ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಹಾಕಿ ಸೆಮಿಯಲ್ಲಿ ಜರ್ಮನಿ–ಆಸ್ಟ್ರೇಲಿಯಾ ಮುಖಾಮುಖಿ

Last Updated 1 ಆಗಸ್ಟ್ 2021, 8:31 IST
ಅಕ್ಷರ ಗಾತ್ರ

ಟೋಕಿಯೊ:ಬಲಿಷ್ಠ ಆಸ್ಟ್ರೇಲಿಯಾ ಮತ್ತು ಜರ್ಮನಿ ತಂಡಗಳು ಪುರುಷರ ಹಾಕಿ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಭಾನುವಾರ ನಡೆದ ಮೊದಲ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಜರ್ಮನಿ 3–1 ಗೋಲುಗಳಿಂದ ಅರ್ಜೆಂಟೀನಾವನ್ನು ಪರಾಭವಗೊಳಿಸಿತು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ ಐದನೇ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿತು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದ ಅರ್ಜೆಂಟೀನಾ ತಂಡ ಈ ಪಂದ್ಯದಲ್ಲಿ ಸಂಪೂರ್ಣವಾಗಿ ಮಂಕಾಯಿತು. ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿದ್ದ ಜರ್ಮನಿ ತಂಡವು ಎದುರಾಳಿಗಳ ವಿರುದ್ಧ ಪೂರ್ಣ ಪ್ರಾಬಲ್ಯ ಮೆರೆಯಿತು.

ಜರ್ಮನಿ ಪರ ಲುಕಾಸ್‌ ವಿಂಡ್‌ಫೆಡರ್‌ 19 ಮತ್ತು 48ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಟಿಮ್‌ ಹರ್ಜ್‌ಬ್ರಚ್‌ 40ನೇ ನಿಮಿಷದಲ್ಲಿ ಕೈಚಳಕ ತೋರಿದರು. ಅರ್ಜೆಂಟೀನಾ ತಂಡದ ಶುಟ್‌ ಕ್ಯಾಸಿಲಾ 52ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ವಿದಾಯದ ಪಂದ್ಯ: ಇದು ಅರ್ಜೆಂಟೀನಾ ತಂಡದ ಅನುಭವಿ ಗೋಲ್‌ಕೀಪರ್‌ ಯುವಾನ್‌ ವಿವಾಲ್ಡಿ ಅವರ ವೃತ್ತಿಬದುಕಿನ ಕೊನೆಯ ಪಂದ್ಯವಾಗಿತ್ತು.

‘ಇದು ನನ್ನ ವೃತ್ತಿ ಬದುಕಿನ ಅಂತಿಮ ಪಂದ್ಯ. ಸುದೀರ್ಘ ಕಾಲ ದೇಶಕ್ಕಾಗಿ ಆಡಿದ್ದೇನೆ. ಅದನ್ನೆಲ್ಲಾ ನೆನೆಪಿಸಿಕೊಂಡರೆ ಹೆಮ್ಮೆಯಾಗುತ್ತದೆ’ ಎಂದು 42 ವರ್ಷ ವಯಸ್ಸಿನ ಯುವಾನ್‌ ಹೇಳಿದರು.

ಆಸ್ಟ್ರೇಲಿಯಾ ಜಯಭೇರಿ: ರೋಚಕತೆ ಪಡೆದುಕೊಂಡಿದ್ದ ಎರಡನೇ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಗೆಲುವಿನ ಸಿಹಿ ಸವಿಯಿತು.

ಕಾಂಗರೂ ನಾಡಿನ ತಂಡವು ಶೂಟೌಟ್‌ನಲ್ಲಿ 3–0ರಿಂದ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿತು.

ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡ ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ಒಡ್ಡಿತು. ಹೀಗಾಗಿ ನಿಗದಿತ ಅವಧಿಯಲ್ಲಿ ಉಭಯ ತಂಡಗಳೂ ತಲಾ ಎರಡು ಗೋಲು ಗಳಿಸಿದವು. ವಿಜೇತರನ್ನು ನಿರ್ಧರಿಸಲು ಶೂಟೌಟ್‌ ಮೊರೆ ಹೋಗಲಾಯಿತು. ಆಸ್ಟ್ರೇಲಿಯಾ ತಂಡದ ಗೋಲ್‌ಕೀಪರ್‌ ಆ್ಯಂಡ್ರ್ಯೂ ಚಾರ್ಟರ್‌, ನೆದರ್ಲೆಂಡ್ಸ್‌ ಆಟಗಾರರ ನಾಲ್ಕು ಪ್ರಯತ್ನಗಳನ್ನು ವಿಫಲಗೊಳಿಸಿ ಗೆಲುವಿನ ರೂವಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT