ಗುರುವಾರ , ಜೂನ್ 30, 2022
25 °C
ಬೋಪಣ್ಣ ಜೋಡಿ ಎರಡನೇ ಸುತ್ತಿಗೆ

ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿ: ಸ್ವಿಟೊಲಿನಾಗೆ ಗೆಲುವಿನ ಸಿಹಿ

ಎಎಫ್‌ಪಿ/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಹಿನ್ನಡೆಯಿಂದ ಚೇತರಿಸಿಕೊಂಡು ಗೆಲುವು ದಾಖಲಿಸಿದ ಎಲಿನಾ ಸ್ವಿಟೊಲಿನಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ತಲುಪಿದರು. ಮಂಗಳವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಉಕ್ರೇನ್‌ನ ಆಟಗಾರ್ತಿ 6–2, 7–5ರಿಂದ ಫ್ರಾನ್ಸ್‌ನ ಒಸಿಯಾನೆ ಬಬೆಲ್‌ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದ ಸ್ವಿಟೊಲಿನಾ ಅವರಿಗೆ ಎರಡನೇ ಸೆಟ್‌ನಲ್ಲಿ ಒಸಿಯಾನೆ ಪ್ರಬಲ ಪೈಪೋಟಿ ನೀಡಿದರು. ಒಂದು ಹಂತದಲ್ಲಿ ಫ್ರಾನ್ಸ್‌ನ ಯುವ ಆಟಗಾರ್ತಿ 5–2ರ ಮುನ್ನಡೆಯಲ್ಲಿದ್ದರು. ಆದರೆ ತಮ್ಮೆಲ್ಲ ಸಾಮರ್ಥ್ಯ ಪಣಕ್ಕಿಟ್ಟ ಸ್ವಿಟೊಲಿನಾ ತಿರುಗೇಟು ನೀಡಿ ಸೆಟ್ ಹಾಗೂ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.

ಟೂರ್ನಿಯ ಮೂರು ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಸ್ವಿಟೊಲಿನಾ ಮುಂದಿನ ಪಂದ್ಯದಲ್ಲಿ ಅಮೆರಿಕದ ಆ್ಯನ್ ಲೀ ಅವರನ್ನು ಎದುರಿಸಲಿದ್ದಾರೆ. ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಲೀ ಮೊದಲ ಸುತ್ತಿನ ಪಂದ್ಯದಲ್ಲಿ 6–0, 6–1ರಿಂದ ಮಾರ್ಗರಿಟಾ ಗ್ಯಾಸ್ಪರಿನ್ ಅವರಿಗೆ ಸೋಲುಣಿಸಿದರು.

ಎರಡನೇ ಸುತ್ತಿಗೆ ಬೋಪಣ್ಣ–ಸುಗೊರ್‌: ಭಾರತದ ರೋಹನ್ ಬೋಪಣ್ಣ ಹಾಗೂ ಕ್ರೊವೇಷ್ಯಾದ ಫ್ರಾಂಕೊ ಸುಗೊರ್ ಜೋಡಿಯು ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮಂಗಳವಾರ ಎರಡನೇ ಸುತ್ತು ತಲುಪಿತು. ಮೊದಲ ಪಂದ್ಯದಲ್ಲಿ ಇವರಿಬ್ಬರು 6-4, 6-2ರಿಂದ ಜಾರ್ಜಿಯಾದ ನಿಕೊಲಾಜ್ ಬಾಶಿಲ್‌ಶ್ವಿಲಿ ಹಾಗೂ ಜರ್ಮನಿಯ ಆ್ಯಂಡ್ರೆ ಬೆಜೆಮನ್ ಅವರನ್ನು ಪರಾಭವಗೊಳಿಸಿದರು.

ಮುಂದಿನ ಸುತ್ತಿನಲ್ಲಿ ಭಾರತ–ಕ್ರೊವೇಷ್ಯಾ ಜೋಡಿಯು, ಅಮೆರಿಕದ ನಿಕೊಲಾಸ್‌ ಮೊನ್ರೊಯ್‌–ಫ್ರಾನ್ಸಿಸ್ ಟೈಪೊಯ್‌ ಮತ್ತು ಬ್ರೆಜಿಲ್‌ನ ಮಾರ್ಸೆಲೊ ಮೆಲೊ –ಪೋಲೆಂಡ್‌ನ ಲೂಕಾಸ್‌ ಕುಬೊಟ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಮೊದಲ ಸುತ್ತಿನ ಇತರ ಪಂದ್ಯಗಳ ಫಲಿತಾಂಶಗಳು: ಪುರುಷರು: ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್‌ಗೆ 6-4, 6-4, 2-6, 6-4ರಿಂದ ಉಗೊ ಹಂಬರ್ಟ್‌ ಎದುರು ಜಯ; ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್‌ಗೆ 6-2, 6-4, 7-6ರಿಂದ ಇಟಲಿಯ ಸ್ಟೆಫಾನೊ ಟ್ರಾವೆಗ್ಲಿಯಾ ವಿರುದ್ಧ ಜಯ; ಇಟಲಿಯ ಮಾರ್ಕೊ ಚೆಚಿನಾಟೊಗೆ 3-6, 6-1, 6-2, 6-4ರಿಂದ ಜಪಾನ್‌ನ ಯಸುಟಕಾ ಯುಚಿಯಾಮ ಎದುರು ಜಯ.

ಮಹಿಳೆಯರು: ಗ್ರೀಕ್‌ನ ಮರಿಯಾ ಸಕ್ಕಾರಿಗೆ 6-4, 6-1ರಿಂದ ಉಕ್ರೇನ್‌ನ ಕ್ಯಾತರಿನಾ ಜವಾತ್ಸಕಾ ಎದುರು, ಅಮೆರಿಕದ ಜೆನಿಫರ್ ಬ್ರಾಡಿ ಅವರಿಗೆ 6-3, 6-3ರಿಂದ ಲಾಟ್ವಿಯಾದ ಅನಸ್ತೇಸಿಯಾ ಸೆವಾತ್ಸೊವಾ ಎದುರು ಗೆಲುವು.

ಒಸಾಕಗೆ ಬೆಂಬಲ: ಮಾನಸಿಕ ಆರೋಗ್ಯದ ಕಾರಣ ನೀಡಿ ಸೋಮವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹಿಂದೆಸರಿದಿರುವ ಜಪಾನ್‌ನ ನವೊಮಿ ಒಸಾಕಾ ಅವರಿಗೆ ಪ್ರಮುಖ ಟೆನಿಸ್ ಪಟುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

‘ನವೊಮಿ ಕುರಿತು ಮರುಕವಿದೆ. ಎಲ್ಲರೂ ಒಂದೇ ತರಹ ಇರುವುದಿಲ್ಲ. ಈ ಘಟನೆಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವರ ವಿವೇಚನೆಗೆ ಬಿಡಬೇಕು. ಅವರು ಸೂಕ್ತವಾದುದನ್ನೇ ಮಾಡಿದ್ದಾರೆ‘ ಎಂದು ಅಮೆರಿಕದ ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ.

‘ಖಿನ್ನತೆಯೊಂದಿಗೆ ಹೆಣಗಾಡುತ್ತಿದ್ದನ್ನು ಹೇಳಿಕೊಂಡಿದ್ದು ಅವರ ಸ್ಥೈರ್ಯವನ್ನು ತೋರಿಸುತ್ತದೆ. ಅವರಿಗೆ ಒಂದಷ್ಟು ಸಮಯ ಬೇಕಾಗಿದೆ. ಒಳ್ಳೆದಾಗಲಿ‘ ಎಂದು ಬಿಲ್ಲಿ ಜೀನ್ ಕಿಂಗ್ ನುಡಿದಿದ್ದಾರೆ.

ಮಾರ್ಟಿನಾ ನವ್ರಾಟಿಲೊವಾ ಸೇರಿದಂತೆ ಹಲವು ಕ್ರೀಡಾಪಟುಗಳು ಒಸಾಕ ಅವರ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು