ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್‌ ಟೆನಿಸ್: ಸುಮಿತ್‌ ನಗಾಲ್‌ ಶುಭಾರಂಭ

Last Updated 21 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ಜಿದ್ದಾಜಿದ್ದಿನ ಪಂದ್ಯದಲ್ಲಿ ಗೆಲುವು ಪಡೆದ ಭಾರತದ ಸುಮಿತ್‌ ನಗಾಲ್‌ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ನಗಾಲ್‌ 7–6, 5–7, 6–4 ರಲ್ಲಿ ವಿಯೆಟ್ನಾಂನ ನಾಮ್‌ ಹಾಂಗ್‌ ಲಿ ಅವರನ್ನು ಮಣಿಸಿದರು. ಪ್ರೇಕ್ಷಕರನ್ನು ರಂಜಿಸಿದ ಈ ಪಂದ್ಯ ಮೂರು ಗಂಟೆ 19 ನಿಮಿಷ ನಡೆಯಿತು.

ಮೊದಲ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಗೆದ್ದುಕೊಂಡ ನಗಾಲ್‌, ಎರಡನೇ ಸೆಟ್‌ಅನ್ನು ಕಳೆದುಕೊಂಡರು. ಮೂರನೇ ಸೆಟ್‌ನಲ್ಲಿ ಇಬ್ಬರೂ ಎದುರಾಳಿಗಳ ಸರ್ವ್‌ ಬ್ರೇಕ್‌ ಮಾಡುವಲ್ಲಿ ಪೈಪೋಟಿಗೆ ಇಳಿದರು. ಕೊನೆಗೂ ನಗಾಲ್‌ ಗೆಲುವಿನ ನಗು ಬೀರಿದರು. ಭಾರತದ ಆಟಗಾರ ಕಳೆದ ವಾರ ನಡೆದಿದ್ದ ಚೆನ್ನೈ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ಪ್ರಜ್ವಲ್‌, ಪ್ರಜ್ಞೇಶ್‌ಗೆ ನಿರಾಸೆ: ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಮತ್ತು ಎಸ್‌.ಡಿ.ಪ್ರಜ್ವಲ್‌ ದೇವ್‌ ಅವರು ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಸರ್ಬಿಯದ ಹಮದ್‌ ಮೆಜೆಡೊವಿಚ್‌ 6–3, 6–4 ರಲ್ಲಿ ಪ್ರಜ್ಞೇಶ್‌ ವಿರುದ್ಧ ಗೆದ್ದರೆ, ಚೀನಾ ತೈಪೆಯ ಜೇಸನ್‌ ಜಂಗ್‌ 6–2, 6–2 ರಲ್ಲಿ ಕರ್ನಾಟಕದ ಎಸ್‌.ಡಿ.ಪ್ರಜ್ವಲ್‌ ದೇವ್‌ ಅವರನ್ನು ಮಣಿಸಿದರು.

ಪ್ರಜ್ಞೇಶ್‌ ಎರಡನೇ ಸೆಟ್‌ನಲ್ಲಿ ಮರುಹೋರಾಟ ನಡೆಸಲು ಪ್ರಯತ್ನಿಸಿದರೂ ಎದುರಾಳಿ ಅದಕ್ಕೆ ಅವಕಾಶ ನೀಡಲಿಲ್ಲ. ನಿರ್ಣಾಯಕ ಘಟ್ಟದಲ್ಲಿ ಎರಡು ಸಲ ಡಬಲ್‌ಫಾಲ್ಟ್ಸ್‌ ಮಾಡಿದ್ದು ಮುಳುವಾಗಿ ಪರಿಣಮಿಸಿದವು.

ಇನ್ನೊಂದು ಪಂದ್ಯದಲ್ಲಿ ಮೊದಲ ಸೆಟ್‌ಅನ್ನು ಸುಲಭವಾಗಿ ಎದುರಾಳಿಗೆ ಒಪ್ಪಿಸಿದ ಪ್ರಜ್ವಲ್‌, ಎರಡನೇ ಸೆಟ್‌ನ ಆರಂಭದಲ್ಲಿ ಜೇಸನ್‌ಗೆ ಅಲ್ಪ ಪೈಪೋಟಿ ಒಡ್ಡಿದರು. ಚೀನಾ ತೈಪೆಯ ಆಟಗಾರ ಮೊದಲ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದರೂ, ಪ್ರಜ್ವಲ್ ಕೂಡಾ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡುವಲ್ಲಿ ಯಶಸ್ವಿಯಾದರು. ಆ ಬಳಿಕ ತಮ್ಮ ಸರ್ವ್‌ನಲ್ಲಿ ಪಾಯಿಂಟ್ಸ್‌ ಗಿಟ್ಟಿಸಿ 2–1 ರಲ್ಲಿ ಮುನ್ನಡೆ ಪಡೆದರು.

ಈ ಹಂತದಲ್ಲಿ ಲಯ ಕಂಡುಕೊಂಡ ಜಂಗ್‌ ತಮ್ಮ ಸರ್ವ್‌ನಲ್ಲಿ ಪಾಯಿಂಟ್ಸ್‌ ಗಳಿಸಿ 2–2 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕ ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಪಂದ್ಯ ತಮ್ಮದಾಗಿಸಿಕೊಂಡರು.

ಎರಡನೇ ಶ್ರೇಯಾಂಕದ ಆಟಗಾರ ಆಸ್ಟ್ರೇಲಿಯಾದ ಜೇಮ್ಸ್‌ ಡಕ್ವರ್ಥ್‌ 7–6, 6–1 ರಲ್ಲಿ ಜಪಾನ್‌ನ ರಿಯೊ ನೊಗುಚಿ ವಿರುದ್ಧ ಗೆದ್ದರೆ, ಬ್ರಿಟನ್‌ನ ರ್‍ಯಾನ್‌ ಪೆನೈಸ್ಟನ್‌ 6–4, 6–2 ರಲ್ಲಿ ಸರ್ಬಿಯದ ನಿನೊ ಸೆರ್ದರುಸಿಚ್‌ ಅವರನ್ನು ಮಣಿಸಿದರು. ಎಂಟನೇ ಶ್ರೇಯಾಂಕದ ಆಟಗಾರ ಬಲ್ಗೇರಿಯದ ದಿಮಿತ್ರಿ ಕುಜ್ಮನೊವ್‌ 6–4, 6–1 ರಲ್ಲಿ ಸರ್ಬಿಯದ ನಿಕೊಲ ಮಿಲೆಜೊವಿಚ್‌ ವಿರುದ್ಧ; ಆಸ್ಟ್ರೇಲಿಯಾದ ಜೇಮ್ಸ್‌ ಮೆಕೇಬ್‌ 6–2, 7–6 ರಲ್ಲಿ ಇಟಲಿಯ ಲೊರೆಂಜೊ ಗಸ್ಟಿನೊ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT