ಮಂಗಳವಾರ, ಡಿಸೆಂಬರ್ 1, 2020
18 °C

ಟೋಕಿಯೊ ಒಲಿಂಪಿಕ್ಸ್‌: ಕ್ರೀಡಾಪಟುಗಳಿಗೆ ಪ್ರತ್ಯೇಕ ವಾಸವಿಲ್ಲ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಬರುವ ಕ್ರೀಡಾಪಟುಗಳು 14 ದಿನಗಳ ಪ್ರತ್ಯೇಕವಾಸದಲ್ಲಿ ಇರಬೇಕಾದ ಅಗತ್ಯವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಈ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಕೂಟವನ್ನು ಕೋವಿಡ್–19 ಪಿಡುಗಿನ ಕಾರಣ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ಜಪಾನ್‌ನಲ್ಲಿ ಕಡ್ಡಾಯವಾಗಿ ಪ್ರತ್ಯೇಕವಾಸದಲ್ಲಿ ಇರಿಸಲಾಗುತ್ತಿದೆ. ಆದರೆ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಇದು ಬಾಧಕವಲ್ಲ.

ಕ್ರೀಡಾಪಟುಗಳಿಗೆ ಪ್ರತ್ಯೇಕವಾಸ ಕಡ್ಡಾಯ ಮಾಡದೇ ಇರುವುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಿಲ್ಲ. ಆದರೆ ಜಪಾನ್‌ಗೆ ಬರುವ 72 ತಾಸುಗಳ ಮುನ್ನ ಕೋವಿಡ್‌–19 ಪರೀಕ್ಷೆ ಮಾಡುವುದರಿಂದ ಪ್ರತ್ಯೇಕವಾಸದ ಅಗತ್ಯ ಇಲ್ಲ ಎಂಬುದು ನಮ್ಮ ಅಭಿಪ್ರಾಯ. ವಿದೇಶದಿಂದ ಬರುವ ಪ್ರೇಕ್ಷಕರ ಪ್ರತ್ಯೇಕವಾಸಕ್ಕೆ ಸಂಬಂಧಿಸಿ ಇನ್ನೂ ನಿರ್ಧಾರ ಕೈಗೊಳ್ಳಲಿಲ್ಲ. ಅವರಿಗೂ 14 ದಿನಗಳ ಪ್ರತ್ಯೇಕವಾಸ ಕಷ್ಟಸಾಧ್ಯ ಎಂದು ಒಲಿಂಪಿಕ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೊಷಿರೊ ಮುಟೊ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವ ಕ್ರೀಡಾಪಟುಗಳು, ಕೋಚ್‌ಗಳು, ಅಧಿಕಾರಿಗಳು ಮುಂತಾದ ಎಲ್ಲರೂ ಜಪಾನ್ ಪ್ರವೇಶಿಸುವ ಮೊದಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕಾಗಿದೆ. ಈ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ವಿದೇಶಿ ಪ್ರೇಕ್ಷಕರ ಕುರಿತು ಮುಂದಿನ ವರ್ಷ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸರ್ಕಾರ, ಟೋಕಿಯೊ ಆಡಳಿತ ಮತ್ತು ಆಯೋಜನಾ ಸಮಿತಿಯ ಸಭೆಯ ನಂತರ ತೊಷಿರೊ ತಿಳಿಸಿದರು.

ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಜಪಾನ್ ಇತ್ತೀಚೆಗೆ ಕೆಲವು ಕ್ರೀಡಾಕೂಟಗಳನ್ನು ಪ್ರಾಯೋಗಿಕವಾಗಿ ನಡೆಸಿದೆ. ಕಳೆದ ವಾರಾಂತ್ಯದಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಜಿಮ್ನಾಸ್ಟಿಕ್ಸ್‌ ಕೂಟವೂ ಇದರಲ್ಲಿ ಸೇರಿದೆ. ಈ ಕೂಟಗಳ ವೀಕ್ಷಣೆಗೆ ಜಪಾನ್‌ನ ಪ್ರೇಕ್ಷಕರಿಗೆ ಅವಕಾಶವಿತ್ತು. ಒಲಿಂಪಿಕ್ಸ್‌ಗೆ ವಿದೇಶಿ ಪ್ರೇಕ್ಷಕರನ್ನು ಅನುವು ಮಾಡಿದರೂ ಗ್ಯಾಲರಿಯಲ್ಲಿ ಕೂಗಾಡದಂತೆ ಮತ್ತು ಎಂಜಲಿನ ಕಣಗಳು ಹೊರಬೀಳುವ ಯಾವುದೇ ರೀತಿಯ ಸಂಭ್ರಮದಲ್ಲಿ ತೊಡಗಿಸಿಕೊಳ್ಳದಂತೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು