ಒಲಿಂಪಿಕ್ಸ್‌ನಲ್ಲಿ ಫವಾದ್ ಮಿರ್ಜಾಗೆ ಡಯಾರಾ ಫೋರ್ ಅಶ್ವ

ಬೆಂಗಳೂರು: ಟೋಕಿಯೊ ಒಲಿಂಪಿಕ್ ಕೂಟದ ಈಕ್ವೆಸ್ಟ್ರಿಯನ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಫವಾದ್ ಮಿರ್ಜಾ ಅವರು ಡಯಾರಾ ಫೋರ್ ಕುದುರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತದಿಂದ ಒಲಿಂಪಿಕ್ಸ್ ಈಕ್ವೆಸ್ಟ್ರಿಯನ್ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೂರನೇ ಕ್ರೀಡಾಪಟುವಾಗಿದ್ದಾರೆ. ಈ ಹಿಂದೆ ಇಂದ್ರಜೀತ್ ಲಂಬಾ ಮತ್ತು ಇಮ್ತಿಯಾಜ್ ಅನೀಸ್ ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.
‘ಇದೇ ತಿಂಗಳು ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಡಯಾರಾ ಫೋರ್ ಅಶ್ವದೊಂದಿಗೆ ಸ್ಪರ್ಧಿಸಲಿದ್ದಾರೆ. ಉತ್ತಮವಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಕೂಟದಲ್ಲಿ ಅಮೋಘ ಸಾಮರ್ಥ್ಯ ಮೆರೆಯುವ ವಿಶ್ವಾಸವಿದೆ‘ ಎಂದು ಮಿರ್ಜಾ ಗುರುವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಇತಿಹಾಸ ನಿರ್ಮಿಷುವ ಹಾದಿಯಲ್ಲಿದ್ದೇವೆ. ಅದಕ್ಕಾಗಿ ಡಯಾರಾ ನೆರವು ನೀಡಲಿದೆ. ಬಹಳ ಸುಂದರ ಮತ್ತು ಚುರುಕಾದ ಅಶ್ವವಾಗಿದೆ. ಸ್ಪರ್ಧೆಗೆ ಕುದುರೆಯನ್ನು ಆಯ್ಕೆ ಮಾಡಿಕೊಳ್ಳುವುದು ಕಠಿಣ ಸವಾಲಾಗಿತ್ತು‘ ಎಂದು ಹೇಳಿದರು.
2018ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಿರ್ಜಾ ಅವರು ಸಿನೊರ್ ಮೆಡಿಕಾಟ್ ಅಶ್ವದೊಂದಿಗೆ ಕಣಕ್ಕಿಳಿದು ಬೆಳ್ಳಿ ಪದಕ ಜಯಿಸಿದ್ದರು. 36 ವರ್ಷಗಳ ಪದಕದ ಬರವನ್ನು ನೀಗಿಸಿದ್ದರು.
‘ಎಂಬಸಿ ಸಮೂಹ ಸಂಸ್ಥೆ ಮತ್ತು ಜೀತು ವಿರ್ವಾನಿ ಅವರು ನನಗೆ ಪ್ರಾಯೋಜಕತ್ವ ನೀಡಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾಗಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ‘ ಎಂದು ಬೆಂಗಳೂರು ಮೂಲದ ಮಿರ್ಜಾ ಹೇಳಿದ್ದಾರೆ.
‘ಡಯಾರಾ ಮತ್ತು ಮೆಡಿಕಾಟ್ ಎರಡೂ ಅತ್ಯುತ್ತಮ ಕುದುರೆಗಳು. ಈ ಎರಡೂ ನನ್ನ ಬಳಿ ಇರುವುದು ಅದೃಷ್ಟ. ಒಲಿಂಪಿಕ್ಸ್‌ನಲ್ಲಿ ಕ್ರಾಸ್ ಕಂಟ್ರಿ ಮತ್ತು ಎರಡು ಸುತ್ತುಗಳ ಶೋ ಜಂಪಿಂಗ್ ಇರುತ್ತದೆ. ಈ ಸ್ಪರ್ಧೆಗೆ ಮೆಡಿಕಾಟ್‌ಗಿಂತ ಡಯಾರಾ ಸೂಕ್ತವಾಗಿರುತ್ತದೆಯೆಂದು ಆಯ್ಕೆ ಮಾಡಿಕೊಂಡಿದ್ದೇವೆ‘ ಎಂದು ಮಿರ್ಜಾ ಹೇಳಿದ್ದಾರೆ.
‘ಹೋದ ವಾರ ಪೊಲೆಂಡ್‌ನಲ್ಲಿ ನಡೆದಿದ್ದ ನೇಷನ್ಸ್ ಕಪ್ ಈಕ್ವೆಸ್ಟ್ರಿಯನ್‌ನಲ್ಲಿ ಡಯಾರಾ ಸ್ಪರ್ಧಿಸಿತ್ತು. ಎರಡನೇ ಸ್ಥಾನ ಗಳಿಸಿತ್ತು. ಈ ಬಾರಿ ಎರಡೂ ಕುದುರೆಗಳನ್ನು ಜರ್ಮನಿಯ ಎರಡು ತಾಣಗಳಲ್ಲಿ ಪ್ರತ್ಯೇಕವಾಗಿ ಜುಲೈ 11ರಿಂದ ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲಿ ವಿಶೇಷ ಸೌಲಭ್ಯಗಳು ಇವೆ. ಅದ್ದರಿಂದ ತರಬೇತಿಗೆ ಅಡೆ ತಡೆ ಇಲ್ಲ‘ ಎಂದು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.