ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಮುಖ್ಯ ಸುತ್ತಿಗೆ ಅಂಕಿತಾ ರೈನಾ

ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಆಡಲಿರುವ ಭಾರತದ ಐದನೇ ಆಟಗಾರ್ತಿ
Last Updated 7 ಫೆಬ್ರುವರಿ 2021, 12:44 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಅಂಕಿತಾ ರೈನಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಕಣಕ್ಕಿಳಿಯಲಿರುವ ಭಾರತದ ಐದನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಈ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಾಗಿರುವ ಆಸ್ಟ್ರೇಲಿಯಾ ಓಪನ್‌ ಸೋಮವಾರ ಆರಂಭವಾಗಲಿದೆ.

ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಅಂಕಿತಾ, ‘ಲಕ್ಕಿ ಲೂಸರ್‌‘ ಆಗಿ ಅರ್ಹತೆ ಗಳಿಸುವ ಅವಕಾಶ ಹೊಂದಿದ್ದರು. ಆದರೆ ರುಮೇನಿಯಾದ ಮಿಹಾಲಾ ಬುಜರ್ನೆಕು ಅವರೊಂದಿಗೆ ಡಬಲ್ಸ್ ವಿಭಾಗದಲ್ಲಿ ಆಡಲು ಒಪ್ಪಂದ ಮಾಡಿಕೊಂಡ ಬಳಿಕ ಅವರ ದೀರ್ಘಕಾಲದ ಕನಸು ನನಸಾಯಿತು. ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿದರು.

ಅಂಕಿತಾ ಅವರಿಗಿಂತ ಮೊದಲು ನಿರುಪಮಾ ಮಂಕಡ್‌ (1971), ನಿರುಪಮಾ ವೈದ್ಯನಾಥನ್‌ (1998), ಸಾನಿಯಾ ಮಿರ್ಜಾ ಹಾಗೂ ಭಾರತೀಯ ಅಮೆರಿಕನ್‌ ಆಟಗಾರ್ತಿ ಶಿಖಾ ಓಬೆರಾಯ್‌ (2004) ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದರು.

ಆರು ಬಾರಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಸಾನಿಯಾ ಅವರ ಬಳಿಕ, ಗ್ರ್ಯಾನ್‌ಸ್ಲಾಮ್ ಮಹಿಳಾ ಡಬಲ್ಸ್ ವಿಭಾಗದಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ ಭಾರತದ ಎರಡನೇ ಆಟಗಾರ್ತಿ ಅಂಕಿತಾ.

1998ರಲ್ಲಿ ನಿರುಪಮಾ ಅವರು ಆಸ್ಟ್ರೇಲಿಯಾ ಓಪನ್‌ ಸಿಂಗಲ್ಸ್ ವಿಭಾಗದಲ್ಲಿ ಮುಖ್ಯ ಸುತ್ತಿನಲ್ಲಿ ಆಡಿದ್ದರು. 1971ರ ವಿಂಬಲ್ಡನ್‌ ಟೂರ್ನಿಯಮಿಶ್ರ ಡಬಲ್ಸ್‌ನಲ್ಲಿ ನಿರುಪಮಾ ಮಂಕಡ್ ಅವರು ಆನಂದ್ ಅಮೃತರಾಜ್ ಜೊತೆಯಾಗಿ ಕಣಕ್ಕಿಳಿದಿದ್ದರು.

‘ಸಿಂಗಲ್ಸ್ ಅಥವಾ ಡಬಲ್ಸ್ ಯಾವುದೇ ಆಗಲಿ ಗ್ರ್ಯಾನ್‌ಸ್ಲಾಮ್ ಮುಖ್ಯ ಸುತ್ತು ಪ್ರವೇಶಿಸಿದ್ದು ಒಂದು ವಿಶೇಷ ಗಳಿಗೆ. ಹಲವು ವರ್ಷಗಳ ಪರಿಶ್ರಮದ ಫಲವಿದು. ಈ ಸಾಧನೆಯ ಹಿಂದೆ ಅನೇಕ ಜನರ ಆಶೀರ್ವಾದ ಮತ್ತು ಬೆಂಬಲವಿದೆ. ಅದನ್ನು ನಾನು ಮರೆಯುವುದಿಲ್ಲ‘ ಎಂದು ಅಂಕಿತಾ ಹೇಳಿದ್ದಾರೆ.

ಟೂರ್ನಿಯ ಮೊದಲ ಸುತ್ತಿನಲ್ಲಿ ಅಂಕಿತಾ–ಮಿಹಾಲಾ ಜೋಡಿಯು ಆಸ್ಟ್ರೇಲಿಯಾದ ಒಲಿವಿಯಾ ಗೆಡೆಕಿ–ಬೆಲಿಂಡಾ ವೂಲ್‌ಕಾಕ್‌ ಅವರನ್ನು ಎದುರಿಸಲಿದ್ದಾರೆ.

ಅಂಕಿತಾ ಸೇರಿ ಭಾರತದ ಒಟ್ಟು ನಾಲ್ಕು ಮಂದಿ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸುಮಿತ್ ನಗಾಲ್‌ ಮತ್ತು ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ದಿವಿಜ್ ಶರಣ್‌ ಅದೃಷ್ಟ ಪರೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT