ಶನಿವಾರ, ಸೆಪ್ಟೆಂಬರ್ 18, 2021
28 °C

ನೀವೆಲ್ಲ ಮಾದರಿ ಆಗಿದ್ದೀರಿ: ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳಿಗೆ ಪ್ರಧಾನಿ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ನೀವೆಲ್ಲರೂ ಜಯಶಾಲಿಗಳು ಮತ್ತು ಮಾದರಿಯಾಗಿದ್ದೀರಿ’ ಎಂದು ಪ‍್ರಧಾನಿ ನರೇಂದ್ರ ಮೋದಿ ಅವರು ಪ್ಯಾರಾ ಅಥ್ಲೀಟ್‌ಗಳನ್ನು ಶ್ಲಾಘಿಸಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ತೆರಳುತ್ತಿರುವ 10 ಮಂದಿ ಅಥ್ಲೀಟ್‌ಗಳು, ಅವರ ಕುಟುಂಬದ ಸದಸ್ಯರು ಹಾಗೂ ಕೋಚ್‌ಗಳೊಂದಿಗೆ ಮಂಗಳವಾರ ಅವರು ವರ್ಚುವಲ್‌ ಸಂವಾದ ನಡೆಸಿದರು.

ಆಗಸ್ಟ್ 24ರಿಂದ ಸೆಪ್ಟೆಂಬರ್‌ ಐದರವರೆಗೆ ಪ್ಯಾರಾಲಿಂಪಿಕ್ಸ್ ನಡೆಯಲಿದೆ. ಆಗಸ್ಟ್ 27ರಂದು ಆರ್ಚರಿ ಸ್ಪರ್ಧೆಗಳೊಂದಿಗೆ ಭಾರತದ ಅಭಿಯಾನ ಆರಂಭವಾಗಲಿದೆ.

‘ಜೀವನದ ಕಷ್ಟದ ಪರಿಸ್ಥಿತಿಗಳ ನಡುವೆಯೂ ಹೋರಾಟದ ಮನೋಭಾವ ಉಳಿಸಿಕೊಂಡಿದ್ದೀರಿ. ನಿಮ್ಮ ಪರಿಶ್ರಮ ಮತ್ತು ಶಕ್ತಿಯ ಕಾರಣದಿಂದ ಈ ಹಂತ ತಲುಪಿದ್ದೀರಿ. ಬಹುದೊಡ್ಡ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿದ್ದೀರಿ. ನೀವೆಲ್ಲರೂ ಜಯಶಾಲಿಗಳು. ಒತ್ತಡಕ್ಕೆ ಒಳಗಾಗಬೇಡಿ. ನಿಮಗೆ ಸಾಧ್ಯವಾದಷ್ಟು ಉತ್ತಮ ಸಾಮರ್ಥ್ಯ ತೋರುತ್ತೀರಿ ಎಂಬ ವಿಶ್ವಾಸವಿದ್ದು, ಪದಕಗಳು ಒಲಿಯಲಿವೆ’ ಎಂದು ಮೋದಿ ನುಡಿದರು.

  ಜಾವೆಲಿನ್‌ ಥ್ರೊ ಸ್ಪರ್ಧೆಯ ಎಫ್‌–46 ವಿಭಾಗದಲ್ಲಿ  ದೇವೇಂದ್ರ ಜಜಾರಿಯಾ ಅವರು ಮೂರನೇ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದಾರೆ. 2004 ಮತ್ತು 2016ರಲ್ಲಿ ಅವರಿಗೆ ಪದಕಗಳು ಒಲಿದಿದ್ದವು. ಹೈಜಂಪ್‌ನ ಟಿ–63 ವಿಭಾಗದಲ್ಲಿ ಮರಿಯಪ್ಪನ್‌ ತಂಗವೇಲು ಮತ್ತು ವಿಶ್ವ ಚಾಂಪಿಯನ್‌ ಜಾವೆಲಿನ್‌ ಥ್ರೊ ಪಟು ಸಂದೀಪ್ ಚೌಧರಿ (ಎಫ್‌–64 ವಿಭಾಗ) ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಒಂಬತ್ತು ಕ್ರೀಡೆಗಳಲ್ಲಿ ಭಾರತದ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ.

ದೇಶದಲ್ಲಿ ಕ್ರೀಡೆಯ ಒಟ್ಟಾರೆ ಬೆಳವಣಿಗೆಯ ಕುರಿತು ಮೋದಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳನ್ನು ಗುರುತಿಸಲು ಸದ್ಯ ಇರುವ 360 ಖೇಲೊ ಇಂಡಿಯಾ ಕೇಂದ್ರಗಳನ್ನು ಒಂದು ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದರು.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ದೇವೇಂದ್ರ ಜಜಾರಿಯಾ ಮತ್ತು ಮರಿಯಪ್ಪನ್ ತಂಗವೇಲು ಸಂವಾದದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು