ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ಫೆಡರರ್‌

ಡ್ಯಾನಿಲ್ ಮೆಡ್ವೆಡೆವ್‌ ಪರಾಭವ
Last Updated 6 ಜುಲೈ 2021, 15:06 IST
ಅಕ್ಷರ ಗಾತ್ರ

ಲಂಡನ್‌: ನಲವತ್ತರ ಅಂಚಿನ ಹರಯದಲ್ಲೂ ಉತ್ಸಾಹದ ಆಟವಾಡಿದ ರೋಜರ್ ಫೆಡರರ್ ಅವರು ವಿಂಬಲ್ಡನ್ ಟೂರ್ನಿಯ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. 1968ರಲ್ಲಿ ಆರಂಭವಾದ ‘ಮುಕ್ತ ಯುಗ’ದ ಟೆನಿಸ್‌ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಶ್ರೇಯ ಅವರದಾಗಿದೆ.

ಆಗಸ್ಟ್ 8ಕ್ಕೆ ತಮ್ಮ 40ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿರುವ ಸ್ವಿಟ್ಜರ್ಲೆಂಡ್ ದಿಗ್ಗಜ, 16ರ ಘಟ್ಟದ ಹಣಾಹಣಿಯಲ್ಲಿ ಮಂಗಳವಾರ ರಾತ್ರಿ 7–5, 6-4, 6-2ರಿಂದ ಇಟಲಿಯ ಲೊರೆಂಜೊ ಸೊನೆಗೊ ಅವರನ್ನು ಸೋಲಿಸಿದರು. ಇದರೊಂದಿಗೆ ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ 18ನೇ ಬಾರಿ ಕ್ವಾರ್ಟರ್‌ಫೈನಲ್ ತಲುಪಿದ ಹಿರಿಮೆ ಅವರದಾಯಿತು.

ಎಂಟು ಬಾರಿ ವಿಂಬಲ್ಡನ್ ಟ್ರೋಫಿ ವಿಜೇತ ಫೆಡರರ್ ಅವರಿಗೆ ಇದು ಒಟ್ಟಾರೆ 58ನೇ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್‌ಫೈನಲ್ ಪ್ರವೇಶ. ಎಂಟರ ಘಟ್ಟದಲ್ಲಿ ಅವರಿಗೆ ಪೋಲೆಂಡ್‌ನ ಹ್ಯುಬರ್ಟ್‌ ಹರ್ಕಜ್ ಸವಾಲು ಎದುರಾಗಿದೆ.‌

ಮಂಗಳವಾರ ನಡೆದ ಪಂದ್ಯದಲ್ಲಿ ಹ್ಯುಬರ್ಟ್‌ ಅವರು ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಡ್ಯಾನಿಲ್ ಮೆಡ್ವೆಡೆವ್ ಅವರ ಸವಾಲು ಮೀರಿದರು. ಸೋಮವಾರ ರಾತ್ರಿ ಆರಂಭವಾಗಿದ್ದ ಈ ಪಂದ್ಯವನ್ನು ಮಳೆಯಿಂದಾಗಿ ಸ್ಥಗಿತಗೊಳಿಸಿ ಮಂಗಳವಾರ ನಡೆಸಲಾಯಿತು. 24 ವರ್ಷದ ಹ್ಯುಬರ್ಟ್‌ 2-6, 7-6, 3-6, 6-3, 6-3ರಿಂದ ಮೆಡ್ವೆಡೆವ್ ಅವರಿಗೆ ಸೋಲುಣಿಸಿದರು. 14ನೇ ಶ್ರೇಯಾಂಕದ ಆಟಗಾರ, ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಮೊದಲ ಬಾರಿ ಎಂಟರಘಟ್ಟ ತಲುಪಿದರು.

ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ 16ರ ಘಟ್ಟದ ಇತರ ಹಣಾಹಣಿಗಳಲ್ಲಿ ಹಂಗರಿಯ ಮಾರ್ಟನ್ ಫುಕೊವಿಕ್ಸ್ 6-3, 4-6, 4-6, 6-0, 6-3ರಿಂದ ರಷ್ಯಾದ ಆ್ಯಂಡಿ ರುಬ್ಲೆವ್ ಎದುರು, ರಷ್ಯಾದ ಕರೆನ್ ಕಚನೊವ್ 3-6, 6-4, 6-3, 5-7, 10-8ರಿಂದ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಎದುರು, ಕೆನಡಾದ ಡೆನಿಸ್ ಶಪೊವಲೊವ್ 6-1, 6-3, 7-5ರಿಂದ ಸ್ಪೇನ್‌ನ ರಾಬರ್ಟ್‌ ಬೌಟಿಸ್ಟಾ ಅಗುಟ್ ಎದುರು ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು.

ನಾಲ್ಕರ ಘಟ್ಟಕ್ಕೆ ಪ್ಲಿಸ್ಕೊವಾ: ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ ಅವರು ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು. ಮಂಗಳವಾರ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ ಅವರು 6-2, 6-2ರಿಂದ ಸ್ವಿಟ್ಜರ್ಲೆಂಡ್‌ನ ವಿಕ್ಟೊರಿಯಾ ಗೋಲುಬಿಚ್ ಅವರನ್ನು ಮಣಿಸಿದರು.

ಇಲ್ಲಿ 13ನೇ ಶ್ರೇಯಾಂಕ ಪಡೆದಿರುವ ವಿಶ್ವದ ಮಾಜಿ ಅಗ್ರ ರ‍್ಯಾಂಕಿನ ಆಟಗಾರ್ತಿ, ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅಥವಾ ಟ್ಯೂನಿಷಿಯಾದ ಆನ್ಸ್ ಜಬೆವುರ್ ಅವರನ್ನು ಎದುರಿಸುವರು.

2016ರ ಅಮೆರಿಕ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದು ಪ್ಲಿಸ್ಕೊವಾ ಅವರ ಪ್ರಮುಖ ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT