ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಪ್ರಿ-ಕ್ವಾರ್ಟರ್‌ಗೆ ದೀಪಿಕಾ; ಪದಕದ ಆಸೆ ಜೀವಂತ

ಅಕ್ಷರ ಗಾತ್ರ

ಟೋಕಿಯೊ: ಭಾರತದ ಭರವಸೆಯಾಗಿರುವ ವಿಶ್ವದ ನಂ.1 ರ‍್ಯಾಂಕ್‌ನ ದೀಪಿಕಾ ಕುಮಾರಿ, ಟೋಕಿಯೊ ಒಲಿಂಪಿಕ್ಸ್ ಆರ್ಚರಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಇದರೊಂದಿಗೆ ಆರ್ಚರಿ ವಿಭಾಗದಲ್ಲಿ ಸಾಲು ಸಾಲು ಸೋಲುಗಳನ್ನು ಅನುಭವಿಸಿರುವ ಭಾರತದ ಆರ್ಚರಿ ಪಟುಗಳ ನಡುವೆ ದೀಪಿಕಾ ಆಶಾಕಿರಣವಾಗಿ ಹೊರಹೊಮ್ಮಿದ್ದು, ಪದಕದ ಆಸೆ ಜೀವಂತವಾಗಿದೆ.

ಆದರೆ ದೀಪಿಕಾಳ ಈ ಪಯಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಸಾಕಷ್ಟು ಪರಿಶ್ರಮಪಡಬೇಕಾಯಿತು. ಅಮೆರಿಕದ 18ರ ಹರೆಯದ ಯುವ ಬಿಲ್ಲುಗಾರ್ತಿ ಜೆನ್ನಿಫರ್ ಮಚಿನೊ ಫರ್ನಾಂಡೀಸ್ ಅವರಿಂದ ನಿಕಟ ಪೈಪೋಟಿ ಎದುರಾಗಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ನಿಖರ ಗುರಿ ಸಾಧಿಸುವ ಮೂಲಕ 6-4ರ ಅಂತರದಲ್ಲಿ ಪಂದ್ಯ ಗೆದ್ದರು.

ಮೊದಲ ಸೆಟ್ ಅನ್ನು ಕೇವಲ ಒಂದು ಪಾಯಿಂಟ್ ಅಂತರದಲ್ಲಿ ಕಳೆದುಕೊಂಡ ದೀಪಿಕಾ, ನಂತರ ಮೂರು ಸೆಟ್‌ಗಳಲ್ಲಿ ಹ್ಯಾಟ್ರಿಕ್ 'ಫರ್ಫೆಟ್ 10' ಗುರಿಯಿಡುವ ಮೂಲಕ 4-2ರ ಅಂತರದ ಮುನ್ನಡೆ ಕಾಯ್ದುಕೊಂಡರು. ಬಳಿಕ ಲಯ ಕಳೆದುಕೊಂಡ ಪರಿಣಾಮ ಎದುರಾಳಿ 4-4ರ ಸಮಬಲ ಸಾಧಿಸಿದರು.

ಅತಿ ಒತ್ತಡದ ಸನ್ನಿವೇಶದಲ್ಲಿ ತಮ್ಮ ಅನುಭವ ಸಂಪತ್ತನ್ನು ಧಾರೆಯೆರೆದ ದೀಪಿಕಾ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು.

ಮೊದಲ ಸುತ್ತಿನ ಹೋರಾಟದಲ್ಲಿ ದೀಪಿಕಾ ಕುಮಾರಿ, ಭೂತಾನ್‌ನ ಕರ್ಮ ವಿರುದ್ಧ 6-0 ಅಂತರದ ನಿರಾಯಾಸ ಗೆಲುವು ದಾಖಲಿಸಿದರು.

ಏತನ್ಮಧ್ಯೆ ದೀಪಿಕಾ ಪತಿ ಅತನು ದಾಸ್‌, ಪುರುಷರ ವೈಯಕ್ತಿಕ ವಿಭಾಗದಲ್ಲಿ ಗುರುವಾರ ಕಣಕ್ಕಿಳಿಯಲಿದ್ದಾರೆ. ಅತ್ತ ತರುಣ್‌ದೀಪ್ ರಾಯ್ ಹಾಗೂ ಪ್ರವೀಣ್ ಜಾಧವ್ ಎರಡನೇ ಸುತ್ತಿನಿಂದಲೇ ನಿರ್ಗಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT