ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮಕ್ಕೆ ಉತ್ತಮ ಸಮಯ ಯಾವುದು?

Last Updated 22 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಸದಾ ಆರೋಗ್ಯದಿಂದ ಇರುವುದಕ್ಕೆ ಹಲವು ತಜ್ಞರು ನೀಡುವ ಸಲಹೆ, ದೈಹಿಕ ಶ್ರಮ ಬೇಡುವ ವ್ಯಾಯಾಮಗಳನ್ನು ಮಾಡುವುದು. ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೆ, ತೂಕ ಇಳಿಸಿಕೊಳ್ಳುವುದಕ್ಕೆ, ಉತ್ತಮ ಜೀವನಶೈಲಿಗೆ, ದಿನವಿಡೀ ಲವಲವಿಕೆಯಿಂದ ಇರುವುದಕ್ಕೆ, ಸುಖನಿದ್ರೆಗೆ ವ್ಯಾಯಾಮಗಳನ್ನು ಮಾಡಬೇಕು.

ದೇಹ ಸಪೂರವಾಗಬೇಕೆಂದರೆ, ವಾರದಲ್ಲಿ ಕನಿಷ್ಠ ಮೂರು ದಿನ, ಒಂದು ಗಂಟೆ ಹೊತ್ತು ವ್ಯಾಯಾಮಕ್ಕೆ ಮೀಸಲಿಡುವುದು ಒಳಿತು ಎನ್ನುತ್ತಾರೆ ತಜ್ಞರು. ಸೈಕ್ಲಿಂಗ್, ನಡಿಗೆ, ಜಿಮ್‌ನಲ್ಲಿ ಬೆವರು ಹರಿಸುವುದು... ಹೀಗೆ ಇಷ್ಟವಾಗುವ ವ್ಯಾಯಾಮಗಳನ್ನು ಮಾಡಬಹುದು. ವ್ಯಾಯಾಮಗಳನ್ನು ನಿರ್ದಿಷ್ಟ ಸಮಯಗಳಲ್ಲಿ ಮಾಡಿದರೆ ಹೆಚ್ಚು ಅನುಕೂಲ ಎಂಬ ಅಭಿಪ್ರಾಯ ಹಲವು ತಜ್ಞರದ್ದು. ಕೆಲವರಿಗೆ ಮುಂಜಾನೆ ವ್ಯಾಯಾಮ ಮಾಡುವುದಕ್ಕೆ ಅನುಕೂಲವಾಗಿದ್ದರೆ, ಇನ್ನೂ ಕೆಲವರಿಗೆ ಸಂಜೆ ಮಾತ್ರ ಮಾಡಲು ಅವಕಾಶವಿರುತ್ತದೆ. ಈ ಎರಡನ್ನೂ ಹೋಲಿಸಿದರೆ, ಯಾವ ಸಮಯದಲ್ಲಿ ಹೆಚ್ಚು ಅನುಕೂಲ ಎಂಬ ಪ್ರಶ್ನೆ ಹಲವರಲ್ಲಿ ಇದೆ.

ಮುಂಜಾನೆ ವ್ಯಾಯಾಮ

ನಿತ್ಯ ಮುಂಜಾನೆ ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡರೆ, ನಿತ್ಯ ಜೀವನದ ಕೆಲಸಗಳನ್ನು ಯೋಜನಾಬದ್ಧವಾಗಿ ಕಾರ್ಯಗತಗೊಳಿಸಲು ನೆರವಾಗುತ್ತದೆ. ಇದು ಇತರೆ ಚಟುವಟಿಕೆಗಳ ಮೇಲೂ ಪ್ರಭಾವ ಬೀರುತ್ತದೆ. ಸಮಯನಿರ್ವಹಣೆಗೂ ಸಹಕಾರಿಯಾಗುತ್ತದೆ. ದಿನವಿಡೀ ಲವಲವಿಕೆಯಿಂದ ಇರಬಹುದು. ಮುಂಜಾನೆ ಮಾಡುವುದರಿಂದ ಮಧ್ಯಾಹ್ನದ ಹೊತ್ತಿಗೆ ದೇಹದ ಕಾರ್ಯಚಟುವಟಿಕೆ ಹೆಚ್ಚು ಚುರುಕಾಗುತ್ತಾ ಹೋಗುತ್ತವೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

ದೇಹದ ಕೊಬ್ಬು ಕರಗುವುದಕ್ಕೂ ಮುಂಜಾನೆ ವ್ಯಾಯಾಮ ಹೆಚ್ಚು ಅನುಕೂಲ. ದೇಹದ ಚಯಾಪಚಯ ಕ್ರಿಯೆಗಳು ಚುರುಕಾಗುವುದಕ್ಕೆ, ಕ್ಯಾಲೊರಿಗಳು ಹೆಚ್ಚಿನ ಪ್ರಮಾಣದಲ್ಲಿ ಕರಗುವುದಕ್ಕೂ ನೆರವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಮುಂಜಾನೆ ಏಳುವುದಕ್ಕೆ ಕೆಲವರಿಗೆ ದೇಹ ಸಹಕರಿಸುವುದಿಲ್ಲ.

ಇಂತಹವರಿಗೆ ಕೀಲುಗಳಲ್ಲಿ ಸಮಸ್ಯೆ ಇದ್ದರೆ, ವ್ಯಾಯಾಮಗಳು ಅದರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಹೀಗಾಗಿ ತಜ್ಞರ ಸಲಹೆ ಪಡೆದು ಮುಂಜಾನೆ ವ್ಯಾಯಾಮ ಮಾಡಬಹುದು. ಮುಂಜಾನೆ ಆಹಾರ ಸೇವಿಸಿ ವ್ಯಾಯಾಮ ಮಾಡುವುದೂ ಸಲ್ಲ ಎನ್ನುವವರೂ ಇದ್ದಾರೆ.

ಸಂಜೆ ವ್ಯಾಯಾಮ

ಸಂಜೆಹೊತ್ತಿಗೆ ದೇಹದ ಉಷ್ಣಾಂಶ ಏರಿಕೆಯಾಗಿರುವುದರಿಂದ ದೇಹದ ಮಾಂಸಂಖಂಡಗಳು ಮತ್ತು ಕೀಲುಗಳ ಕಾರ್ಯವೈಖರಿ ಶೇ 20ರಷ್ಟು ಚುರುಕಾಗುತ್ತವೆ ಎಂದೂ ಕೆಲವು ಅಧ್ಯಯನಗಳು ಹೇಳಿವೆ. ಮುಂಜಾನೆ ವ್ಯಾಯಾಮಕ್ಕೆ ಹೋಲಿಸಿದರೆ, ಸಂಜೆ ವ್ಯಾಯಾಮ ಮಾಡುವವರಿಗೆ ಸುಸ್ತು, ಆಯಾಸದಂತಹ ಸಮಸ್ಯೆಗಳೂ ಕಡಿಮೆ ಎಂದೂ ತಿಳಿಸಿವೆ.

ಮಧ್ಯಾಹ್ನದ ನಂತರ ಶ್ವಾಸಕೋಶಗಳ ಕಾರ್ಯವೈಖರಿ ಹೆಚ್ಚು ಚುರುಕಾಗುವುದರಿಂದ, ವ್ಯಾಯಾಮ ಮಾಡುವುದಕ್ಕೆ ಹೆಚ್ಚು ಶಕ್ತಿ ಕೂಡ ಸಿಗುತ್ತದೆ. ಹೃದಯದ ಕಾರ್ಯವೈಖರಿಯೂ ಸಂಜೆಹೊತ್ತು ಹೆಚ್ಚು ಚುರುಕಾಗಿರುತ್ತದೆ ಎಂದು ಹೇಳಿವೆ.

ಮುಂಜಾನೆಯಂತೆಯೇ ಸಂಜೆ ವ್ಯಾಯಾಮ ಮಾಡುವುದರಿಂದಲೂ ಮಾನಸಿಕ ಒತ್ತಡ ನಿವಾರಣೆಗೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಮುಂಜಾನೆಯಿಂದ ಸಂಜೆವರೆಗಿನ ಎಲ್ಲ ಜಂಜಾಟಗಳ ಒತ್ತಡವೂ ಕಡಿಮೆಯಾಗುತ್ತದೆ. ಹೀಗಾಗಿ ಸಮಯ ನಿರ್ವಹಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ವ್ಯಾಯಾಮ ಮಾಡಬಹುದು. ರಾತ್ರಿಯಲ್ಲಿ ನಿದ್ರಾ ಸಮಸ್ಯೆಗಳೂ ಇರುವುದಿಲ್ಲ ಎನ್ನುತ್ತಾರೆ ಕೆಲವರು.

ಆದರೆ ಸಂಜೆಯ ಸಭೆ–ಸಮಾರಂಭಗಳಲ್ಲಿ ಭಾಗವಹಿಸಬೇಕಿದ್ದರೆ, ವ್ಯಾಯಾಮ ಮಾಡಲು ಸಾಧ್ಯವಾಗದೇ ಇರಬಹುದು. ಸಂಜೆ 7ರಿಂದ 9 ಗಂಟೆಯವರೆಗೆ ಕೆಲಸ ಮಾಡುವ ಪರಿಸ್ಥಿತಿ ಇದ್ದರೂ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಸಂಜೆ ವ್ಯಾಯಾಮಕ್ಕೂ ನಿದ್ರಿಸುವ ಅವಧಿಗೂ ಸಾಕಷ್ಟು ಅಂತರ ಇರಬೇಕೆಂಬುದು ತಜ್ಞರ ಮಾತು. ಏಕೆಂದರೆ ವ್ಯಾಯಾಮ ಮಾಡಿದ ನಂತರ, ದೇಹದ ಚಟುವಟಿಕೆ ಹೆಚ್ಚು ಚುರುಕಾಗುತ್ತದೆ. ಹೀಗಾಗಿ ಕೂಡಲೇ ನಿದ್ರಿಸುವುದಕ್ಕೆ ದೇಹ ಸಹಕರಿಸುವುದಿಲ್ಲ. ಸಂಜೆಹೊತ್ತು ವ್ಯಾಯಾಮ ಮಾಡುವುದಕ್ಕೆ ಎಲ್ಲ ರೀತಿಯ ಅನುಕೂಲಗಳು ಇದ್ದರಷ್ಟೇ ವ್ಯಾಯಾಮ ಮಾಡುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT