ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌: ಭಾರತ ತಂಡದಲ್ಲಿ ಲಿಯಾಂಡರ್‌ ಪೇಸ್‌

ಕ್ರೊವೇಷ್ಯಾ ವಿರುದ್ಧ ಡೇವಿಸ್‌ ಕಪ್‌ ಅರ್ಹತಾ ಪಂದ್ಯ
Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ : ಕ್ರೊವೇಷ್ಯಾ ತಂಡದ ವಿರುದ್ಧ ಡೇವಿಸ್‌ ಕಪ್‌ ಪಂದ್ಯಕ್ಕೆ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ಭಾರತ ತಂಡದಲ್ಲಿ ಉಳಿಸಿಕೊಳ್ಳಲು ಅಖಿಲ ಭಾರತ ಟೆನಿಸ್‌ ಸಂಸ್ಥೆಯ (ಎಐಟಿಎ) ಆಯ್ಕೆ ಸಮಿತಿ ನಿರ್ಧರಿಸಿದೆ. ದಿವಿಜ್‌ ಶರಣ್‌ ಅವರನ್ನು ಮೀಸಲು ಆಟಗಾರನಾಗಿ ಹೆಸರಿಸಿದೆ.

ಆಟಗಾರರ ಅಂತಿಮ ಪಟ್ಟಿಯನ್ನು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ಗೆ (ಐಟಿಎಫ್‌)ಎಐಟಿಎ ಮಂಗಳವಾರ ಸಲ್ಲಿಸಬೇಕಿತ್ತು. ಮಾರ್ಚ್‌ 6 ಹಾಗೂ 7ರಂದು ಕ್ರೊವೇಷ್ಯಾದ ಜಾಗ್ರೆಬ್‌ ನಗರದಲ್ಲಿ ನಡೆಯುವ ಅರ್ಹತಾ ಪಂದ್ಯಕ್ಕೆ ಈ ಮೊದಲು ಆರು ಮಂದಿಯ ತಂಡವನ್ನು ಎಐಟಿಎ ಪ್ರಕಟಿಸಿತ್ತು.

24 ತಂಡಗಳು ಆಡುವ ಕ್ವಾಲಿಫೈಯರ್ಸ್ ಟೂರ್ನಿಯಲ್ಲಿ ಕ್ರೊವೇಷ್ಯಾ ಅಗ್ರಶ್ರೇಯಾಂಕ ಹೊಂದಿದೆ. ಇದರಲ್ಲಿ ಗೆದ್ದ 12 ತಂಡಗಳು ವರ್ಷಾಂತ್ಯದಲ್ಲಿ ನಡೆಯುವ ಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ. ಸೋತ ತಂಡಗಳು ವಿಶ್ವ ಗುಂಪು 1ರಲ್ಲಿ ಉಳಿಯಲಿವೆ.

‘ಆಟಗಾರರ ಅಂತಿಮ ಪಟ್ಟಿಯನ್ನುನಾವು ಮಂಗಳವಾರ ಐಟಿಎಫ್‌ಗೆ ಕಳುಹಿಸಿದ್ದೇವೆ. ಮೀಸಲು ಆಟಗಾರನನ್ನು ನಿರ್ಧರಿಸುವ ಕುರಿತು ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ಎಲ್ಲ ಆಟಗಾರರೊಂದಿಗೆ ಚರ್ಚಿಸಿದ್ದಾರೆ. ದಿವಿಜ್‌ ಅವರಿಗೂ ಈ ಕುರಿತು ತಿಳಿಸಲಾಗಿದೆ’ ಎಂದು ಎಐಟಿಎ ಮೂಲಗಳು ಹೇಳಿವೆ.

ಸುಮಿತ್‌ ನಗಾಲ್‌, ಪ್ರಜ್ಞೇಶ್‌ ಗುಣೇಶ್ವರನ್‌ ಹಾಗೂ ರಾಮಕುಮಾರ್‌ ರಾಮನಾಥನ್‌ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದರೆ, ಪೇಸ್‌ ಹಾಗೂ ರೋಹನ್‌ ಬೋಪಣ್ಣ ಮೇಲೆ ಡಬಲ್ಸ್ ಆಡುವ ಜವಾಬ್ದಾರಿ ಇದೆ.

ಗಾಯದ ಹಿನ್ನೆಲೆಯಲ್ಲಿ ಬೋಪಣ್ಣ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಕಜಕಸ್ತಾನದ ನೂರ್‌ ಸುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಪೇಸ್‌– ಜೀವನ್‌ ನೆಡುಂಚೆರಿಯನ್‌ ಜೊತೆಯಾಗಿ ಆಡಿದ್ದರು.

ಎರಡನೇ ಮುಖಾಮುಖಿ: ಡೇವಿಸ್‌ ಕ‍ಪ್‌ನಲ್ಲಿ ಭಾರತ ಹಾಗೂ ಕ್ರೊವೇಷ್ಯಾ ಮುಖಾಮುಖಿಯಾಗುತ್ತಿರುವುದು ಎರಡನೇ ಸಲ. 1995ರಲ್ಲಿ ನವದೆಹಲಿಯಲ್ಲಿ ಎರಡೂ ತಂಡಗಳು ಆಡಿದ್ದವು. ಭಾರತ 3–2ರಿಂದ ಗೆದ್ದ ಆ ಪಂದ್ಯದಲ್ಲಿ, ಪೇಸ್‌ ಸಿಂಗಲ್ಸ್ ಹಾಗೂ ಡಬಲ್ಸ್‌ ವಿಭಾಗದಲ್ಲಿ ಜಯ ಸಾಧಿಸಿದ್ದರು. ಅಂದು ಮಹೇಶ್‌ ಭೂಪತಿ ಅವರ ಡಬಲ್ಸ್‌ ಜೊತೆಗಾರ
ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT