ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ| ಫೈನಲ್‌ಗೆ ಬೋಪಣ್ಣ– ಸಾನಿಯಾ

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ l ನಾಲ್ಕರಘಟ್ಟಕ್ಕೆ ನೊವಾಕ್‌ ಜೊಕೊವಿಚ್‌, ಟಾಮಿ ಪಾಲ್‌
Last Updated 25 ಜನವರಿ 2023, 18:56 IST
ಅಕ್ಷರ ಗಾತ್ರ

ಮೆಲ್ಬರ್ನ್‌ : ಕೊನೆಯ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಟ್ರೋಫಿ ಎತ್ತಿಹಿಡಿದು, ಸ್ಮರಣೀಯ ಸಾಧನೆ ಮಾಡುವ ಅವಕಾಶ ಸಾನಿಯಾ ಮಿರ್ಜಾ ಅವರಿಗೆ ಲಭಿಸಿದೆ.

ರೋಹನ್‌ ಬೋಪಣ್ಣ ಜೊತೆಗೂಡಿ ಆಡುತ್ತಿರುವ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿದ್ದಾರೆ. ವೃತ್ತಿಜೀವನದ ಏಳನೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿಯ ಮೇಲೆ ಕಣ್ಣಿಟ್ಟು ಅವರು ಫೈನಲ್‌ ಆಡಲಿದ್ಧಾರೆ.

ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ 7–6, 6–7, 10–6 ರಲ್ಲಿ ಅಮೆರಿಕದ ಡೆಸಿರೆ ಕ್ರಾಚಿಕ್‌ ಮತ್ತು ಬ್ರಿಟನ್‌ನ ನೀಲ್‌ ಸ್ಕಪ್ಸ್ಕಿ ವಿರುದ್ಧ ಗೆದ್ದಿತು. ಜಿದ್ದಾಜಿದ್ದಿನ ಸೆಣಸಾಟ ಒಂದು ಗಂಟೆ 52 ನಿಮಿಷ
ನಡೆಯಿತು.

ಇಲ್ಲಿ ಶ್ರೇಯಾಂಕರಹಿತ ಜೋಡಿಯಾಗಿ ಆಡುತ್ತಿರುವ ಸಾನಿಯಾ– ಬೋಪಣ್ಣ ಮೊದಲ ಸೆಟ್‌ ಟೈಬ್ರೇಕರ್‌ನಲ್ಲಿ ಗೆದ್ದರು. ಆದರೆ ಅಮೆರಿಕ–ಬ್ರಿಟನ್‌ ಜೋಡಿ ಎರಡನೇ ಸೆಟ್‌ನಲ್ಲಿ ಗೆದ್ದು ಸಮಬಲ ಸಾಧಿಸಿತು. ಸೂಪರ್‌ ಟ್ರೈಬ್ರೇಕರ್‌ನಲ್ಲಿ ಭಾರತದ ಜೋಡಿ ಪಂದ್ಯ ತನ್ನದಾಗಿಸಿಕೊಂಡಿತು.

‘ಇದು ನನ್ನ ಕೊನೆಯ ಗ್ರ್ಯಾನ್‌ಸ್ಲಾಮ್‌ ಟೂರ್ನಿ. ರೋಹನ್‌ ಜತೆ ಆಡುವುದು ವಿಶೇಷ ಅನುಭವ ನೀಡುತ್ತದೆ. 14ನೇ ವಯಸ್ಸಿನಲ್ಲಿ ನನ್ನ ಮೊದಲ ಮಿಶ್ರ ಡಬಲ್ಸ್‌ ಪಂದ್ಯವನ್ನು ಅವರ ಜತೆ ಆಡಿದ್ದೆ. ಇದೀಗ ನನಗೆ 36 ಮತ್ತು ಅವರಿಗೆ 42 ವಯಸ್ಸು. ನಾವಿಬ್ಬರು ಈಗಲೂ ಆಡುತ್ತಿದ್ದೇವೆ’ ಎಂದು ಪಂದ್ಯದ ಬಳಿಕ ಸಾನಿಯಾ ಪ್ರತಿಕ್ರಿಯಿಸಿದ್ದಾರೆ.

ಸಾನಿಯಾ ಗೆದ್ದಿರುವ ಆರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಮೂರು ಮಿಶ್ರ ಡಬಲ್ಸ್‌ನಲ್ಲಿ ಬಂದಿವೆ. ಅವರು ಮಹೇಶ್‌ ಭೂಪತಿ (2009ರ ಆಸ್ಟ್ರೇಲಿಯಾ ಓಪನ್, 2012ರ ಫ್ರೆಂಚ್‌ ಓಪನ್‌) ಮತ್ತು ಬ್ರೆಜಿಲ್‌ನ ಬ್ರೂನೊ ಸೊರೇಸ್‌ (2014ರ ಅಮೆರಿಕ ಓಪನ್‌) ಜೊತೆ ಚಾಂಪಿಯನ್‌ ಆಗಿದ್ದರು.

ಮಹಿಳೆಯರ ಡಬಲ್ಸ್‌ನಲ್ಲಿ ಮೂರೂ ಪ್ರಶಸ್ತಿಗಳನ್ನು (2015ರ ವಿಂಬಲ್ಡನ್‌ ಮತ್ತು ಅಮೆರಿಕ ಓಪನ್‌, 2016ರ ಆಸ್ಟ್ರೇಲಿಯಾ ಓಪನ್‌) ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಜಯಿಸಿದ್ದಾರೆ.

ಮುಂದಿನ ತಿಂಗಳು ನಡೆಯುವ ದುಬೈ ಓಪನ್‌ ಟೆನಿಸ್‌ ಟೂರ್ನಿಯ ಬಳಿಕ ನಿವೃತ್ತಿಯಾಗುವುದಾಗಿ ಸಾನಿಯಾ ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಸೆಮಿಗೆ ಜೊಕೊವಿಚ್‌: ಅಮೋಘ ಪ್ರದರ್ಶನ ಮುಂದುವರಿಸಿದ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು.

ರಾಡ್‌ ಲೇವರ್‌ ಅರೆನಾದಲ್ಲಿ ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು 6–1, 6–2, 6–4 ರಲ್ಲಿ ಐದನೇ ಶ್ರೇಯಾಂಕದ ಆಟಗಾರ ರಷ್ಯಾದ ಆಂಡ್ರೆ ರುಬ್ಲೆವ್ ವಿರುದ್ಧ ಗೆದ್ದರು.

ಇಲ್ಲಿ ದಾಖಲೆಯ 10ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್‌ ಸೆಮಿಫೈನಲ್‌ನಲ್ಲಿ ಅಮೆರಿಕದ ಟಾಮಿ ಪಾಲ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ಟಾಮಿ ಪಾಲ್ ಅವರು 7-6 (8/6), 6-3, 5-7, 6-4 ರಲ್ಲಿ ಅಮೆರಿಕದವರೇ ಆದ ಬೆಲ್‌ ಶೆಲ್ಟನ್‌ ವಿರುದ್ಧ ಗೆದ್ದರು. 14 ವರ್ಷಗಳ ಬಿಡುವಿನ ಬಳಿಕ ಇಲ್ಲಿ ಸೆಮಿ ಪ್ರವೇಶಿಸಿದ ಅಮೆರಿಕದ ಮೊದಲ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು. ಆ್ಯಂಡಿ ರಾಡಿಕ್‌ ಅವರು 2009 ರಲ್ಲಿ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಕೊನೆಯದಾಗಿ ನಾಲ್ಕರಘಟ್ಟ
ಪ್ರವೇಶಿಸಿದ್ದರು.

ಪೋಲೆಂಡ್‌ನ ಮಗ್ಡಾ ಲಿನೆಟ್‌ ಮತ್ತು ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಮಹಿಳೆಯರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಗ್ಡಾ 6–3, 7–5 ರಲ್ಲಿ ಜೆಕ್‌ ಗಣರಾಜ್ಯದ ಕರೊಲಿನಾ ಪಿಸ್ಕೊವಾ ವಿರುದ್ಧ ಗೆದ್ದರೆ, ಸಬಲೆಂಕಾ 6–3, 6–2 ರಲ್ಲಿ ಕ್ರೊವೇಷ್ಯಾದ ಡೋನಾ ವೆಕಿಚ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT