲ. ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿತ್ತು’ ಎಂದು ಲವ್ಲಿನಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT