ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹಾವಳಿ | ಟೋಕಿಯೊ ಒಲಿಂಪಿಕ್ಸ್‌ ಕೌಂಟ್ ಡೌನ್ ಕಾರ್ಯಕ್ರಮಗಳಿಲ್ಲ

Last Updated 5 ಜೂನ್ 2020, 19:30 IST
ಅಕ್ಷರ ಗಾತ್ರ

ಟೋಕಿಯೊ: ಮುಂದೂಡಲಾದ ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಬಿಡಲು ಆಯೋಜಕರು ನಿರ್ಧರಿಸಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಆರ್ಥಿಕ ದುಸ್ಥಿತಿನಿರ್ಮಾಣವಾಗಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ಜುಲೈ ತಿಂಗಳಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಕೂಟವನ್ನು ಮುಂದಿನ ಜುಲೈ ವರೆಗೆ ಮುಂದೂಡಲಾಗಿದೆ. ಆದರೆ ಮುಂದಿನ ವರ್ಷವೂ ನಿಗದಿಯಂತೆ ಕೂಟ ನಡೆಸಲು ಸಾಧ್ಯವೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಒಂದು ವರ್ಷದ ಮೊದಲು ಕೌಂಟ್‌ ಡೌನ್‌ ರೂಪದಲ್ಲಿ ನಡೆಸಲು ನಿರ್ಧರಿಸಿರುವ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಕಳೆದ ವರ್ಷ ಹೊಸ ವಿನ್ಯಾಸದ ಪದಕಗಳ ಅನಾವರಣವೂ ಸೇರಿದಂತೆ ಟೋಕಿಯೊ ನಗರದಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಕಾರ್ಯಕ್ರಮಗಳನ್ನು ನಡೆಸದಿದ್ದರೂ ಒಲಿಂಪಿಕ್ಸ್ ಸಂದರ್ಭದಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶಿಸುವ ಕಾರ್ಯವನ್ನು ಮಾಡಲಿದ್ದೇವೆ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.

ಮಹಾಮಾರಿಯು ಜಗತ್ತಿನಾದ್ಯಂತ ಸೃಷ್ಟಿಸಿರುವ ವಿಷಮ ಸ್ಥಿತಿ ಮತ್ತು ವೈರಾಣು ಹರಡುವ ಭೀತಿಯಿಂದಾಗಿ ಕಾರ್ಯಕ್ರಮಗಳನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಜಪಾನ್‌ನ ಮಾಧ್ಯಮಗಳು ಈಚೆಗೆ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ.

ರಾಷ್ಟ್ರದಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಈಗ ರದ್ದು ಮಾಡಲಾಗಿದೆ. ಆದರೆ ಟೋಕಿಯೊದಲ್ಲಿ ಕೋವಿಡ್ ಬಾಧಿತರು ಪತ್ತೆಯಾಗುತ್ತಿರುವುದು ಆತಂಕ ತಂದೊಡ್ಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಯೋಜನೆ ಜಾರಿಗೊಳಿಸುವುದಕ್ಕೂ ಮೊದಲು ಕ್ರೀಡಾಕೂಟ ನಡೆಯಲಿದೆಯೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಆಯೋಜಕ ಸಮಿತಿಯ ಸದಸ್ಯ ತೊಷಿಯಾಕಿ ಎಂಡೊ ಶುಕ್ರವಾರ ಹೇಳಿದ್ದಾರೆ.

ವೈರಾಣು ಹತೋಟಿಗೆ ಬಾರದೆ ಒಲಿಂಪಿಕ್ಸ್ ನಡೆಸುವುದು ಕಷ್ಟಸಾಧ್ಯ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಈಗಾಗಲೇ ಸ್ಪಷ್ಟಪಡಿಸಿದ್ದು ವೈರಾಣು ಬಾಧೆ ಮುಂದುವರಿದರೆ ಕೂಟವನ್ನು ರದ್ದು ಮಾಡುವುದು ಅನಿವಾರ್ಯ ಎಂದು ಒಲಿಂಪಿಕ್ಸ್ ಆಯೋಜನಾ ಸಮಿತಿ ಅಧ್ಯಕ್ಷ ಯೊಶಿರೊ ಮೋರಿ ಕೂಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT