ಬುಧವಾರ, ಆಗಸ್ಟ್ 10, 2022
20 °C
ಟೋಕಿಯೊ ಕೂಟ ಆಯೋಜಕರ ಮನವಿ

ಒಲಿಂಪಿಕ್ಸ್: ಕಾಂಡೋಮ್ ತೆಗೆದುಕೊಳ್ಳಿ; ಆದರೆ ಕ್ರೀಡಾಗ್ರಾಮದಲ್ಲಿ ಬಳಸದಿರಿ!

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ರಾಯಿಟರ್ಸ್): ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್‌ಗೆ ಆಯೋಜಕರು ಒಂದು ಲಕ್ಷ 50 ಸಾವಿರ ಕಾಂಡೋಮ್‌ಗಳನ್ನು ವಿತರಿಸುವ ಚಿಂತನೆ ನಡೆಸಿದ್ದಾರೆ. ಆದರೆ ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ಅಂತರ ಕಾಪಾಡುವುದು ಪ್ರಮುಖ ಆದ್ಯತೆಯಾಗಿರುವುದರಿಂದ ಅವುಗಳನ್ನು ಕ್ರೀಡಾಗ್ರಾಮದಲ್ಲಿ ಬಳಸದೆ, ಮನೆಗೆ ಕೊಂಡೊಯ್ಯಿರಿ ಎಂದು ಹೇಳುತ್ತಿದ್ದಾರೆ.

ಎಚ್‌ಐವಿ ಹಾಗೂ ಏಡ್ಸ್ ಕುರಿತು ಜಾಗೃತಿ ಮೂಡಿಸಲು, 1988ರ ಸೋಲ್‌ ಒಲಿಂಪಿಕ್‌ ಕೂಟದಿಂದ ಇದುವರೆಗೆ ಹೆಚ್ಚಿನ ಸಂಖ್ಯೆಯ ಕಾಂಡೋಮ್‌ಗಳನ್ನು ವಿತರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಆ ಸಂಪ್ರದಾಯವನ್ನು ಮುಂದುವರಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ತನಗೆ ತಿಳಿಸಿದೆ ಎಂದು ಆಯೋಜನಾ ಸಮಿತಿ ಹೇಳಿದೆ ಎಂದು 'ರಾಯ್ಟರ್ಸ್‌' ವರದಿ ಮಾಡಿದೆ.

ಆದರೆ ಪರಸ್ಪರ ಅಂತರವನ್ನು ಕಾಪಾಡಲು ಅಥ್ಲೀಟ್‌ಗಳಿಗೆ ಹೇಳಲಾಗುತ್ತಿದೆ. ‘ಕ್ರೀಡಾಗ್ರಾಮದಲ್ಲಿ ಬಳಸಲು ಈ ಬಾರಿ ಕಾಂಡೋಮ್ ವಿತರಿಸುತ್ತಿಲ್ಲ, ಬದಲಾಗಿ ಏಡ್ಸ್ ಹಾಗೂ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವುಗಳನ್ನು ಮನೆಗೆ ಕೊಂಡೊಯ್ಯುವಂತೆ ಹೇಳಲಾಗುತ್ತಿದೆ’ ಎಂದು ಟೋಕಿಯೊ ಒಲಿಂಪಿಕ್ಸ್ ಆಯೋಜಕರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಿದೇಶದಿಂದ ಬರುವ ಪ್ರೇಕ್ಷಕರಿಗೆ ಅಧಿಕಾರಿಗಳು ಈಗಾಗಲೇ ನಿರ್ಬಂಧ ಹೇರಿದ್ದಾರೆ. ಕೂಟಕ್ಕೆ ಹಾಜರಾಗುವವರಿಗೆ ಹರ್ಷೋದ್ಗಾರ ಅಥವಾ ಹಾಡುವ ಬದಲು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಬೆಂಬಲ ತೋರಿಸುವಂತೆ ಕೇಳಿಕೊಳ್ಳುವ ಮೂಲಕ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಪರಿಹರಿಸಬೇಕಾದ ಇನ್ನೊಂದು ಸಮಸ್ಯೆ ಭೋಜನದ್ದು:

ಆಯೋಜಕರು ಕ್ರೀಡಾಗ್ರಾಮವಾಸಿಗಳಿಗೆ, ಏಕಕಾಲದಲ್ಲಿ ಸುಮಾರು ನಾಲ್ಕೂವರೆ ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ವಿಶಾಲವಾದ ಸಭಾಂಗಣದಲ್ಲಿ ಊಟದ ವ್ಯವಸ್ಥೆ ಮಾಡುವ ಚಿಂತನೆಯನ್ನು ಈ ಮೊದಲು ಹೊಂದಿದ್ದರು. ಆದರೆ ಈಗ, ಒಬ್ಬೊಬ್ಬರೇ ಕುಳಿತು ಊಟ ಮಾಡುವ ಮೂಲಕ ಇತರರೊಂದಿಗೆ ಅಂತರ ಕಾಪಾಡಿಕೊಳ್ಳುವಂತೆ ಕ್ರೀಡಾಪಟುಗಳಿಗೆ ಸೂಚಿಸಲಿದ್ದಾರೆ. ಊಟದ ಬಳಿಕ ತಾವು ಕುಳಿದ ಜಾಗವನ್ನು ಸ್ವಚ್ಛಗೊಳಿಸುವಂತೆಯೂ ಹೇಳಲಿದ್ದಾರೆ.

‘ಕ್ರೀಡಾಗ್ರಾಮಗಳಂತಹ ಸ್ಥಳಗಳಲ್ಲಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿದ್ದಲ್ಲಿ, ಕೇವಲ ಒಬ್ಬ ವ್ಯಕ್ತಿಯಿಂದಲೂ ವೈರಸ್ ಹರಡಬಲ್ಲದು’ ಎಂದು ಸಾಂಕ್ರಾಮಿಕ ರೋಗ ತಜ್ಞ ನೋಬುಹಿಕೊ ಒಕಾಬೆ ಶುಕ್ರವಾರ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು