ಸೋಮವಾರ, ಜುಲೈ 13, 2020
29 °C
ನಿರ್ಗತಿಕರ ನೋವಿಗೆ ಮಿಡಿದ ಆಟಗಾರ್ತಿಯರು

ಮಹಿಳಾ ಹಾಕಿ ತಂಡದಿಂದ ವಿಶಿಷ್ಟ ಕಾರ್ಯ: 1000 ಕುಟುಂಬಗಳ ಹಸಿವು ನೀಗಿಸಲು ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ನಿರ್ಗತಿಕರು ಹಾಗೂ ನಿರಾಶ್ರಿತರು ಕಂಗಾಲಾಗಿದ್ದಾರೆ. ಅವರ ಕಣ್ಣೀರು ಒರೆಸುವ ಕಾರ್ಯಕ್ಕೆ ಭಾರತ ಮಹಿಳಾ ಹಾಕಿ ತಂಡ ಮುಂದಾಗಿದೆ.

ಇದಕ್ಕಾಗಿ ತಂಡವು ‘ಫನ್‌ ಫಿಟ್‌ನೆಸ್‌ ಚಾಲೆಂಜ್‌’ ಆರಂಭಿಸಿದೆ. 18 ದಿನಗಳ ಈ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ಲಭಿಸಿದ್ದು, ಇದರಿಂದ ಸಂಗ್ರಹವಾಗುವ ಹಣದಿಂದ 1000 ವಲಸಿಗರ ಕುಟುಂಬಗಳಿಗೆ ಆಹಾರ ಪೂರೈಸಲು ನಿರ್ಧರಿಸಿದೆ.

‘ಲಾಕ್‌ಡೌನ್‌ನಿಂದಾಗಿ ಸಾವಿರಾರು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂಬ ಸುದ್ದಿಯನ್ನು ನಿತ್ಯವೂ ದಿನಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ನಿರ್ಗತಿಕರ ಹಸಿವು ನೀಗಿಸುವ ಉದ್ದೇಶದಿಂದ ಫಿಟ್‌ನೆಸ್‌ ಚಾಲೆಂಜ್‌ ಆರಂಭಿಸಿದ್ದೇವೆ’ ಎಂದು ಭಾರತ ತಂಡದ ನಾಯಕಿ ರಾಣಿ ರಾಂಪಾಲ್‌ ಅವರು ಹಾಕಿ ಇಂಡಿಯಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆನ್‌ಲೈನ್‌ ಮೂಲಕ ಹೆಚ್ಚು ಜನರನ್ನು ತಲುಪಬಹುದು ಎಂಬ ಕಾರಣಕ್ಕೆ ಈ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ದೇಣಿಗೆ ಸಂಗ್ರಹಿಸುವ ಜೊತೆಗೆ ಲಾಕ್‌ಡೌನ್‌ ಸಮಯದಲ್ಲಿ ಅಗತ್ಯ ವ್ಯಾಯಾಮಗಳನ್ನು ಮಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಂದೇಶವನ್ನೂ ಜನರಿಗೆ ನೀಡಲಿದ್ದೇವೆ’ ಎಂದು ರಾಣಿ ತಿಳಿಸಿದ್ದಾರೆ.

‘ಫಿಟ್‌ನೆಸ್‌ ಚಾಲೆಂಜ್‌ನಿಂದ ಸಂಗ್ರಹವಾಗುವ ಹಣವನ್ನು ದೆಹಲಿ ಮೂಲದ ಸ್ವಯಂ ಸೇವಾ ಸಂಸ್ಥೆ ಉದಯ್‌ ಫೌಂಡೇಷನ್‌ಗೆ ನೀಡಲಿದ್ದೇವೆ. ಜೊತೆಗೆ ರೋಗಿಗಳಿಗೆ, ವಲಸಿಗರಿಗೆ ಹಾಗೂ ಕೊಳೆಗೇರಿ ನಿವಾಸಿಗಳಿಗೆ ಆಹಾರ, ದಿನಸಿ ಸಾಮಾಗ್ರಿ, ಸೋಪು ಹಾಗೂ ಸ್ಯಾನಿಟೈಸರ್‌ ಕಿಟ್‌ಗಳನ್ನು ಒದಗಿಸಲೂ ವಿನಿಯೋಗಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಚಾಲೆಂಜ್‌ನಲ್ಲಿ ಭಾರತ ತಂಡದ ಆಟಗಾರ್ತಿಯರು ಬರ್ಪೀಸ್‌, ಲಂಚಸ್‌, ಸ್ಕ್ವಾಟ್ಸ್‌, ಸ್ಪೈಡರ್‌ ಮ್ಯಾನ್‌ ಪುಷಪ್ಸ್‌ ಸೇರಿದಂತೆ ಹಲವು  ವ್ಯಾಯಾಮಗಳನ್ನು ಮಾಡಲಿದ್ದಾರೆ.

‘ಪ್ರತಿ ದಿನ ಒಬ್ಬೊಬ್ಬರು ಒಂದೊಂದು ವ್ಯಾಯಾಮವನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಿಂದ ಹತ್ತು ಮಂದಿಗೆ ಟ್ಯಾಗ್‌ ಮಾಡಲಿದ್ದಾರೆ. ಸವಾಲು ಸ್ವೀಕರಿಸುವವರು ₹100 ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡಬಹುದು. ನಮ್ಮ ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಗುವ ಭರವಸೆ ಇದೆ’ ಎಂದು ಉಪನಾಯಕಿ ಸವಿತಾ ಹೇಳಿದ್ದಾರೆ.

‘ತಂಡದಲ್ಲಿರುವ ಎಲ್ಲಾ ಆಟಗಾರ್ತಿಯರೂ ಬಡ ಕುಟುಂಬಗಳಿಂದ ಬಂದವರಾಗಿದ್ದಾರೆ. ನಾವು ಕೂಡ ಒಪ್ಪತ್ತಿನ ಊಟಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಇವತ್ತು ಉತ್ತಮ ಸ್ಥಿತಿಯಲ್ಲಿದ್ದೇವೆ. ಇನ್ನೊಬ್ಬರ ನೋವಿಗೆ ಮಿಡಿಯುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅವರು ನುಡಿದಿದ್ದಾರೆ.

‘ಕೆಲ ದಿನಗಳ ಹಿಂದೆ ದೂರವಾಣಿಯ ಮೂಲಕ ಅಪ್ಪನ ಜೊತೆ ಮಾತನಾಡಿದೆ. ಆಗ ಅವರು ಕಷ್ಟದ ದಿನಗಳನ್ನು ಮೆಲುಕು ಹಾಕಿದರು. ನೀನು ಹಾಕಿ ತಂಡದಲ್ಲಿ ಸ್ಥಾನ ಪಡೆದು ಒಂದಿಷ್ಟು ಹಣ ಸಂಪಾದಿಸಿದ್ದರಿಂದ ಸಂಕಷ್ಟಗಳೆಲ್ಲಾ ದೂರವಾಗಿವೆ. ಇಲ್ಲದಿದ್ದರೇ ನಾವು ಕೂಡ ಲಾಕ್‌ಡೌನ್‌ ಸಮಯದಲ್ಲಿ ತುತ್ತಿನ ಚೀಲ ತುಂಬಿಸಲು ಪರದಾಡಬೇಕಾಗಿತ್ತು ಎಂದರು. ಅವರ ಮಾತುಗಳನ್ನು ಕೇಳಿ ಮನಸ್ಸು ಭಾರವಾಯಿತು. ಕಣ್ಣುಗಳು ತುಂಬಿ ಬಂದವು’ ಎಂದು ರಾಣಿ ತಿಳಿಸಿದ್ದಾರೆ.

ರಾಣಿಯವರ ತಂದೆ ಈ ಹಿಂದೆ ಹರಿಯಾಣದಲ್ಲಿ ಲಗೇಜು ಗಾಡಿ ಎಳೆಯುವ (ಕಾರ್ಟ್‌) ಕೆಲಸ ಮಾಡುತ್ತಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು