ಮಂಗಳವಾರ, ಮೇ 18, 2021
30 °C

ಮಹಿಳೆಯರ ರೇಸಿಂಗ್:‌ ವೈಭವದ ಕನಸು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

prajavani

ತಗ್ಗು ದಿಣ್ಣೆಗಳ ಹಾದಿ,  ನುಣುಪಾದ ಕಾಂಕ್ರಿಟ್ ರಸ್ತೆ ಅಥವಾ  ಕಡಿದಾದ ತಿರುವುಗಳೇ ತುಂಬಿರುವ ರಸ್ತೆಗಳಲ್ಲಿ ಒಂದಿಷ್ಟೂ ಅಂಜದೇ ಅಳುಕದೇ ಶರವೇಗದಲ್ಲಿ ಬೈಕ್‌ಗಳನ್ನು ಮುನ್ನುಗ್ಗಿಸುವ ಅವರ ಧೈರ್ಯಕ್ಕೆ ಸಾಟಿಯೇ ಇಲ್ಲ.

ಹೌದು; ಅವರು ಮಹಿಳಾ ರೇಸಿಂಗ್ ಪಟುಗಳು. ಬೆಂಗಳೂರಿನ ಟಿವಿಎಸ್‌ ರೇಸಿಂಗ್ ಕ್ಲಬ್‌ನ ಭರವಸೆಯ ತಾರೆಗಳು. ಸದ್ಯ ದೇಶ–ವಿದೇಶಗಳ ರೇಸ್‌ಗಳಲ್ಲಿ ಮುಂಚೂಣಿಯಲ್ಲಿರುವ ತಂಡ ಇದು. ಕೊರೊನಾ ವೈರಸ್‌ ಹಾವಳಿಯಿಂದಾಗಿ ಕೆಲವು ತಿಂಗಳುಗಳಿಂದ ಸ್ಪರ್ಧೆಗಳಿಗೆ ಹೋಗುವ ಮತ್ತು ಅದಕ್ಕಾಗಿ ತಾಲೀಮು ನಡೆಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಆದರೆ ಇಡೀ ತಂಡದ ಆತ್ಮವಿಶ್ವಾಸ ಒಂದಿಷ್ಟೂ  ಕಡಿಮೆಯಾಗಿಲ್ಲ. 

ಇನ್ನು ಕೆಲವು ವಾರಗಳ ನಂತರವಾದರೂ ಒಂದೊಂದಾಗಿ ರೇಸ್‌ಗಳು ಆರಂಭವಾಗಬಹುದು. ಆಗ ಮತ್ತೆ ‘ಟ್ರ್ಯಾಕ್‌’ಗೆ ಮರಳುತ್ತೇವೆ ಎಂಬ ಭರವಸೆ ಯಲ್ಲಿದ್ದಾರೆ. ಲಾಕ್‌ಡೌನ್‌ನಿಂದಾಗಿ ರೇಸಿಂಗ್ ಪಟುಗಳು ತಮ್ಮ ಮನೆಗಳಲ್ಲಿಯೇ ಬಂಧಿಯಾಗಿದ್ದರೂ, ಮಾನಸಿಕ ಸಾಮರ್ಥ್ಯವನ್ನು ಗಟ್ಟಿಯಾಗಿಟ್ಟುಕೊಂಡಿದ್ದಾರೆ. ಅಲ್ಲದೇ ಯೋಗ, ವ್ಯಾಯಾಮಗಳ ಮೂಲಕ ಫಿಟ್‌ನೆಸ್‌ ಕಾಯ್ದು ಕೊಂಡಿದ್ದಾರೆ.

ಮಹಿಳಾ ರೇಸಿಂಗ್‌ ರಾಜಧಾನಿ

ದಕ್ಷಿಣ ಭಾರತದಲ್ಲಿ  ಬೆಂಗಳೂರು ನಗರವು ರೇಸಿಂಗ್‌ ತರಬೇತಿ ಮತ್ತು ಚಟುವಟಿಕೆಗಳಿಗೆ ದೊಡ್ಡ ತಾಣವಾಗಿದೆ. 38 ವರ್ಷಗಳಿಂದ ಇಲ್ಲಿ ಟಿವಿಎಸ್‌ ರೇಸಿಂಗ್ ಶಾಲೆಯು ಕಾರ್ಯನಿರ್ವಹಿಸುತ್ತಿದೆ. ಡಕಾರ್ ಸೇರಿದಂತೆ ಹಲವು ಪ್ರತಿಷ್ಠಿತ ರೇಸ್‌ಗಳಲ್ಲಿ ಇಲ್ಲಿಯ ಸ್ಪರ್ಧಿಗಳು ತಮ್ಮ ಛಾಪು ಮೂಡಿಸಿದ್ದಾರೆ. ಮಹಿಳೆಯರ ಸಾಧನೆಯೂ ಕಡಿಮೆ ಏನಿಲ್ಲ.

‘ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಯುವತಿಯರು ಇದ್ದಾರೆ. ಸಾಮಾಜಿಕವಾಗಿ ಹಲವು ಅಡೆತಡೆಗಳ ನಡುವೆಯೂ ಅವರು ತಮ್ಮ ಕುಟುಂಬದ ಮನವೊಲಿಸಿ ಸಾಧನೆ  ಮಾಡುತ್ತಿದ್ದಾರೆ. ಕೆಲವು ಸ್ಪರ್ಧಿಗಳು ಮಾಡುವ ಸಾಧನೆಯು ಕಿರಿಯರಿಗೆ ಪ್ರೇರಣೆಯಾಗುತ್ತಿದೆ. ಪಾಲಕರೂ ತಮ್ಮ ಮಕ್ಕಳನ್ನು ಈ ಕ್ರೀಡೆಗೆ ಕಳಿಸಲು ಧೈರ್ಯ ತೋರಿಸುತ್ತಿದ್ದಾರೆ. ಐಶ್ವರ್ಯಾ ಪಿಸೆ ರಾಷ್ಟ್ರೀಯ ರೋಡ್ ರೇಸಿಂಗ್ ಮತ್ತು ರ‍್ಯಾಲಿ ಚಾಂಪಿಯನ್‌ಷಿಪ್‌ಗಳಲ್ಲಿ ಐದು ಸಲ ಚಾಂಪಿಯನ್ ಆಗಿದ್ದಾರೆ. 2019ರಲ್ಲಿ ಎಫ್‌ಐಎಂ ವಿಶ್ವ ಬಾಜಾ ಚಾಂಪಿಯನ್‌ಷಿಪ್‌ ಗೆದ್ದ ಭಾರತದ ಪ್ರಥಮ ಸ್ಪರ್ಧಿ ಅವರು, ಬೆಂಗಳೂರು ಮತ್ತು ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟ ಸಾಧನೆ ಅವರದ್ದು’ ಎಂದು ಟಿವಿಎಸ್ ರೇಸಿಂಗ್ ಕ್ಲಬ್‌ ಕೋಚ್ ಬಿ. ಸೆಲ್ವರಾಜ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.


ಟಿವಿಎಸ್ ಮಹಿಳಾ ರೇಸಿಂಗ್ ತಂಡ

ಕೆಲವು ವರ್ಷಗಳ ಹಿಂದೆ ಮಹಿಳೆಯರಿಗಾಗಿ ಒನ್‌ ಮೇಕ್ ಚಾಂಪಿಯನ್‌ಷಿಪ್‌  ಆರಂಭವಾಗಿದ್ದು ಸ್ಪರ್ಧಿಗಳ ಒಲವು ಹೆಚ್ಚಲು ಕಾರಣವಾಯಿತು.  ಆಯ್ಕೆ ಪ್ರಕ್ರಿಯೆಯಲ್ಲಿಯೇ 150ಕ್ಕೂಹೆಚ್ಚು ಯುವತಿ ಯರು ಭಾಗವಹಿಸಿದ್ದರು. ಮುಂಬರುವ  ಸ್ಪರ್ಧೆಗೆ ಈಗಾಗಲೇ 50ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 

‘ಟಿವಿಎಸ್ ಟ್ರೇನಿಂಗ್ ಸ್ಕೂಲ್‌ನಲ್ಲಿ ಆಫ್‌ರೋಡ್ ಟ್ರ್ಯಾಕ್ ಸೌಲಭ್ಯಗಳಿವೆ. ಅನುಭವಿ ಕೋಚ್‌ಗಳಿಂದ ತರಬೇತಿ ಪಡೆಯುತ್ತಿದ್ದೇವೆ. ಉತ್ತಮ ವಾತಾವರಣ ಇದೆ. ನಾನು ಮನೆಯಲ್ಲಿದ್ದ ಬೈಕ್‌ ಓಡಿಸುವಾಗ ರೇಸ್‌ ಆಸಕ್ತಿ ಮೂಡಿತು. ಅದಕ್ಕಾಗಿ ಇಲ್ಲಿಗೆ ಬಂದೆ. ಇದೀಗ ದೊಡ್ಡ ರೇಂಜ್‌ನ ಬೈಕ್‌ಗಳನ್ನು  ಓಡಿಸಲು ಸಾಧ್ಯವಾಗುತ್ತಿದೆ. ಕುಟುಂಬದ ಬೆಂಬಲವೂ ಇದೆ’ ಎಂದು ಸ್ಪರ್ಧಿ ಶಿಫಾ ಶಬ್ಬೀರ್ ಅಹಮದ್ ಹೇಳುತ್ತಾರೆ. ‌

ಕೋವಿಡ್‌–19 ನಂತರ ಆರಂಭವಾಗುವ ಕ್ರೀಡೆಗಳಲ್ಲಿ ಹಲವು ಬದಲಾವಣೆಗಳಾಗುವ ಸಂಭವ ಇದೆ. ಕ್ರಿಕೆಟ್‌ನಲ್ಲಿ ಎಂಜಲು ಬಳಕೆಯ ನಿಷೇಧದ ಬಗ್ಗೆ, ಫುಟ್‌ಬಾಲ್, ಹಾಕಿ, ಕುಸ್ತಿ ಮತ್ತಿತರ ಕ್ರೀಡೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ. 

ಆದರೆ, ರೇಸಿಂಗ್‌ನಲ್ಲಿ ಅಂತಹ ದೊಡ್ಡ ಸಮಸ್ಯೆಗಳು ಇಲ್ಲ. ಆದ್ದರಿಂದ ಕೊರೊನಾ ಮುಗಿಯುವುದನ್ನು ಕಾಯುತ್ತಿರುವ  ರೇಸಿಂಗ್ ಸಂಸ್ಥೆಗಳು ಮತ್ತೆ ವೈಭವದ ಹಾದಿಗೆ ಮರಳುವ ನಿರೀಕ್ಷೆಯಲ್ಲಿವೆ. ಬೆಂಗಳೂರಿನ ರೇಸಿಂಗ್ ವನಿತೆಯರೂ ತಮ್ಮ ಸಾಮರ್ಥ್ಯ ಮೆರೆಯುವ ಕನಸು ಕಾಣುತ್ತಿದ್ದಾರೆ. 

***

ಗ್ರಾಮಾಂತರ ಭಾಗಗಳಿಂದಲೂ ಮಹಿಳೆಯರು ರೇಸಿಂಗ್‌ಗೆ ಬರುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಈ ಕ್ರೀಡೆಗೆ ಬೆಂಗಳೂರು ಉತ್ತಮ ತಾಣವಾಗಿದೆ

- ಸೆಲ್ವರಾಜ್, ಟಿವಿಎಸ್ ಕ್ಲಬ್ ಕೋಚ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು