ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌–ಬೂಸ್ಟಾ ಮತ್ತೊಮ್ಮೆ ಮುಖಾಮುಖಿ

ಸೋಫಿಯಾ ಕೆನಿನ್‌ ಜಯಭೇರಿ
Last Updated 7 ಅಕ್ಟೋಬರ್ 2020, 2:59 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಹಾಗೂ 17ನೇ ಶ್ರೇಯಾಂಕದ ಪ್ಯಾಬ್ಲೊ ಕರೆನೊ ಬೂಸ್ಟಾ ಅವರ ಹಣಾಹಣಿಗೆ ಮತ್ತೊಮ್ಮೆ ವೇದಿಕೆ ಸಿದ್ಧಗೊಂಡಿದೆ. ಫ್ರೆಂಚ್‌ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಇವರಿಬ್ಬರು ಸೆಣಸಲಿದ್ದಾರೆ.

ಹೋದ ತಿಂಗಳು ಅಮೆರಿಕ ಓಪನ್‌ ಟೂರ್ನಿಯ ನಾಲ್ಕನೇ ಸುತ್ತಿನಪಂದ್ಯದಲ್ಲಿ ಇವರಿಬ್ಬರು ಮುಖಾಮುಖಿಯಾಗಿದ್ದರು. ಪಂದ್ಯದ ವೇಳೆ ಜೊಕೊವಿಚ್‌ ಉದ್ವೇಗಕ್ಕೊಳಗಾಗಿ ಲೈನ್‌ ಅಂಪೈರ್‌ಗೆ ಆಕಸ್ಮಿಕವಾಗಿ ಚೆಂಡು ಹೊಡೆದು ಟೂರ್ನಿಯಿಂದಲೇ ಅನರ್ಹಗೊಂಡಿದ್ದರು. ಸ್ಪೇನ್‌ನ ಬೂಸ್ಟಾ ಕ್ವಾರ್ಟರ್‌ಫೈನಲ್‌ ತಲುಪಿದ್ದರು.

ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಸೋಮವಾರ ತಡರಾತ್ರಿ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಸರ್ಬಿಯದ ಜೊಕೊವಿಚ್‌ 6–4, 6–3, 6–3ರಿಂದ ರಷ್ಯಾದ ಕರೆನ್‌ ಕಚನೊವ್‌ ಅವರನ್ನು ಮಣಿಸಿದರು. ಈ ಮೂಲಕ ಟೂರ್ನಿಯಲ್ಲಿ ಸತತ 11ನೇ ಬಾರಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ ಸಾಧನೆ ಮಾಡಿದರು.

ಜೊಕೊವಿಚ್‌ ಈ ಟೂರ್ನಿಯಲ್ಲಿ ಇದುವರೆಗೆ ಒಂದು ಸೆಟ್‌ ಕೂಡ ಸೋತಿಲ್ಲ. ನಾಲ್ಕು ಸುತ್ತುಗಳಲ್ಲಿ ಕೇವಲ 25 ಗೇಮ್‌ಗಳನ್ನು ಕಳೆದುಕೊಂಡಿದ್ದಾರೆ.

ನಾಲ್ಕನೇ ಸುತ್ತಿನಮತ್ತೊಂದು ಪಂದ್ಯದಲ್ಲಿ ಕರೆನೊ ಬೂಸ್ಟಾ 6–2, 7–5, 6–2ರಿಂದ ಡೇನಿಯಲ್‌ ಆಲ್ಟ್‌ಮೈರ್‌ ಅವರನ್ನು ಮಣಿಸಿದರು. ಬೂಸ್ಟಾ ಎರಡನೇ ಬಾರಿ ಫ್ರೆಂಚ್‌ ಓಪನ್‌ ಟೂರ್ನಿಯ ಎಂಟರಘಟ್ಟ ತಲುಪಿದ್ದಾರೆ. 2017ರಲ್ಲಿ ಅವರು ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟಿದ್ದರು.

ಫಿಲಿಪ್‌ ಚಾಟ್ರಿಯರ್‌ ಅಂಗಣದಲ್ಲಿ ನಡೆದ ಪಂದ್ಯದಲ್ಲಿ, ಅರ್ಹತಾ ಸುತ್ತು ಗೆದ್ದು ಬಂದಿದ್ದ ಜರ್ಮನಿಯ ಆಟಗಾರನ ಎದುರು ಬೂಸ್ಟಾ ಪಾರಮ್ಯ ಮೆರೆದರು.

ಪಂದ್ಯದ ಎರಡನೇ ಸೆಟ್‌ ಮುಗಿದ ಬಳಿಕ ಬೂಸ್ಟಾ ವೈದ್ಯರನ್ನು ಸಂಪರ್ಕಿಸಿದರು. ಆದರೆ ಕಾರಣವೇನೆಂದು ತಿಳಿಯಲಿಲ್ಲ.

ಕೆನಿನ್‌ಗೆ ಜಯ: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಅಮೆರಿಕದ ಸೋಫಿಯಾ ಕೆನಿನ್‌ 2–6, 6–2, 6–1ರಿಂದ ಫಿಯೊನಾ ಫೆರೊ ಅವರ ಸವಾಲು ಮೀರಿ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು. ಮೊದಲ ಸೆಟ್‌ ಗೆದ್ದುಕೊಂಡಿದ್ದ 49ನೇ ರ‍್ಯಾಂಕಿನ ಫೆರೊ ಅವರಿಗೆ ಅದೇ ಲಯ ಉಳಿಸಿಕೊಳ್ಳಲು ಆಗಲಿಲ್ಲ.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಆಗಿರುವ ಕೆನಿನ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 30ನೇ ಶ್ರೇಯಾಂಕದ ಡೇನಿಯಲ್‌ ಕಾಲಿನ್ಸ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಪುರುಷರ ಸಿಂಗಲ್ಸ್ ನಾಲ್ಕನೇ ಸುತ್ತಿನಮತ್ತೊಂದು ಪಂದ್ಯದಲ್ಲಿ ಆ್ಯಂಡ್ರೆ ರುಬ್ಲೆವ್‌ ಅವರು 6–7, 7–5, 6–4, 7–5ರಿಂದ ಮಾರ್ಟನ್‌ ಫುಸ್ಕೊವಿಕ್ಸ್ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT