ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Wimbledon | 4ನೇ ಸುತ್ತಿಗೆ ಜೊಕೊವಿಚ್, ಟೆನಿಸ್ ಅಂಗಣದಲ್ಲಿ ಫುಟ್‌ಬಾಲ್ ಕ್ರೇಜ್

Published 7 ಜುಲೈ 2024, 10:39 IST
Last Updated 7 ಜುಲೈ 2024, 10:39 IST
ಅಕ್ಷರ ಗಾತ್ರ

ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆ ಮೂಲಕ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 16ನೇ ಸಲ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಸಾಧನೆ ಮಾಡಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತ ಜೊಕೊವಿಕ್ ಅವರು ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್‌ ವಿರುದ್ಧ 4-6, 6-3, 6-4, 7-6 (7/3)ರ ಅಂತರದಲ್ಲಿ ಗೆಲುವು ಸಾಧಿಸಿದರು.

ಒಟ್ಟಾರೆಯಾಗಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಜೊಕೊವಿಕ್ 65ನೇ ಸಲ ಅಂತಿಮ 16ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಹಾಗೆಯೇ ವಿಂಬಲ್ಡನ್‌ನಲ್ಲಿ 95ನೇ ಜಯ ಗಳಿಸಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ಜೊಕೊವಿಕ್ ಅವರು ಡೆನ್ಮಾರ್ಕ್‌ನ ಹೊಲ್ಗರ್ ರೂನ್ ಸವಾಲನ್ನು ಎದುರಿಸಲಿದ್ದಾರೆ.

ದಾಖಲೆಯ 24 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಚ್ ಅವರು ಕಳೆದ ತಿಂಗಳಷ್ಟೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ ದಾಖಲೆಯ ಎಂಟನೇ ವಿಂಬಲ್ಡನ್ ಕಿರೀಟ ಎದುರು ನೋಡುತ್ತಿದ್ದಾರೆ.

ಟೆನಿಸ್‌ ಅಂಗಣಕ್ಕೆ ಹಬ್ಬಿದ ಫುಟ್‌ಬಾಲ್ ಕ್ರೇಜ್...

ಫುಟ್‌ಬಾಲ್ ಕ್ರೇಜ್ ಟೆನಿಸ್‌ ಅಂಗಣಕ್ಕೂ ಹರಡಿದೆ. ವಿಂಬಲ್ಡನ್ ಅಂಗಣದಲ್ಲಿ ಪೆನಾಲ್ಟಿ ಕಿಕ್ ಅನುಕರಿಸುವ ಮೂಲಕ ಜೊಕೊವಿಕ್ ಎಲ್ಲರ ಗಮನ ಸೆಳೆದಿದ್ದಾರೆ.

ಒಂದೆಡೆ ಜರ್ಮನಿಯಲ್ಲಿ ಯುರೋ ಕಪ್ ಮತ್ತೊಂದೆಡೆ ಅಮೆರಿಕದಲ್ಲಿ ಕೊಪಾ ಅಮೆರಿಕ ಟೂರ್ನಿ ನಡೆಯುತ್ತಿದೆ. ಯುರೋ ಕಪ್‌ನಲ್ಲಿ ಸ್ವಿಜರ್ಲೆಂಡ್ ಮಣಿಸಿರುವ ಇಂಗ್ಲೆಂಡ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಪಂದ್ಯದ ಬಳಿಕ ಇಂಗ್ಲೆಂಡ್ ತಂಡವನ್ನು ಜೊಕೊವಿಚ್ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT