ಸೋಮವಾರ, ಆಗಸ್ಟ್ 2, 2021
28 °C
ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿಕೆ

ಕಿರಿಯ ಅಥ್ಲೀಟ್‌ಗಳಿಗೂ ‘ಟಾಪ್ಸ್‌’‌ ವಿಸ್ತರಣೆ: ಕೇಂದ್ರ ಸಚಿವ ರಿಜಿಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2028ರ ಒಲಿಂಪಿಕ್ಸ್‌ಗೆ ಚಾಂಪಿಯನ್‌ ಕ್ರೀಡಾಪಟುಗಳನ್ನು ರೂಪಿಸುವ ಉದ್ದೇಶದೊಂದಿಗೆ ಜೂನಿಯರ್‌ ಅಥ್ಲೀಟ್‌ಗಳಿಗೂ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯನ್ನು (ಟಾಪ್ಸ್‌) ಶೀಘ್ರ ಆರಂಭಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಶುಕ್ರವಾರ ನಡೆದ ‘ಫಿಟ್‌ ಹೈ ತೋ ಹಿಟ್‌ ಹೈ ಫಿಟ್‌ ಇಂಡಿಯಾ’ ಎಂಬ ವೆಬಿನಾರ್‌ನಲ್ಲಿ ರಿಜಿಜು ಈ ವಿಷಯ ಪ್ರಕಟಿಸಿದರು. ರಿಜಿಜು ಜೊತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್‌ ಪೋಖ್ರಿಯಾಲ್‌, ಒಲಿಂಪಿಕ್‌ ಪದಕ ವಿಜೇತ ಬ್ಯಾಡ್ಮಿಂಟನ್‌ ಪಟು ಪಿ.ವಿ.ಸಿಂಧು ಹಾಗೂ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರೂ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

‘ಇದು ಪ್ರತಿಯೊಬ್ಬ ಭಾರತೀಯನ ಕನಸು. ಇದನ್ನು ಒಂದು ಸಾಧನೆಯ ಗುರಿಯಾಗಿ ಹಂಚಿಕೊಳ್ಳಲು ಬಯಸುತ್ತೇನೆ. ಒಲಿಂಪಿಕ್ಸ್‌ ವಿಶ್ವದೊಡ್ಡ ಬಹುದೊಡ್ಡ ಕೂಟ. ಭಾರತ ಪದಕಪಟ್ಟಿಯಲ್ಲಿ ಎಲ್ಲೂ ಕಾಣಿಸಿಕೊಳ್ಳದಿದ್ದಾಗ ನಿಜವಾಗಲೂ ಮನಸ್ಸಿಗೆ ವೇದನೆಯಾಗುತ್ತದೆ. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ನಮಗೆ ದೊಡ್ಡ ನೆಲೆಯಿದೆ. ಟಾಪ್‌ ಯೋಜನೆ ಪ್ರಸ್ತುತ ಹಿರಿಯ ಅಥ್ಲೀಟ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಕಿರಿಯರಿಗೂ ಇದನ್ನು ಶೀಘ್ರ ವಿಸ್ತರಿಸುತ್ತೇವೆ’ ಎಂದು ರಿಜಿಜು ಹೇಳಿದರು.

‘10–12 ವರ್ಷದ ಪ್ರತಿಭೆಗಳನ್ನು ಗುರುತಿಸಿ, ಅವರ ತರಬೇತಿ, ಕ್ರೀಡಾ ಅಗತ್ಯಗಳ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲಿದೆ. 2024ರ ಪ್ಯಾರಿಸ್‌ ಹಾಗೂ 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್‌ ಕೂಟಗಳಲ್ಲಿ ಸ್ಪರ್ಧಿಸುವಂತೆ ಅವರನ್ನು ಸಜ್ಜುಗೊಳಿಸಲಾಗುತ್ತದೆ‌’ ಎಂದು ಅವರು ವಿವರಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ಒಲಿಂಪಿಕ್ ಟಾಸ್ಕ್‌ ಫೋರ್ಸ್‌ನ ಶಿಫಾರಸುಗಳು ಬಂದಿವೆ. ಸರ್ಕಾರ ಅವುಗಳನ್ನು ಅನುಷ್ಠಾನಗೊಳಿಸುವ ಹಂತದಲ್ಲಿದೆ. 2028ರ ಒಲಿಂಪಿಕ್‌ ಕೂಟದಲ್ಲಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆಯುವ ವಿಶ್ವಾಸವಿದೆ’ ಎಂದು ರಿಜಿಜು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು