ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌ಗೆ ಆಘಾತ; 'ಒಲಿಂಪಿಕ್ಸ್ ಚಿನ್ನ', 'ಗೋಲ್ಡನ್ ಸ್ಲ್ಯಾಮ್' ಕನಸು ಭಗ್ನ

ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಟೆನಿಸ್ ಪುರುಷರ ವಿಭಾಗದಲ್ಲಿಚಿನ್ನ ಗೆಲ್ಲುವ ನೆಚ್ಚಿನ ತಾರೆಯರಲ್ಲಿ ಓರ್ವರೆನಿಸಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್, ಅಚ್ಚರಿಯ ಸೋಲಿಗೆ ಶರಣಾಗಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹೋರಾಟದಲ್ಲಿ ಅಗ್ರ ಶ್ರೇಯಾಂಕಿತ ಜೊಕೊವಿಚ್, ಜರ್ಮನಿಯ ಅಲೆಕ್ಸಾಂಡರ್ ಜೆರೆವ್ ವಿರುದ್ಧ 1-6, 3-6, 6-1ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಚಿನ್ನ ಪದಕದ ಜೊತೆಗೆ ಗೋಲ್ಡನ್ ಸ್ಲ್ಯಾಮ್ ಗೆಲ್ಲುವ ಅಪರೂಪದ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹಾಗಿದ್ದರೂ ಈಗಲೂ ಪದಕದ ರೇಸ್‌ನಲ್ಲಿದ್ದು, ಕಂಚಿನ ಪದಕದ ಹೋರಾಟದಲ್ಲಿ ಸ್ಪೇನ್‌ನ ಕ್ಯಾರೆನೊ ಬುಸ್ಟಾ ಸವಾಲನ್ನು ಎದುರಿಸಲಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲೂ ಜೊಕೊವಿಚ್ ಕಂಚಿನ ಪದಕದ ಸಾಧನೆ ಮಾಡಿದ್ದರು.

ಕ್ಯಾಲೆಂಡರ್ ವರ್ಷವೊಂದರಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲ್ಯಾಮ್‌ಗಳ (ಆಸ್ಟ್ರೇಲಿಯನ್ ಓಪನ್, ಅಮೆರಿಕನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್) ಜೊತೆಗೆ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಜಯಿಸಿದರೆ 'ಗೋಲ್ಡನ್ ಸ್ಲ್ಯಾಮ್' ಕೀರ್ತಿಗೆ ಅರ್ಹರಾಗುತ್ತಾರೆ.

ಈ ಪೈಕಿ ಜೊಕೊವಿಚ್ ಈಗಾಗಲೇ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಟೂರ್ನಿಯಲ್ಲಿ ಕಿರೀಟ ಗೆದ್ದಿದ್ದಾರೆ. ಮುಂಬರುವ ಅಮೆರಿಕ ಓಪನ್‌ನಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಾರೆಯೆನಿಸಿಕೊಂಡಿದ್ದಾರೆ.

ಅಂದ ಹಾಗೆ 1988ನೇ ಇಸವಿಯಲ್ಲಿ ಮಾಜಿ ಆಟಗಾರ್ತಿ ಸ್ಟೆಫಿ ಗ್ರಾಫ್, ಮಹಿಳಾ ವಿಭಾಗದಲ್ಲಿ ಈ ಮಹತ್ತರ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT